janadhvani

Kannada Online News Paper

ರೈತರ ಹತ್ಯೆ: ಅಮಿತ್ ಶಾ ರನ್ನು ಭೇಟಿಯಾದ ಅಜಯ್ ಮಿಶ್ರಾ

ಹೊಸದಿಲ್ಲಿ: ಉತ್ತರಪ್ರದೇಶದ ಲಖಿಂಪುರಖೇರಿ ಜಿಲ್ಲೆಯಲ್ಲಿ ಪ್ರತಿಭಟನಾನಿರತ ರೈತರ ಮೇಲೆ ತನ್ನ ಪುತ್ರ ಕಾರನ್ನು ಚಲಾಯಿಸಿದ ಆರೋಪವನ್ನು ಎದುರಿಸುತ್ತಿರುವ ನಡುವೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ಅವರು ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.

ಘಟನೆಗೆ ಸಂಬಂಧಿಸಿ ವಿಪಕ್ಷಗಳು ಅಜಯ್ ಮಿಶ್ರಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸುವಂತೆ ಆಗ್ರಹಿಸುತ್ತಿವೆ.

ಲಖಿಂಪುರ್ ಖೇರಿಯಲ್ಲಿ ರವಿವಾರ ಕಾರ್ಯಕ್ರಮಕ್ಕಾಗಿ ಅಜಯ್ ಮಿಶ್ರಾ ಭೇಟಿ ನೀಡಿದ ವೇಳೆ ನಡೆದ ಪ್ರತಿಭಟನೆಯ ವೇಳೆ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ.

ಸಚಿವರ ಬೆಂಗಾವಲಿನಲ್ಲಿದ್ದ ಕಾರೊಂದು ಪ್ರತಿಭಟನಾಕಾರರ ಮೇಲೆ ಹರಿದಿದೆ ಎಂದು ಆರೋಪಿಸಲಾಗಿದೆ. ಕಾರನ್ನು ಸಚಿವರ ಮಗ ಆಶಿಶ್ ಮಿಶ್ರಾ ಚಾಲನೆ ಮಾಡಿದ್ದಾನೆ ಎಂದು ರೈತರು ಆರೋಪಿಸಿದ್ದಾರೆ.

ಸಚಿವರು ಹಾಗೂ ಆಶಿಶ್ ಮಿಶ್ರಾ ಅವರು ತಾವು ಘಟನಾ ಸ್ಥಳದಲ್ಲಿ ಇರಲಿಲ್ಲ. ಘಟನೆಗೂ, ತಮಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಆದರೆ ರೈತರ ಮೇಲೆ ಹರಿದಿದ್ದ ಕಾರು ತಮ್ಮದ್ದೆಂದು ಒಪ್ಪಿಕೊಂಡಿದ್ದಾರೆ.

ಉತ್ತರಪ್ರದೇಶ ಪೊಲೀಸರು ಆಶೀಶ್ ಮಿಶ್ರಾ ವಿರುದ್ದ ಹತ್ಯೆ ಕೇಸನ್ನು ದಾಖಲಿಸಿಕೊಂಡಿದ್ದಾರೆ. ಆದರೆ ಈ ತನಕ ಆತನ ಬಂಧನವಾಗಿಲ್ಲ .

error: Content is protected !! Not allowed copy content from janadhvani.com