janadhvani

Kannada Online News Paper

ವಲಸಿಗರಿಗೆ ಶುಭ ಸುದ್ದಿ: ವಿದೇಶೀ ಮೊಬೈಲ್ ಸಂಖ್ಯೆ ಬಳಸಿಕೊಂಡು ಯುಪಿಐ ಪಾವತಿಗೆ ಅವಕಾಶ

ಈ ಹಿಂದೆ ಯುಪಿಐ ಬಳಕೆಗೆ ಎನ್ಆರ್ ಐಗಳು ತಮ್ಮ ನಾನ್ ರೆಸಿಡೆಂಟ್ ಎಕ್ಸ್ ಟ್ರಾನಲ್ (ಎನ್ ಆರ್ ಇ) ಅಥವಾ ನಾನ್ ರೆಸಿಡೆಂಟ್ ಆರ್ಡಿನರಿ (ಎನ್ ಆರ್ ಒ) ಬ್ಯಾಂಕ್ ಖಾತೆಗಳಿಗೆ ತಮ್ಮ ಭಾರತೀಯ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕಿತ್ತು.

ನವದೆಹಲಿ: ಅನಿವಾಸಿ ಭಾರತೀಯರಿಗೆ (ಎನ್ ಆರ್ ಐ) ಭಾರತದಲ್ಲಿ ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆ ಬಳಸಿಕೊಂಡು ಯುಪಿಐ ಪಾವತಿ ಮಾಡುವ ಹೊಸ ವ್ಯವಸ್ಥೆಯನ್ನು ಐಸಿಐಸಿಐ ಬ್ಯಾಂಕ್ ಪರಿಚಯಿಸಿದೆ. ಈ ವ್ಯವಸ್ಥೆ ಎನ್ ಆರ್ ಐಗಳಿಗೆ ಭಾರತದಲ್ಲಿ ವಿವಿಧ ಬಿಲ್ ಗಳು, ಖರೀದಿ, ಇ-ಕಾಮರ್ಸ್ ವಹಿವಾಟುಗಳಿಗೆ ಯುಪಿಐ ಮೂಲಕ ಪಾವತಿಸಲು ಅವಕಾಶ ಕಲ್ಪಿಸುತ್ತದೆ.

ಭಾರತದಲ್ಲಿ ಐಸಿಐಸಿಐ ಬ್ಯಾಂಕಿನಲ್ಲಿ ಎನ್ ಆರ್ ಇ ಅಥವಾ ಎನ್ ಆರ್ ಒ ಬ್ಯಾಂಕ್ ಖಾತೆಗಳನ್ನು ಅಂತಾರಾಷ್ಟ್ರೀ ಯ ನೋಂದಾಯಿತ ಮೊಬೈಲ್ ಸಂಖ್ಯೆ ಹೊಂದಿರುವವರಿಗೆ ಪಾವತಿಸಲು ಇದು ಅವಕಾಶ ನೀಡುತ್ತದೆ. ಐ ಮೊಬೈಲ್ ಪೇ ಎಂಬ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ಈ ಸೇವೆಯನ್ನು ಬ್ಯಾಂಕ್ ಒದಗಿಸಲಿದೆ. ಇನ್ನು ಈ ಸೇವೆ ಪ್ರಸ್ತುತ ಯುಎಸ್ ಎ, ಯುಕೆ, ಯುಎಇ, ಕೆನಡಾ, ಸಿಂಗಾಪುರ, ಆಸ್ಟ್ರೇಲಿಯಾ, ಹಾಂಗ್ ಕಾಂಗ್, ಒಮಾನ್, ಕತ್ತಾರ್ ಹಾಗೂ ಸೌದಿ ಅರೇಬಿಯಾ ಸೇರಿದಂತೆ 10 ರಾಷ್ಟ್ರಗಳಲ್ಲಿ ನೆಲೆಸಿರುವ ಎನ್ ಆರ್ ಐಗಳಿಗೆ ಲಭ್ಯವಾಗಲಿದೆ.

ಐಸಿಐಸಿಐ ಬ್ಯಾಂಕಿನ ಈ ಸೇವೆಯಿಂದ ಎನ್ ಆರ್ ಐಗಳಿಗೆ ಪ್ರತಿದಿನದ ಪಾವತಿ ವಹಿವಾಟುಗಳು ಸುಲಭವಾಗಲಿವೆ. ಈ ಹಿಂದೆ ಯುಪಿಐ ಬಳಕೆಗೆ ಎನ್ಆರ್ ಐಗಳು ತಮ್ಮ ನಾನ್ ರೆಸಿಡೆಂಟ್ ಎಕ್ಸ್ ಟ್ರಾನಲ್ (ಎನ್ ಆರ್ ಇ) ಅಥವಾ ನಾನ್ ರೆಸಿಡೆಂಟ್ ಆರ್ಡಿನರಿ (ಎನ್ ಆರ್ ಒ) ಬ್ಯಾಂಕ್ ಖಾತೆಗಳಿಗೆ ತಮ್ಮ ಭಾರತೀಯ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಬೇಕಿತ್ತು.

ಹೊಸ ಸೇವೆ ಬಳಕೆ ಹೇಗೆ?
ಈ ಹೊಸ ಸೇವೆಯನ್ನು ಐಸಿಐಸಿಐ ಬ್ಯಾಂಕ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಐ ಮೊಬೈಲ್ ಪೇ (iMobile Pay) ಮೂಲಕ ಬಳಸಬಹುದು. ಈ ಅಪ್ಲಿಕೇಷನ್ ಯುಟಿಲಿಟಿ ಪಾವತಿಗಳು, ವ್ಯಾಪಾರಿಗಳು ಹಾಗೂ ಇ-ಕಾಮರ್ಸ್ ತಾಣಗಳಲ್ಲಿ ವಹಿವಾಟು ನಡೆಸಲು ಅನುಕೂಲ ಕಲ್ಪಿಸಲಿದೆ. ಇದರ ಜೊತೆಗೆ ಇತರ ಹಣಕಾಸು ವಹಿವಾಟುಗಳಿಗೆ ಕೂಡ ಈ ಅಪ್ಲಿಕೇಷನ್ ನೆರವು ನೀಡಲಿದೆ. ಈ ಹೊಸ ವ್ಯವಸ್ಥೆ ಬಳಕೆಗೆ ಈ ಹಿಂದಿನಂತೆ ಭಾರತದ ಮೊಬೈಲ್ ಸಂಖ್ಯೆಯ ಅಗತ್ಯವಿಲ್ಲ.

ಇನ್ನು ಗ್ರಾಹಕರು ಭಾರತೀಯ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪಾವತಿ ಮಾಡಬಹುದು. ಹಾಗೆಯೇ ಯುಪಿಐ ಐಡಿಗೆ ಹಣ ಕಳುಹಿಸಬಹುದು ಅಥವಾ ಭಾರತೀಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಬಹುದು.

ಯುಪಿಐ ಸೇವೆ ಸಕ್ರಿಯಗೊಳಿಸೋದು ಹೇಗೆ?
ಅಂತಾರಾಷ್ಟ್ರೀಯ ಮೊಬೈಲ್ ಸಂಖ್ಯೆಯಲ್ಲಿ ಯುಪಿಐ ಪಾವತಿ ಸಕ್ರಿಯಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
1.ಐ ಮೊಬೈಲ್ ಪೇ ಆಪ್ ಗೆ ( iMobile Pay app) ಲಾಗಿನ್ ಆಗಿ.
2.’UPI Payments’ಮೇಲೆ ಕ್ಲಿಕ್ ಮಾಡಿ.
3. ಮೊಬೈಲ್ ಸಂಖ್ಯೆ ಪರಿಶೀಲಿಸಿ.
4.My Profile ಮೇಲೆ ಕ್ಲಿಕ್ ಮಾಡಿ.
5.ಹೊಸ ಯುಪಿಐ ಐಡಿ ಸೃಷ್ಟಿಸಿ.
6.ಖಾತೆ ಸಂಖ್ಯೆ ಆಯ್ಕೆ ಮಾಡಿ ಆ ಬಳಿಕ ಸಲ್ಲಿಕೆ ಮಾಡಿ.
ಪ್ರಸ್ತುತ ಬ್ಯಾಂಕ್ ಎನ್ ಆರ್ ಐಗಳಿಗೆ ಪ್ರತಿದಿನ ಒಂದು ಲಕ್ಷ ರೂ. ತನಕ ವಹಿವಾಟು ನಡೆಸಲು ಅವಕಾಶ ನೀಡಿದೆ. ಈ ವ್ಯವಸ್ಥೆಯಡಿ ಯುಪಿಐ ಪಾವತಿ ಮಾಡುವಾಗ ಯಾವುದೇ ಶುಲ್ಕಗಳನ್ನು ವಿಧಿಸಲಾಗುವುದಿಲ್ಲ ಕೂಡ.

error: Content is protected !! Not allowed copy content from janadhvani.com