janadhvani

Kannada Online News Paper

ಮತ ಎಣಿಕೆ ನಾಳೆ- ಮೊದಲ ಫಲಿತಾಂಶ ಮಧ್ಯಾಹ್ನ 3 ಗಂಟೆಗೆ

ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಮೊದಲ ಫಲಿತಾಂಶ ಗುರುವಾರ ಮಧ್ಯಾಹ್ನ 3 ಗಂಟೆಗೆ ಹೊರಬೀಳುವ ಸಾಧ್ಯತೆ ಇದೆ ಎಂದು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ತಿಳಿಸಿದರು.

28 ಲೋಕಸಭಾ ಕ್ಷೇತ್ರಗಳು ಮತ್ತು ಉಪಚುನಾವಣೆ ನಡೆದಿರುವ 2 ವಿಧಾನಸಭಾ ಕ್ಷೇತ್ರಗಳ ಮತಗಳ ಎಣಿಕೆ ಮೇ 23ರಂದು ನಡೆಯಲಿದ್ದು ಅದರ ಸಿದ್ಧತೆ ಕುರಿತು ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ವಿವರ ನೀಡಿದರು.

ಸುಪ್ರೀಂಕೋರ್ಟ್‌ ಸೂಚನೆಯ ಮೇರೆಗೆ ಈ ಬಾರಿ ಪ್ರತಿ ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ ಐದು ಮತಗಟ್ಟೆಗಳ ವಿವಿಪ್ಯಾಟ್‌ ಚೀಟಿಗಳನ್ನು ಎಣಿಕೆ ಮಾಡಿ ಇವಿಎಂ ಫಲಿತಾಂಶದ ಜತೆ ತಾಳೆ ಮಾಡಲಾಗುತ್ತದೆ. ಇದರಿಂದ ಫಲಿತಾಂಶ ಹೊರಬೀಳಲು ಸುಮಾರು 4 ಗಂಟೆಗಳಷ್ಟು ವಿಳಂಬವಾಗುತ್ತದೆ. ಇವಿಎಂ ಮತ ಎಣಿಕೆ ಬೇಗನೇ ಮುಗಿಯುತ್ತದೆ. ಬಳಿಕ ಪ್ರತಿ ಲೋಕಸಭಾ ಕ್ಷೇತ್ರದಲ್ಲಿ 40 ಮತಗಟ್ಟೆಗಳ ವಿವಿಪ್ಯಾಟ್‌ ಮತ ಖಾತರಿ ಚೀಟಿಗಳ ಎಣಿಕೆ ಮತ್ತು ತಾಳೆ ಪ್ರಕ್ರಿಯೆ ನಡೆಯುತ್ತದೆ. ಇದರಿಂದ ಫಲಿತಾಂಶ ಪ್ರಕಟ ವಿಳಂಬವಾಗುತ್ತದೆ ಎಂದು ತಿಳಿಸಿದರು.

ಸಂಜೆ 6 ಗಂಟೆಯ ವೇಳೆಗೆ ಬಹುತೇಕ ಕ್ಷೇತ್ರಗಳ ಫಲಿತಾಂಶ ಹೊರ ಬೀಳುತ್ತದೆ. ಒಟ್ಟು 18ರಿಂದ 33 ಸುತ್ತುಗಳ ಮತ ಎಣಿಕೆ ನಡೆಯುತ್ತದೆ. ಬೆಂಗಳೂರು ಉತ್ತರ ಮತ್ತು ಬೆಂಗಳೂರು ಕೇಂದ್ರದಂತಹ ದೊಡ್ಡ ಕ್ಷೇತ್ರಗಳಲ್ಲಿ 33 ಸುತ್ತುಗಳ ಮತ ಎಣಿಕೆ ನಡೆಯುತ್ತದೆ ಎಂದು ಸಂಜೀವ್‌ ಕುಮಾರ್‌ ಹೇಳಿದರು.

ಒಂದು ವೇಳೆ ಕಂಟ್ರೋಲ್‌ ಯುನಿಟ್‌ನಲ್ಲಿ ಮತಗಳು ಕಾಣಿಸದೇ ಇದ್ದರೆ, ಅದನ್ನು ಪ್ರತ್ಯೇಕವಾಗಿ ಇಟ್ಟು, ಕೊನೆಯಲ್ಲಿ ಮತ ಖಾತರಿ ಚೀಟಿಗಳನ್ನು ಎಣಿಕೆ ಮಾಡಲಾಗುವುದು. ಮಾನವ ಲೋಪದಿಂದ ಸಮಸ್ಯೆ ಉಂಟಾದರೂ ಮತ ಖಾತರಿ ಚೀಟಿಯನ್ನು ಎಣಿಕೆ ಮಾಡಲಾಗುವುದು ಎಂದರು.

ಮೊದಲಿಗೆ ಅಂಚೆ ಮತ ಎಣಿಕೆ: ಬೆಳಿಗ್ಗೆ 8ಕ್ಕೆ ಅಂಚೆ ಮತಗಳ ಎಣಿಕೆ ಆರಂಭವಾಗಲಿದೆ. ಎಲ್ಲ 28 ಕ್ಷೇತ್ರಗಳಲ್ಲಿ ಈವರೆಗೆ ಒಟ್ಟು 98,606 ಅಂಚೆ ಮತಗಳು ಬಂದಿವೆ. ಮತ ಎಣಿಕೆಗೂ ಮೊದಲು ಬರುವ ಅಂಚೆ ಮತವನ್ನು ಗಣನೆಗೆ ತೆಗೆದುಕೊಳ್ಳಲಾಗುವುದು. ಆ ಬಳಿಕ ಬಂದ ಅಂಚೆ ಮತಗಳನ್ನು ಎಣಿಕೆ ಮಾಡುವುದಿಲ್ಲ. ಒಂದು ಸುತ್ತಿನ ಮತ ಎಣಿಕೆಗೆ ಸುಮಾರು 45 ನಿಮಿಷಗಳು ಬೇಕಾಗುತ್ತದೆ ಎಂದರು.

error: Content is protected !! Not allowed copy content from janadhvani.com