janadhvani

Kannada Online News Paper

ಇಸ್ಲಾಮೋಫೋಬಿಯಾವನ್ನು ನಿಲ್ಲಿಸಿ-ಎಐಎಸ್‍ಎ ರಾಜ್ಯ ಸಂಚಾಲಕ ಪಿ.ಎ. ದೇವಯ್ಯ

ಬೆಂಗಳೂರು, ಅ.5: ಬೆಳಗಾವಿಯಲ್ಲಿ ನಡೆದ ಮುಸ್ಲಿಂ ಯುವಕನ ಕೊಲೆ ದೇಶದಲ್ಲಿರುವ ಕೋಮುವಾದವನ್ನು ಪ್ರತಿಪಾದಿಸುತ್ತಿದೆ. ಸರಕಾರವು ಇಂತಹ ವಿಷಯಗಳ ಬಗ್ಗೆ ಕಾಲಹರಣ ಮಾಡುತ್ತಿರುವುದು ಖಂಡನೀಯ. ಇದು ಆಡಳಿತ ಪಕ್ಷದ ಕೀಳು ಸ್ವರೂಪವನ್ನು ಎತ್ತಿ ತೋರಿಸುತ್ತಿದೆ. ಅದಲ್ಲದೇ ಮುಸಾಲ್ಮಾನರ ಕುರಿತು ಇರುವ ಅಪಪ್ರಚಾರ(ಇಸ್ಲಾಮೋಫೋಬಿಯಾ)ವನ್ನು ನಿಲ್ಲಿಸಬೇಕು ಎಂದು ಎಐಎಸ್‍ಎ (ಅಖಿಲ ಭಾರತ ವಿದ್ಯಾರ್ಥಿ ಸಂಘ)ನ ರಾಜ್ಯ ಸಂಚಾಲಕ ಪಿ.ಎ. ದೇವಯ್ಯ ತಿಳಿಸಿದ್ದಾರೆ.

ಅರ್ಬಾಝ್ ಮುಲ್ಲ ಕೊಲೆಯನ್ನು ಖಂಡಿಸಿ, ಮಂಗಳವಾರ ಸಂಜೆ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಸಂಘದೊಂದಿಗೆ ಜೊತೆಗೂಡಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿದ್ದ ಮೇಣದಬತ್ತಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಏಳು ವರ್ಷಗಳಿಂದ ಶೇ.26ರಷ್ಟು ಕೋಮುವಾದಿ ಪ್ರಕರಣಗಳು ದೇಶದಲ್ಲಿ ನಡೆದಿವೆ. ಕೋಮುವಾದಿ ವಿಚಾರದಲ್ಲಿ ರಾಜ್ಯವು 5ನೇ ಸ್ಥಾನದಲ್ಲಿದೆ. ಹೀಗಿರುವಾಗಲೂ ಸರಕಾರವು ಕೋಮುಗಲಭೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆದುದರಿಂದಲೇ ಬೆಳಗಾವಿಯಲ್ಲಿ ಮತ್ತೊಂದು ಕೋಮುವಾದಿ ಕೊಲೆಯಾಗಿದೆ ಎಂದು ಅವರು ಆರೋಪಿಸಿದರು.

ಲಾ ಫೋರಂನ ಸದಸ್ಯ ವಿನಯ್ ಶ್ರೀನಿವಾಸ್ ಮಾತನಾಡಿ, ಸರಕಾರವು ದ್ವೇಷದ ವಾತಾವರಣ ಸೃಷ್ಟಿ ಮಾಡುತ್ತಿದೆ. ದೇಶದ ಪ್ರತಿಯೊಬ್ಬ ಪ್ರಜೆಯು ಬೆಳಗಾವಿಯ ಕೋಮುವಾದಿ ಕೊಲೆಯನ್ನು ವಿರೋಧಿಸಬೇಕು. ಅಪರಾಧಿಗಳಿಗೆ ಕಾನೂನಾತ್ಮಕ ಶಿಕ್ಷೆಯಾಗಬೇಕು. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪ್ರೀತಿಸುವ ಹಕ್ಕಿದೆ. ಅದನ್ನು ವಿರೋಧಿಸಿ ಕೊಲೆ ನಡೆದಿದೆ. ಕೇವಲ ಧರ್ಮದ ಹಿನ್ನೆಲೆಯಲ್ಲಿಯೇ ಕೊಲೆಯಾಗಿದೆ. ಇದಕ್ಕೆ ಸರಕಾರವು ಶೀಘ್ರವಾಗಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಹೇಳಿದರು.

ಕೇವಲ ಅನ್ಯ ಧರ್ಮದ ಯುವತಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಕೊಲೆ ಮಾಡಿರುವುದು ಪ್ರಜಾಪ್ರಭತ್ವದ ಕಗ್ಗೊಲೆಯಾಗಿದೆ. ರಾಮಸೇನೆಯ ಕಾರ್ಯಕರ್ತರೇ ತಪ್ಪೊಪ್ಪಿಕೊಂಡಿದ್ದರೂ ಸರಕಾರವು ಈ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಇಂತಹ ಹಿಂದುತ್ವ ರಾಜ್ಯ ನಮಗೆ ಬೇಕಾಗಿಲ್ಲ ಎಂದು ಅಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್‍ನ ವಕೀಲೆ ಅವನಿ ತಿಳಿಸಿದರು.

ಪ್ರತಿಭಟನೆಯಲ್ಲಿ ಕಿಶಾನ್, ಡಾ.ಶಿವ್ಯ, ಕ್ಯಾಪ್ಟನ್ ಮೋಹನ್ ರಾವ್, ಆಕಾಶ್ ಭಟ್ಟಾಚಾರ್ಯ, ಕೆಫೆನ್ ರೊಸಾನಿಯೋ ಮತ್ತಿತರರು ಉಪಸ್ಥಿತಿಯಲ್ಲಿದ್ದರು.

error: Content is protected !! Not allowed copy content from janadhvani.com