janadhvani

Kannada Online News Paper

ರಾಮ ದೇವರಲ್ಲ- ಪ್ರೊ.ಭಗವಾನ್ ಕೃತಿಯಲ್ಲಿ ವಿವಾದಿತ ಉಲ್ಲೇಖ

ಮೈಸೂರು: ‘ರಾಮ ಮದ್ಯಪಾನ ಮಾಡುತ್ತಿದ್ದ’ ಎಂದು ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಅವರು ಈಚೆಗೆ ಪ್ರಕಟಿಸಿದ ‘ರಾಮ ಮಂದಿರ ಏಕೆ ಬೇಡ?’ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ.
ರಾಮಾಯಣದ ಉತ್ತರಕಾಂಡದ 42ನೇ ಸರ್ಗದ ಶ್ಲೋಕಗಳನ್ನು ಇದಕ್ಕೆ ಪೂರಕವಾಗಿ ಉದಾಹರಿಸಿದ್ದಾರೆ.

‘ಸೀತಾಮಾದಾಯ ಹಸ್ತೇನ ಮಧು ಮೈರೇಯಕಂ’ ಎಂಬ ಶ್ಲೋಕವಿದ್ದು, ಇದರ ಅರ್ಥ ‘ಸೀತೆಯ ಜತೆ ಮಧು ಮೈರೇಯಕಂ ಎಂಬ ಮದ್ಯಪಾನ ಮಾಡುತ್ತಿದ್ದನು, ಮಾಂಸ ತಿನ್ನುತ್ತಿದ್ದನು. ನೃತ್ಯ ಗೀತೆಗಳಲ್ಲಿ ಪರಿಣತರಾದ ಹುಡುಗಿಯರೂ, ವನಿತೆಯರೂ ಪಾನಮತ್ತರಾಗಿ ರಾಮನ ಎದುರಿಗೆ ನರ್ತಿಸಿದರು. ಧರ್ಮವಂತ ವಿನೋದಪ್ರಿಯ ಪರಮಭೂಷಿತನಾದ ರಾಮ ಆ ಸ್ತ್ರೀಯರನ್ನು ಸಂತೋಷಪಡಿಸಿದನು’ ಎಂದು ಭಗವಾನ್ ಅರ್ಥೈಸಿದ್ದಾರೆ. (ಪುಟ ಸಂಖ್ಯೆ 101).
“ಶ್ರೀರಾಮ ದೇವರೆ ಅಲ್ಲ ಕೊಲೆಗಡುಕ” ಎಂದು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ರಾಮ ಸತ್ಯವಂತನೂ ಅಲ್ಲ, ವೀರನೂ ಅಲ್ಲ. ರಾಮ ಸೀತೆಯ ಜೊತೆ ಮಧು ಮೈರೇಯಕಂ ಎಂಬ ಮದ್ಯಪಾನ ಮಾಡುತ್ತಿದ್ದನು, ಮಾಂಸ ತಿನ್ನುತ್ತಿದ್ದನು. ರಾಮ ಮದಿರೆ ಮಾನಿನಿಯರಲ್ಲಿ ಮೈ ಮರೆಯುತ್ತಿದ್ದನು‌. ಅವನು ರಾಜ್ಯಭಾರ ಮಾಡುತ್ತಿರಲಿಲ್ಲ ಬದಲಿಗೆ ಅವನು ತಮ್ಮ ಭರತ ರಾಜ್ಯವಾಳುತ್ತಿದ್ದ ಎಂದು ಬರೆದಿದ್ದಾರೆ.

ಪುಸ್ತಕದಲ್ಲಿ ನನ್ನ ಅಭಿಪ್ರಾಯ ಏನೂ ಇಲ್ಲ; ಭಗವಾನ್​ ಸ್ಪಷ್ಟನೆ:
ಶ್ರೀರಾಮನ ಬಗ್ಗೆ ಉಲ್ಲೇಖಿಸಿರುವ ಹೇಳಿಕೆ ವಿವಾದಾತ್ಮಕ ಸ್ವರೂಪ ಪಡೆಯುತ್ತಿದ್ದಂತೆ, ಪ್ರೊ.ಕೆ.ಎಸ್​.ಭಗವಾನ್ ಈ ಕುರಿತು​ ಸ್ಪಷ್ಟನೆ ನೀಡಿದ್ದಾರೆ. ನನ್ನ ಅಭಿಪ್ರಾಯದಲ್ಲಿ ರಾಮಾಯಣದ ಅಂಶ ಬಹಿರಂಗಪಡಿಸಿದ್ದೇನೆ. ನನ್ನ ಪ್ರತಿಯೊಂದು ಮಾತನ್ನು ಸಮಗ್ರವಾಗಿ ಚಿತ್ರಿಸಿದ್ದೇನೆ. ಬುದ್ದ ಗುರು ಹೇಳಿದರೂ ನನ್ನ ಮಾತು ನಂಬಬೇಡಿ. ಅದು ನನ್ನ ವೈಯಕ್ತಿಕ ಮಾತು ಎಂದು ಹೇಳಿದ್ದಾರೆ.

ಹಿಂದೂ ಧರ್ಮದಲ್ಲಿ ಭಯಂಕರವಾದ ಮತಾಂಧತೆ ಇದೆ. ಬುದ್ಧ ಧರ್ಮ ಬಹಳ ಹೆಮ್ಮೆಯ ಧರ್ಮ. ಸ್ವಾಮಿ ವಿವೇಕಾನಂದರೇ ಬುದ್ಧನ ಬಗ್ಗೆ ಹೇಳಿದ್ದಾರೆ. ರಾಮ ಹೇಗೆ ಬೈಯುತ್ತಾನೆ ಎಂದು ಗೊತ್ತಾ ನಿಮಗೆ.? ಬುದ್ಧನನ್ನ ರಾಮ ಬ್ರಾಹ್ಮಣರ ಬಾಯಲ್ಲಿ ಕಳ್ಳನೆಂದು ಹೇಳಿಸಿದ್ದಾರೆ. ಯಾರು ಜನಿವಾರ ಹಾಕಿಕೊಳ್ಳುವುದಿಲ್ಲವೂ ಅವರು ಶೂದ್ರರು. ನನ್ನ ಪುಸ್ತಕದಲ್ಲಿ ಬರೆದಿರೋದು ವಾಲ್ಮೀಕಿ ರಾಮಾಯಣ ಮಾತ್ರ. ಇದರಲ್ಲಿ ನನ್ನ ಅಭಿಪ್ರಾಯ ಏನು ಇಲ್ಲ ಎಂದು ಹೇಳಿದ್ದಾರೆ.

ಜನ ಬಹುವರ್ಷಗಳಿಂದ ರಾಮಾಯಣದ ತಪ್ಪು ವ್ಯಾಖ್ಯಾನಗಳನ್ನು ನಂಬಿಕೊಂಡು ಬಂದಿದ್ದಾರೆ. ವಾಲ್ಮೀಕಿ ಪ್ರಕಾರ ರಾಮ ಶ್ರೇಷ್ಠ ಅಲ್ಲ. ಸೀತೆ ಮಾತ್ರ ಶ್ರೇಷ್ಠಳು.ಈ ವಿಚಾರಗಳನ್ನು ನಾನು ಪುಸ್ತಕದಲ್ಲಿ ಸರಿಯಾಗಿ ವ್ಯಾಖ್ಯಾನಿಸಿದ್ದೇನೆ.  ನಾನು‌ ರಾಮನನ್ನು ಅವಹೇಳನ ಮಾಡಿಲ್ಲ. ವಾಲ್ಮೀಕಿ ಬರೆದಿರುವ ರಾಮಾಯಣವನ್ನ ಸರಿಯಾಗಿ ವ್ಯಾಖ್ಯಾನಿಸಿದ್ದೇನೆ. ಶ್ರೀರಾಮ ಸೀತೆಗೆ ಮದ್ಯ ಕುಡಿಸುತ್ತಿದ್ದ. ಸ್ತ್ರೀಯರೊಂದಿಗೆ ಕಾಲ ಕಳೆಯುತ್ತಿದ್ದ ಎಂದು ವಾಲ್ಮೀಕಿ ಉಲ್ಲೇಖಿಸಿದ್ದಾರೆ. ಅದನ್ನು ನಾನು ವಿವರಿಸಿದ್ದೇನೆ.
ಇದರಲ್ಲಿ ತಪ್ಪೇನಿದೆ‌. ಹಿಂದೂ ದೇವತೆಗಳಲ್ಲೆ ಕಲ್ಲು. ಇದನ್ನು ನಾನೂ ಹಿಂದಿನಿಂದಲು ಹೇಳಿಕೊಂಡು ಬಂದಿದ್ದೇನೆ. ಚಾತುರ್ವರ್ಣ ವ್ಯವಸ್ಥೆಯನ್ನು ಜೀವಂತವಾಗಿಟ್ಟುಕೊಳ್ಳುವ ಸಲುವಾಗಿ ರಾಮನನ್ನು ದೇವರು ಅಂತಾ ಬಿಂಬಿಸಲಾಗಿದೆ. ಬೇರೆ ಧರ್ಮದಲ್ಲಿ ಮೌಢ್ಯ ಕಂದಾಚಾರವಿದೆ.  ಆದರೆ ಹಿಂದೂ ಧರ್ಮದಲ್ಲಿರುವ ರೀತಿಯ ಅಸಮಾನತೆ ಬೇರೆ ಎಲ್ಲಿಯೂ ಇಲ್ಲ ಎಂದಿದ್ದಾರೆ.

error: Content is protected !! Not allowed copy content from janadhvani.com