janadhvani

Kannada Online News Paper

ಇವಿಎಂಗಳು ಭದ್ರ: ಚುನಾವಣಾ ಆಯೋಗ ಸ್ಪಷ್ಟನೆ

ಲಖನೌ: ಉತ್ತರಪ್ರದೇಶದಲ್ಲಿ ಬಿಜೆಪಿ ವಿದ್ಯುನ್ಮಾನ ಯಂತ್ರಗಳನ್ನು ಬದಲಿಸುವ ಸಾಧ್ಯತೆಗಳಿವೆ ಎಂಬ ವಿಪಕ್ಷಗಳ ಆರೋಪದ ಬೆನ್ನಲ್ಲೆ ಈ ಕುರಿತು ಸ್ಪಷ್ಟನೆ ನೀಡಿರುವ ಕೇಂದ್ರ ಚುನಾವಣಾ ಆಯೋಗ, ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳು ಸ್ಟ್ರಾಂಗ್ ರೂಂ ಗಳಲ್ಲಿ ಭದ್ರವಾಗಿದ್ದು, ನಿರಂತರ ಕಣ್ಗಾವಲಿನಲ್ಲಿದೆ ಎಂದಿದೆ.

ಪ್ರತಿ ಸ್ಟ್ರಾಂಗ್ ರೂಂ ನಲ್ಲಿಯೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಕೇಂದ್ರ ಅರೆ ಸೇನಾ ಪಡೆಯನ್ನು ನಿಯೋಜಿಸಲಾಗಿದೆ. ಅಭ್ಯರ್ಥಿಗಳು ಹಾಗೂ ಅವರ ಓರ್ವ ಏಜೆಂಟ್ ಗೆ ಸ್ಟ್ರಾಂಗ್ ರೂಂ ಮೇಲೆ ನಿರಂತರ ನಿಗಾ ಇಡಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಇವಿಎಂ ಹಾಗೂ ವಿವಿಪ್ಯಾಟ್ ಯಂತ್ರಗಳನ್ನು ಬದಲಿಸುವ ಆರೋಪಗಳು ಆಧಾರ ರಹಿತ ಎಂದು ಆಯೋಗ ಸ್ಪಷ್ಟನೆ ನೀಡಿದೆ.

ಗಾಜಿಯಾಪುರದಲ್ಲಿ ಅಭ್ಯರ್ಥಿಗೆ ಸ್ಟ್ರಾಂಗ್ ರೂಂ ಪರಿಶೀಲಿಸಲು ಅನುಮತಿ ನೀಡಿರಲಿಲ್ಲ. ನಂತರ,ಅದನ್ನು ಆಯೋಗದ ನಿರ್ದೇಶನದ ಹಿನ್ನೆಲೆಯಲ್ಲಿ ಬಗೆಹರಿಸಲಾಗಿದೆ. ಚಾಂಡೌಲಿಯಲ್ಲಿ ಕೆಲವರು ಅನವಶ್ಯಕ ಆರೋಪಗಳನ್ನು ಹೊರಿಸಿದ್ದರು. ದೋಮರಿಯಾಗಂಜ್ ನಲ್ಲಿ ಇವಿಎಂ ಗಳಿಗೆ ಸೂಕ್ತ ಭದ್ರತೆ ಒದಗಿಸಲಾಗಿದೆ, ಜನರು ಅನವಶ್ಯಕ ಪ್ರತಿಭಟನೆ ನಡೆಸಿದ್ದಾರೆ.ನಂತರ, ಪೊಲೀಸರು ಅವರ ಮನವೊಲಿಸಿದ್ದಾರೆ ಎಂದು ಆಯೋಗ ವಿವರ ನೀಡಿದೆ.

ಉತ್ತರಪ್ರದೇಶದಲ್ಲಿ ಕೊನೆಯ ಹಂತದ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ, ವಿಪಕ್ಷಗಳು ಇವಿಎಂ ಯಂತ್ರಗಳನ್ನು ಬದಲಿಸಲಾಗಿದೆ ಎಂಬ ಆರೋಪ ಹೊರಿಸಿದ್ದವು. ಇದರ ಬೆನ್ನಲ್ಲೇ ಎಲ್ಲಾ ವಿಪಕ್ಷಗಳು ತಮ್ಮ ಕಾರ್ಯಕರ್ತರಿಗೆ ಸ್ಟ್ರಾಂಗ್ ರೂಂ ಮೇಲೆ ನಿಗಾ ಇಡುವಂತೆ ಸಲಹೆ ನೀಡಿದ್ದವು.
ಗಾಜಿಯಾಪುರದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟದ ಅಭ್ಯರ್ಥಿ ಅಫ್ಜಲ್ ಅನ್ಸಾರಿ ಪ್ರತಿಭಟನೆ ನಡೆಸಿ, ಇಬ್ಬರು ಬಿಎಸ್ಪಿ ಕಾರ್ಯಕರ್ತರಿಗೆ ಸ್ಟ್ರಾಂಗ್ ರೂಂ ಮೇಲೆ ನಿಗಾ ವಹಿಸಲು ಅವಕಾಶ ಕಲ್ಪಿಸಬೇಕು. ಜಿಲ್ಲಾಧಿಕಾರ ವಿದ್ಯುನ್ಮಾನ ಯಂತ್ರಗಳಿಗೆ ಸೂಕ್ತ ಭದ್ರತೆ ಒದಗಿಸುವ ಭರವಸೆ ನೀಡದಿದ್ದಲ್ಲಿ, ತಾವೇ ಅದರ ಭದ್ರತೆಯ ಹೊಣೆ ಹೊರುವುದಾಗಿ ಎಚ್ಚರಿಸಿದ್ದರು.

ಕೆಲವೆಡೆ, ಮತಗಟ್ಟೆಗಳಲ್ಲಿದ್ದ ಹೆಚ್ಚುವರಿ ವಿದ್ಯುನ್ಮಾನ ಯಂತ್ರಗಳನ್ನು ತಡವಾಗಿ ಸ್ಟ್ರಾಂಗ್ ರೂಂಗಳಿಗೆ ಸಾಗಿಸಲಾಗಿದೆ. ಇದು ಗೊಂದಲಗಳಿಗೆ ಕಾರಣವಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಈ ನಡುವೆ, ಪೂರ್ವ ಉತ್ತರಪ್ರದೇಶದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಕಾರ್ಯಕರ್ತರಿಗೆ ಮೌಖಿಕ ಸಂದೇಶ ರವಾನಿಸಿದ್ದು, ಚುನಾವಣೋತ್ತರ ಸಮೀಕ್ಷೆಯಿಂದ ವಿಚಲಿತರಾಗಬೇಡಿ. ನಿಮ್ಮನ್ನು ಕುಗ್ಗಿಸಲು ಇಂತಹ ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಸ್ಟ್ರಾಂಗ್ ರೂಂ ಹಾಗೂ ಮತ ಎಣಿಕೆ ಕೇಂದ್ರದ ಮೇಲೆ ತೀವ್ರ ನಿಗಾ ಇಡಿ. ನಮ್ಮ ಪರಿಶ್ರಮ ವ್ಯರ್ಥವಾಗುವುದಿಲ್ಲ ಎಂದು ದೃಢ ನಂಬಿಕೆ ತಮಗಿದೆ ಎಂದಿದ್ದಾರೆ.

error: Content is protected !! Not allowed copy content from janadhvani.com