ರೋಷನ್ ಪಕ್ಷದ ಮುಖಂಡರ ಕುರಿತ ಹೇಳಿಕೆ‌ ಸರಿಯಲ್ಲ- ಯು.ಟಿ.ಖಾದರ್

ನವದೆಹಲಿ: ‘ಕಾಂಗ್ರೆಸ್ ಹಿರಿಯ ಮುಖಂಡ ರೋಷನ್ ಬೇಗ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವ ಯು.ಟಿ. ಖಾದರ್, ಪಕ್ಷದ ಮುಖಂಡರ ಕುರಿತು ಬಹಿರಂಗ ಹೇಳಿಕೆ‌ ನೀಡುವುದು ಸರಿಯಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸಿದೆ’ ಎಂದರು. ಲೋಕಸಭೆ ಚುನಾವಣೆಯ ಸೀಟು ಹಂಚಿಕೆಯಲ್ಲೂ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿಲ್ಲ. ಕೇವಲ ಒಂದು ಕ್ಷೇತ್ರ ನೀಡುವುದಾಗಿ ಅಲ್ಪ ಸಂಖ್ಯಾತ ಮುಖಂಡರ ಸಲಹೆಯ ಮೇರೆಗೆ ಕಾಂಗ್ರೆಸ್ ನಿರ್ಧರಿಸಿತ್ತು. ಆದರೂ ಪಕ್ಷದ ಮುಖಂಡರನ್ನು ದೂಷಿಸುವುದು ಸರಿಯಲ್ಲ ಎಂದು ಖಾದರ್ ತಿಳಿಸಿದರು.

ದಿನೇಶ್ ಗುಂಡೂರಾವ್ ಉತ್ತಮ ಕೆಲಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲ ಜಾತಿ- ಜನರ ನಾಯಕರೂ ಹೌದು ಎಂದು ಅವರು ಒತ್ತಿ ಹೇಳಿದರು.

ರೋಷನ್ ಬೇಗ್‌ ಹಿರಿಯ ರಾಜಕಾರಣಿ. ಹಿರಿಯ ಮುಖಂಡರ ಕುರಿತು ಹೀಗೆ ಮಾತನಾಡುವುದು ಸರಿಯಲ್ಲ. ಅವರ ಹೇಳಿಕೆ ಕುರಿತು ಪಕ್ಷ ವು ಆಂತರಿಕ ಚರ್ಚೆ ನಡೆಸಲಿದೆ ಎಂದು ವಿವರಿಸಿದರು.

ಬೇಗ್ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದು ಬದಲಾಗಲೂಬಹುದು. ಆದರೂ ಅವರ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಆಗಿದೆ. ಬೇಗ್ ಅವರಿಗೆ ಬಿಜೆಪಿ ಮಾನಸಿಕ‌ ಕಿರುಕುಳ ನೀಡಿದಾಗ ಕಾಂಗ್ರೆಸ್ ರಕ್ಷಿಸಿದೆ. ಅದನ್ನು ಮರೆತು ಬಿಜೆಪಿ ಹೊಗಳುವುದು ಸೂಕ್ತವಲ್ಲ. ಇದನ್ನೆಲ್ಲ ನೆನಪಿಟ್ಟುಕೊಂಡಿರುವ ಅವರು ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!