janadhvani

Kannada Online News Paper

ಕಿನ್ಯಾ ಕೇಂದ್ರ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರೂ, ಹಿರಿಯ ಮುಖಂಡರಾದ ಹಾಜಿ ಸಾದು ಕುಂಞಿ ಮಾಸ್ಟರ್ ನಿಧನ

K.M ಸಾಧುಕುಂಞಿ ಮಾಸ್ಟರ್ ರವರು 1965ರಲ್ಲಿ MA, B.Ed, LLB ಡಿಗ್ರಿಯನ್ನು ಪಡೆದ ಉಳ್ಳಾಲ ಕ್ಷೇತ್ರದ ಮೊದಲ ವ್ಯಕ್ತಿಯಾಗಿದ್ದಾರೆ.

ಕಿನ್ಯಾ: ಸಯ್ಯಿದ್ ಮದನಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರು, ಕಿನ್ಯ ಕೇಂದ್ರ ಜುಮ್ಮಾ ಮಸ್ಜಿದಿನ ಮಾಜಿ ಅಧ್ಯಕ್ಷರೂ, ಹಿರಿಯ ಧಾರ್ಮಿಕ ಮುಖಂಡರಾದ ಕಿನ್ಯ ಸಾಗ್ ಕುಟುಂಬದ ಹಿರಿಯ ವ್ಯಕ್ತಿ ಹಾಜಿ ಸಾದು ಕುಂಞಿ ಮಾಸ್ಟರ್(84) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ರವಿವಾರ ಮುಂಜಾನೆ ನಿಧನರಾದರು.

ಮರ್ಹೂಂ ಸಾಧು ಹಾಜಿಯವರ ಮಗ ಮೂಸಬ್ಬ ಹಾಜಿಯವರ ಹಿರಿಯ ಮಗನಾದ K.M ಸಾಧುಕುಂಞಿ ಮಾಸ್ಟರ್ ರವರು 1965ರಲ್ಲಿ MA, B.Ed, LLB ಡಿಗ್ರಿಯನ್ನು ಪಡೆದ ಉಳ್ಳಾಲ ಕ್ಷೇತ್ರದ ಮೊದಲ ವ್ಯಕ್ತಿಯಾಗಿದ್ದಾರೆ. ಉಳ್ಳಾಲ ಭಾರತ್ ಸ್ಕೂಲ್ ಮುಖ್ಯೋಪಾಧ್ಯಾಯರಾಗಿ, ಸಯ್ಯಿದ್ ಮದನಿ ಪಿಯು ಕಾಲೇಜಿನಲ್ಲಿ ಉತ್ತಮ ಪ್ರಾಧ್ಯಾಪಕರಾಗಿಯೂ ಪ್ರಾಂಶುಪಾಲರಾಗಿಯೂ ಸೇವೆಸಲ್ಲಿಸಿ ನಿವೃತ್ತರಾದರು.

ಮಂಜನಾಡಿ ಅಲ್ ಮದೀನಾ ಸಂಸ್ಥೆಯ ಉಪಾಧ್ಯಕ್ಷರೂ, ಅಲ್ ಮದೀನ ಶಾಲಾ ಕಾಲೇಜು ಸಮಿತಿಯ ಅಧ್ಯಕ್ಷರಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಸಂಸ್ಥೆಯ ಶೈಕ್ಷಣಿಕ ಅಭ್ಯುದಯದಲ್ಲಿ ಪ್ರಧಾನ ಪಾತ್ರವಹಿಸಿದ್ದರು.

ಲೌಕಿಕ ವಿಧ್ಯೆಯೊಂದಿಗೆ ಧಾರ್ಮಿಕ ವಿಧ್ಯೆಯನ್ನು ಕಿನ್ಯಾ ಕೇಂದ್ರ ಮಸೀದಿಯ ಪಳ್ಳಿ ಧರ್ಸಿನಲ್ಲಿ ಕರಗತಮಾಡಿದರು. ಮರ್ಹೂಂ ಬೇಕಲ ಉಸ್ತಾದರು ಕಿನ್ಯಾ ಪಳ್ಳಿ ಧರ್ಸ್ ನಲ್ಲಿ ಇವರ ಸಹಪಾಠಿಯಾಗಿದ್ದರು.

KM ಸಾಧುಕುಂಞಿ ಹಾಜಿ ಮಾಸ್ಟರ್ ಕಿನ್ಯಾ ಕೇಂದ್ರ ಮಸೀದಿಯ ಉಪಾಧ್ಯಕ್ಷರಾಗಿ ನಂತರ ಅಧ್ಯಕ್ಷರಾಗಿ ಸೇವೆ ಗೈದರು. ಮೋನು ಹಾಜಿಯವರ ಮರಣದ ನಂತರ ಮಸೀದಿಯ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದವರಾಗಿದ್ದಾರೆ KM ಸಾಧುಕುಂಞಿ ಮಾಸ್ಟರ್ ರವರು.12 ವರ್ಷಗಳ ಕಾಲ ಕಿನ್ಯಾ ಕೇಂದ್ರ ಮಸೀದಿಯ ಅಧ್ಯಕ್ಷರಾಗಿದ್ದರು. ಜನರಲ್ಲಿ ವಿಧ್ಯಾಭ್ಯಾಸದ ಮಹತ್ವದ ಬಗ್ಗೆ ವಿವರಿಸಿ ವಿದ್ಯೆಗೆ ಪ್ರೋತ್ಸಾಹವನ್ನು ನೀಡಿದ ಮಹಾನ್ ವ್ಯಕ್ತಿ ಆಗಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಪಾರತ್ರಿಕ ಬದುಕು ಹಸನಾಗಿಸಲು ಎಲ್ಲರೂ ಪ್ರತ್ಯೇಕ ದುಆ ಮಾಡುವಂತೆ ಸಾಗ್ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ಕಿನ್ಯ ಮನವಿ ಮಾಡಿದೆ.

error: Content is protected !! Not allowed copy content from janadhvani.com