janadhvani

Kannada Online News Paper

ಸೌದಿ: ಭಾರತೀಯ ಕಾರ್ಮಿಕರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

ನವದೆಹಲಿ: ಸೌದಿ ಅರೇಬಿಯಾದ ಭಾರತೀಯ ಕಾರ್ಮಿಕರ ಸಂಖ್ಯೆಯಲ್ಲಿ ಆರು ಲಕ್ಷದಷ್ಟು ಕೊರತೆ ಕಂಡುಬಂದಿದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ತಿಳಿಸಿದೆ. ಕಾರ್ಮಿಕರ ಸಂಖ್ಯೆಯಲ್ಲಿನ ಕುಸಿತಕ್ಕೆ ಅಲ್ಲಿನ ಸ್ವದೇಶೀಕರಣ ಮತ್ತು ವಿವಿಧ ಶುಲ್ಕಗಳು ಕಾರಣ ಎನ್ನಲಾಗಿದೆ.

ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಭಾರತೀಯ ವಿದೇಶಾಂಗ ಸಹಸಚಿವ ಮುರಳೀಧರನ್ ನೀಡಿದ ಉತ್ತರದಲ್ಲಿ ಈ ಅಂಕಿಅಂಶಗಳನ್ನು ನೀಡಲಾಗಿದೆ. ವಿಶ್ವದಲ್ಲೇ ಅತಿ ಹೆಚ್ಚು ಭಾರತೀಯರಿರುವ ದೇಶವಾಗಿದೆ ಸೌದಿ. ಅಂಕಿಅಂಶಗಳ ಪ್ರಕಾರ ಅಲ್ಲಿರುವ ವಲಸಿಗರ ಜನಸಂಖ್ಯೆ 26 ಲಕ್ಷಕ್ಕೆ ಹತ್ತಿರದಲ್ಲಿದೆ.

2017ರ ಸೆಪ್ಟೆಂಬರ್‌ನಲ್ಲಿ, ಭಾರತೀಯರ ಜನಸಂಖ್ಯೆಯು ಮೂವತ್ತೆರಡುವರೆ ಲಕ್ಷವಾಗಿತ್ತು. ಮೂರು ವರ್ಷಗಳ ನಂತರ ಆರು ಲಕ್ಷದ ಕುಸಿತ ಕಂಡುಬಂದಿದೆ. ವಿಶ್ವದಾದ್ಯಂತ 203 ದೇಶಗಳಲ್ಲಿ ಭಾರತೀಯರು ಕೆಲಸ ಮಾಡುತ್ತಾರೆ ಎಂದು ಮುರಳೀಧರನ್ ಲೋಕಸಭೆಗೆ ಮಾಹಿತಿ ನೀಡಿದರು.

ಸೌದಿ ಅರೇಬಿಯಾದಲ್ಲಿ 25,94,947 ಭಾರತೀಯರಿದ್ದು, ಅಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತರಲಾಗಿದೆ. ವಿದೇಶಿ ಕಾರ್ಮಿಕರು ಮತ್ತು ಅವಲಂಬಿತರಿಗೆ ಲೆವಿ, ಉದ್ಯೋಗ ವಲಯದಲ್ಲಿ ಸ್ವದೇಶೀಕರಣ, ಮಹಿಳೆಯರ ಸಬಲೀಕರಣದಿಂದಾಗಿ ಉದ್ಯೋಗ ಕಳಕೊಂಡ ಅನೇಕರು ಊರಿಗೆ ಮರಳಿದ್ದಾರೆ. ಈ ಬದಲಾವಣೆ ಮೂರು ವರ್ಷಗಳಲ್ಲಿ ಕಂಡುಬಂದಿದ್ದು, ಭಾರತೀಯ ಕಾರ್ಮಿಕರ ಸಂಖ್ಯೆಯಲ್ಲಿ ತೀವ್ರ ಕುಸಿತಕ್ಕೆ ಇದು ಕಾರಣ ಎಂದು ಅಂದಾಜಿಸಲಾಗಿದೆ.

error: Content is protected !! Not allowed copy content from janadhvani.com