janadhvani

Kannada Online News Paper

ನವದೆಹಲಿ: ಇಡೀ ರಾಷ್ಟ್ರ ಕುತೂಹಲದಿಂದ ಎದುರು ನೋಡುತ್ತಿದ್ದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಪೂರ್ವ ಸಮೀಕ್ಷೆಗಳಂತೆ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಬಹುಮತ ಸಾಧಿಸಿ, ಮೂರನೇ ಬಾರಿಗೆ ಅಧಿಕಾರ ಹಿಡಿಯಲಿದೆ.

ಆಮ್ ಆದ್ಮಿ ಪಕ್ಷ 63, ಬಿಜೆಪಿ 7 ಸ್ಥಾನಗಳನ್ನು ಗಳಿಸಿ, ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿವೆ. ಕಾಂಗ್ರೆಸ್ ಸಾಧನೆ ಶೂನ್ಯವಾಗಿದೆ. ಪಕ್ಷ ಜಯಬೇರಿಯತ್ತ ಸಾಗುತ್ತಿರುವಂತೆ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೊಡಿಯಾ ಮತ್ತಿತರ ಗಣ್ಯರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದು, ಸಂಭ್ರಮಪಡುತ್ತಿದ್ದಾರೆ.

ದೆಹಲಿಯಲ್ಲಿ ಮೂರನೇ ಬಾರಿಗೆ ಅಧಿಕಾರ ಹಿಡಿಯುವತ್ತ ಹೆಜ್ಜೆ ಹಾಕಿರುವ ಆಮ್ ಆದ್ಮಿ ಪಕ್ಷ ಹಾಗೂ ಅರವಿಂದ್ ಕೇಜ್ರಿವಾಲ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ , ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ಮತ್ತಿತರರು ಶುಭ ಕೋರಿದ್ದಾರೆ.

ರಾಷ್ಟ್ರ ರಾಜಧಾನಿಯ 70 ಸ್ಥಾನಕ್ಕಾಗಿ ಫೆಬ್ರವರಿ 8 ರಂದು ನಡೆದಿದ್ದ ಚುನಾವಣೆಯಲ್ಲಿ ಶೇ. 67. 5 ರಷ್ಟು ಮತದಾನವಾಗಿತ್ತು. 593 ಪುರುಷರು ಹಾಗೂ 79 ಮಹಿಳೆಯರು ಸೇರಿದಂತೆ ಸುಮಾರು 670 ಅಭ್ಯರ್ಥಿಗಳ ರಾಜಕೀಯ ಅದೃಷ್ಟ ಇಂದು ನಿರ್ಧಾರವಾಗಲಿದೆ.

‘ಭಾರತ-ಪಾಕ್ ಹಣಾಹಣಿ’

ದಿಲ್ಲಿ ವಿಧಾನಸಭಾ ಚುನಾವಣೆಯನ್ನು ‘ಭಾರತ-ಪಾಕ್ ಹಣಾಹಣಿ’ಗೆ ಹೋಲಿಸಿ ಟ್ವೀಟ್ ಮಾಡಿದ್ದ ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾ ತೀವ್ರ ಮುಖಭಂಗ ಅನುಭವಿಸಿದ್ದಾರೆ. ಜತೆಗೆ ಅವರು ಜನವರಿ 23ರಂದು ಮಾಡಿದ ಟ್ವೀಟ್ ಅವರನ್ನು ಮತ್ತೆ ಕಾಡಲು ಆರಂಭಿಸಿದೆ. “ಫೆಬ್ರವರಿ 8ರಂದು ಭಾರತ ಮತ್ತು ಪಾಕಿಸ್ತಾನ ದಿಲ್ಲಿಯ ರಸ್ತೆಗಳಲ್ಲಿ ಸ್ಪರ್ಧಿಸಲಿದೆ” ಎಂದು ಮಿಶ್ರಾ ಹೇಳಿಕೊಂಡಿದ್ದರು.

ಇದನ್ನೇ ಆಧಾರವಾಗಿಟ್ಟುಕೊಂಡು ಹಲವು ಟ್ವಿಟರಿಗರು ಕಪಿಲ್ ಮಿಶ್ರಾ ಅವರ ಕಾಲೆಳೆದಿದ್ದಾರೆ.

ಭಾರತ-ಪಾಕ್ ಪಂದ್ಯದಲ್ಲಿ ಯಾರು ನಿಜವಾಗಿ ಗೆದ್ದರೆಂಬುದನ್ನೂ ಹಲವರು ಅವರಿಗೆ ನೆನಪಿಸಿದ್ದಾರೆ. ಒಬ್ಬರಂತೂ `ಪಾಕಿಸ್ತಾನ್ ಸೋತಿತು’ ಎಂದು ಟ್ವೀಟ್ ಮಾಡಿದರೆ ಇನ್ನೊಬ್ಬರು `ಭಾರತ ಗೆದ್ದಿತು’ ಎಂದಿದ್ದಾರೆ. ಇನ್ನೊಂದು ಟ್ವೀಟ್‍ನಲ್ಲಿ “ಭಾರತ ಸರಣಿಯನ್ನೇ ಗೆದ್ದಿದೆ ಎಂದು ಅಂದುಕೊಂಡಿದ್ದೇನೆ” ಎಂದು ಬರೆಯಲಾಗಿದೆ. ಇನ್ನೊಬ್ಬ ಟ್ವಿಟ್ಟರಿಗರು “ಭಾರತಕ್ಕೆ 10 ವಿಕೆಟ್ ಜಯ” ಎಂದು ಬಣ್ಣಿಸಿದ್ದಾರೆ.

ಅಷ್ಟಕ್ಕೂ ಸೋಮವಾರದ ತನಕ ಕಪಿಲ್ ಮಿಶ್ರಾ ದಿಲ್ಲಿಯಲ್ಲಿ ಬಿಜೆಪಿಯೇ ಸರಕಾರ ರಚಿಸುವುದು ಎಂದು ಹೇಳಿಕೊಂಡಿದ್ದರು.

error: Content is protected !!
%d bloggers like this: