janadhvani

Kannada Online News Paper

UPI ಆನ್‌ಲೈನ್ ನಗದು ವಹಿವಾಟಿನ ಪ್ರತಿ ದಿನದ ಮಿತಿ ಎಷ್ಟು ಗೊತ್ತೇ?- ಇಲ್ಲಿದೆ ಸಂಪೂರ್ಣ ಮಾಹಿತಿ

ಕೆನರಾ ಬ್ಯಾಂಕ್‌ನಲ್ಲಿ ದಿನದ ಮಿತಿ ಕೇವಲ 25,000 ರೂ.ಗಳಾಗಿದ್ದರೆ ಎಸ್‌ಬಿಐನಲ್ಲಿ ದಿನದ ಮಿತಿ 1 ಲಕ್ಷ ರೂ.

ಡಿಜಿಟಲ್ ನಗದು ಯುಗದಲ್ಲಿ, ಈಗ ಜನರು ನಗದು ಬದಲಿಗೆ ಆನ್‌ಲೈನ್ ವಹಿವಾಟುಗಳನ್ನು ಮಾಡಲು ಬಯಸುತ್ತಾರೆ. ದೇಶಗಳಲ್ಲಿ ಆನ್‌ಲೈನ್ ವಹಿವಾಟುಗಳು ವೇಗವಾಗಿ ಹೆಚ್ಚುತ್ತಿವೆ. ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (UPI) ನಗದು ವಹಿವಾಟನ್ನು ಸುಲಭಗೊಳಿಸಿದೆ. ನೀವು ಎಲ್ಲಿಯೇ ಕೂತು ಯುಪಿಐ ಐಡಿ (UPI Id) ಬಳಸಿಕೊಂಡು ವಹಿವಾಟು ನಡೆಸಲು ಸಾಧ್ಯವಾಗಲಿದೆ. ಯಾರಿಗೂ ಹಣವನ್ನು ಕಳುಹಿಸಬಹುದು, ಹಣವನ್ನು ಪಡೆಯಬಹುದು. ಆದರೆ ಈಗ ವಹಿವಾಟಿಗೆ ಮಿತಿಯನ್ನು ಹೇರಲಾಗಿದೆ.

ನಾವು ಪ್ರತಿ ದಿನ ದಿನಸಿಯನ್ನು ಖರೀದಿ ಮಾಡುವುದರಿಂದ ಹಿಡಿದು, ಬಿಲ್‌ಗಳನ್ನು ಪಾವತಿ ಮಾಡುವವರೆಗೆ ಎಲ್ಲದಕ್ಕೂ ಯುಪಿಐ ವಹಿವಾಟನ್ನೇ ನಡೆಸುತ್ತೇವೆ. ಕೈಯಲ್ಲಿ ನಗದನ್ನು ಹಿಡಿದುಕೊಳ್ಳುವುದನ್ನೇ ಎಷ್ಟೋ ಮಂದಿ ಮರೆತಿದ್ದೇವೆ.

National Payment Corporation of India (NPCI) ಮಾರ್ಗಸೂಚಿಗಳ ಪ್ರಕಾರ, ನೀವು Unified Payments Interface (UPI) ಮೂಲಕ ಒಂದು ದಿನದಲ್ಲಿ 1 ಲಕ್ಷದವರೆಗಿನ ವಹಿವಾಟುಗಳನ್ನು ಮಾಡಬಹುದು. ಈ ಮಿತಿಯು ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗಬಹುದು. ಕೆನರಾ ಬ್ಯಾಂಕ್‌ನಲ್ಲಿ ದಿನದ ಮಿತಿ ಕೇವಲ 25,000 ರೂ.ಗಳಾಗಿದ್ದರೆ ಎಸ್‌ಬಿಐನಲ್ಲಿ ದಿನದ ಮಿತಿ 1 ಲಕ್ಷ ರೂ. ಹಣ ವರ್ಗಾವಣೆ ಮಿತಿಯ ಜೊತೆಗೆ, ಒಂದು ದಿನದಲ್ಲಿ ಮಾಡಬಹುದಾದ UPI ವರ್ಗಾವಣೆಗಳ ಸಂಖ್ಯೆಯ ಮೇಲೆ ಮಿತಿ ಇದೆ.

ನಾವು ಸಾಮಾನ್ಯವಾಗಿ ಗೂಗಲ್ ಪೇ(Gpay), ಪೇಟಿಎಂ(Paytm), ಫೋನ್‌ಪೇ(Phonepe) ಯನ್ನು ಯುಪಿಐ ವಹಿವಾಟಿಗೆ ಬಳಕೆ ಮಾಡುತ್ತೇವೆ. ಹಾಗಾದರೆ ಈ ಪ್ಲಾಟ್‌ಫಾರ್ಮ್‌ಗಳಲ್ಲಿ ಎಷ್ಟು ಮೊತ್ತದ ವಹಿವಾಟು ನಡೆಸಲು ಸಾಧ್ಯವಾಗಲಿದೆ, ಮಿತಿ ಎಷ್ಟಿದೆ ಎಂಬ ಬಗ್ಗೆ ಇಲ್ಲಿದೆ ವಿವರ.

Paytm-ಪೇಟಿಎಂ ವಹಿವಾಟು ಮಿತಿ
ಪೇಟಿಎಂ ಪ್ಲಾಟ್‌ಫಾರ್ಮ್ ಮೂಲಕ ದಿನದಲ್ಲಿ 1 ಲಕ್ಷ ರೂಪಾಯಿ ವಹಿವಾಟು ನಡೆಸಬಹುದು. ಹಾಗೆಯೇ ಎರಡು ಗಂಟೆಯಲ್ಲಿ ಸುಮಾರು 20 ಸಾವಿರ ರೂಪಾಯಿಗಳ ವಹಿವಾಟನ್ನು ನಡೆಸಲು ಪೇಟಿಎಂ ಅವಕಾಶ ನೀಡುತ್ತದೆ. ಪ್ರತಿ ಗಂಟೆಗೆ ಐದು ವಹಿವಾಟನ್ನು ನಡೆಸಲು ಮಾತ್ರ ಅವಕಾಶವಿದೆ. ಹಾಗೆಯೇ ಪೇಟಿಎಂ ಯುಪಿಐ ಮೂಲಕ ದಿನಕ್ಕೆ 20 ವಹಿವಾಟನ್ನು ನಡೆಸಲು ಮಾತ್ರ ಸಾಧ್ಯವಾಗಲಿದೆ. ಆದರೆ ಇದು ನಿಮ್ಮ ಬ್ಯಾಂಕ್ ಯಾವುದು ಎಂಬುವುದರ ಮೇಲೆಯೂ ನಿರ್ಧರಿತವಾಗಿರುತ್ತದೆ.

Phonepe – ಫೋನ್‌ಪೇ ವಹಿವಾಟು ಮಿತಿ
ಫೋನ್‌ಪೇ ಪ್ರತಿ ದಿನಕ್ಕೆ ಸುಮಾರು 1 ಲಕ್ಷ ರೂಪಾಯಿ ಯುಪಿಐ ವಹಿವಾಟು ನಡೆಸಲು ಅವಕಾಶ ನೀಡುತ್ತದೆ. ಇದು ಕೂಡಾ ನೀವು ಯಾವ ಬ್ಯಾಂಕ್‌ನ ಖಾತೆಯನ್ನು ಹೊಂದಿದ್ದೀರಿ ಎಂಬುವುದರ ಮೇಲೆ ಅವಲಂಭಿತವಾಗಿರುತ್ತದೆ. ಪ್ರಸ್ತುತ ಫೋನ್‌ಪೇ ಆಪ್‌ನಲ್ಲಿ ದಿನದ ಗರಿಷ್ಠ ವಹಿವಾಟು ಮಿತಿ 10 ಅಥವಾ 20 ಆಗಿದೆ. ಆದರೆ ಫೋನ್‌ಪೇನಲ್ಲಿ ಗಂಟೆಗೆ ಇಷ್ಟೇ ವಹಿವಾಟು ನಡೆಸಲು ಸಾಧ್ಯ ಎಂಬ ಮಿತಿಯಿಲ್ಲ.

Gpay-ಗೂಗಲ್‌ಪೇ ವಹಿವಾಟು ಮಿತಿ
ಗೂಗಲ್‌ಪೇನಲ್ಲಿ 1 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವನ್ನು ಒಂದು ದಿನದಲ್ಲಿ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಯುಪಿಐ ಆಪ್‌ನಲ್ಲಿ ದೈನಂದಿನ ವಹಿವಾಟು ಮಿತಿ 1 ಲಕ್ಷ ರೂಪಾಯಿ ಆಗಿದೆ. ಪ್ರತಿ ದಿನಕ್ಕೆ ಎಷ್ಟು ವಹಿವಾಟು ಮಾಡಲು ಸಾಧ್ಯ ಎಂಬುವುದಕ್ಕೂ ಮಾನದಂಡಗಳು ಇದೆ. ಗೂಗಲ್ ಪೇ ಮೂಲಕ ದಿನಕ್ಕೆ 10 ವಹಿವಾಟುಗಳನ್ನು ಮಾತ್ರ ನಡೆಸಲು ಸಾಧ್ಯವಾಗುತ್ತದೆ. ಆದರೆ ಗಂಟೆಯ ವಹಿವಾಟು ಮಿತಿ ಗೂಗಲ್‌ಪೇನಲ್ಲಿ ಇಲ್ಲ.

Amazon Pay – ಅಮೆಜಾನ್ ಪೇ ವಹಿವಾಟು ಮಿತಿ
ಗೂಗಲ್‌ಪೇನಂತೆಯೇ ಅಮೆಜಾನ್ ಪೇನಲ್ಲಿಯೂ 1 ಲಕ್ಷ ರೂಪಾಯಿಗಿಂತ ಅಧಿಕ ಮೊತ್ತವನ್ನು ಒಂದು ದಿನದಲ್ಲಿ ವರ್ಗಾವಣೆ ಮಾಡಲು ಸಾಧ್ಯವಾಗುವುದಿಲ್ಲ. ಅಮೆಜಾನ್ ಪೇ ದೈನಂದಿನ ವಹಿವಾಟು ಮಿತಿ 1 ಲಕ್ಷ ರೂಪಾಯಿ ಆಗಿದೆ. ನೀವು ಅಮೆಜಾನ್ ಪೇ ಗೆ ಹೊಸದಾಗಿ ಸೇರ್ಪಡೆಯಾದ 24 ಗಂಟೆಯಲ್ಲಿ 5 ಸಾವಿರ ರೂಪಾಯಿಯ ವಹಿವಾಟು ನಡೆಸಲು ಮಾತ್ರ ಅವಕಾಶ ನೀಡಲಾಗುತ್ತದೆ.

error: Content is protected !! Not allowed copy content from janadhvani.com