ಕೋಝಿಕ್ಕೋಡ್ | ಭಾರತದ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರು ಸದಾ ಮಾನವೀಯತೆಯ ಪರವಾಗಿದ್ದಾರೆ ಎಂದು ಭಾರತದಲ್ಲಿನ ಫೆಲೆಸ್ತೀನ್ ರಾಯಭಾರಿ ಅದ್ನಾನ್ ಅಬುಲ್ ಹೈಜಾ ಹೇಳಿದರು. ಕಾರಂದೂರು ಮರ್ಕಝ್ ನಲ್ಲಿ ಕಾಂತಪುರಂ ಉಸ್ತಾದರನ್ನು ಭೇಟಿ ಮಾಡಲು ಆಗಮಿಸಿದ ಅವರು, ಸಮಾಲೋಚನೆ ಬಳಿಕ ಮರ್ಕಝ್ ದಿವಾನ್ ಸಂಕೀರ್ಣದಲ್ಲಿ ಸಿರಾಜ್‌ಲೈವ್ ಸಂಪಾದಕ ಪ್ರಭಾರಿ ಸಯ್ಯಿದ್ ಅಲಿ ಶಿಹಾಬ್ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದರು.
ಕೇರಳಕ್ಕೆ ಭೇಟಿ ನೀಡಿದಾಗ ಮಹಾನ್ ವ್ಯಕ್ತಿ ಶೈಖ್ ಅಬೂಬಕರ್ ಅವರನ್ನು ಭೇಟಿ ಮಾಡುವುದು ನನ್ನ ಪಾಲಿಗೆ ಬಹಳ ಮುಖ್ಯವಾಗಿದೆ. ಅವರು ಸರಿಯಾದ ಮನೋಭಾವ ಮತ್ತು ಮಾನವೀಯತೆಯ ಮೇರು ವ್ಯಕ್ತಿತ್ವ ಹೊಂದಿರುವ ನೈಜ ಮನುಷ್ಯ. ಅವರು ಇಸ್ರೇಲಿ ಅಪರಾಧಗಳ ವಿರುದ್ಧವಾಗಿದ್ದು,ಸದಾ ಮಾನವೀಯ ಕಡೆಯಿಂದ ಮಾತನಾಡುತ್ತಾರೆ ಎಂದು ಹೇಳಿದರು.
ಪ್ಯಾಲೆಸ್ತೀನ್‌ನಲ್ಲಿ ಏನಾಗುತ್ತಿದೆ ಮತ್ತು ಪ್ಯಾಲೇಸ್ಟಿನಿಯನ್ ಜನರು ಈ ಆಕ್ರಮಣವನ್ನು ಹೇಗೆ ಎದುರಿಸುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಬಲ್ಲವರಾಗಿದ್ದಾರೆ ಶೈಖ್ ಅಬೂಬಕರ್. ಹಾಗಾಗಿ ಈ ಮಹಾನ್ ವ್ಯಕ್ತಿಯನ್ನು ಭೇಟಿ ಮಾಡುವುದು ಮತ್ತು ಅವರೊಂದಿಗೆ ಕೆಲವು ವಿಷಯಗಳನ್ನು ಚರ್ಚಿಸುವುದು ನನಗೆ ಬಹಳ ಮುಖ್ಯವಾಗಿದೆ – ಅದ್ನಾನ್ ಅಬುಲ್ ಹೈಜಾ ಸ್ಪಷ್ಟಪಡಿಸಿದರು.
ಪ್ಯಾಲೆಸ್ತೀನ್ ರಾಯಭಾರಿಯಾಗಿ ನಾನು ಭಾರತದಲ್ಲಿದ್ದೇನೆ ಮತ್ತು ಭಾರತವು ನನ್ನ ಎರಡನೇ ಮನೆಯಾಗಿದೆ ಎಂದು ಹೇಳಿದರು. ಕೇರಳಕ್ಕೆ ಆಗಮಿಸಿದಾಗ ಕೇರಳ ನನ್ನ ಮನೆಯಂತೆ ಭಾಸವಾಗುತ್ತಿದೆ ಎಂದರು.
ಕಾಂತಪುರಂ ಅವರ ಹಿಂದಿನ ಭೇಟಿಯ ಸಂದರ್ಭದಲ್ಲಿ ಪ್ಯಾಲೆಸ್ತೀನ್‌ಗೆ ಬೆಂಬಲ ನೀಡಿದ ಕೇರಳದ ಜನರಿಗೆ ಅವರು ಧನ್ಯವಾದಗಳನ್ನು ಅರ್ಪಿಸಿದರು. ಕೇರಳದಲ್ಲಿ ನಡೆದ ಪ್ಯಾಲೆಸ್ತೀನ್ ಪರ ರ ್ಯಾಲಿಗಳು ಸಂತಸವನ್ನು ಪಸರಿಸಿದವು ಎಂದೂ ಅವರು ಹೇಳಿದರು. ಗಾಜಾ ನಿವಾಸಿಗಳ ಸಂಕಷ್ಟವನ್ನು ಪರಿಹರಿಸಲು ಅಂತರಾಷ್ಟ್ರೀಯ ಒತ್ತಡ ಹೇರುವಂತೆ ಕಾಂತಪುರಂಗೆ ಮನವಿ ಮಾಡಿದರು.
ಆದಷ್ಟು ಬೇಗ ಬಿಕ್ಕಟ್ಟು ಬಗೆಹರಿಯಲಿದ್ದು, ಭಾರತೀಯರ ಪ್ರಾರ್ಥನೆ ಸದಾ ಪ್ಯಾಲೆಸ್ತೀನ್ ಜನರ ಮೇಲಿದೆ ಎಂದು ಅಬುಲ್ ಹೈಜಾ ಅವರಿಗೆ ಕಾಂತಪುರಂ ತಿಳಿಸಿದರು.