janadhvani

Kannada Online News Paper

ನಮಾಜ್ ಗೂ ಅವಕಾಶ ನೀಡಿ- ವಖ್ಫ್ ಬೋರ್ಡ್ ಬೇಡಿಕೆಯನ್ನು ತಿರಸ್ಕರಿಸಿದ ಸಚಿವ ಬಿ.ಸಿ.ನಾಗೇಶ್

ಟ್ವಿಟ್ಟರ್ ನಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿ #ResignBCNagesh ಹ್ಯಾಶ್ ಟ್ಯಾಗ್ ನಲ್ಲಿನ ಅಭಿಯಾನವು ಟ್ರೆಂಡಿಗ್ ಆಗಿತ್ತು.

ಬೆಂಗಳೂರು: ಕಾಲೇಜಿನಲ್ಲಿ ನಡೆಸಲಾದ ಗಣೇಶ ಪೂಜೆಯನ್ನು ಸಮರ್ಥಿಸುವ ಮೂಲಕ ವಿದ್ಯಾರ್ಥಿಗಳ ಮಧ್ಯೆ ಕೋಮು ಭಾವನೆಯನ್ನು ಕೆರಳಿಸುವ ರೀತಿಯಲ್ಲಿ ಶಿಕ್ಷಣ ಸಚಿವರು ರಾಜ್ಯದಲ್ಲಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಸಚಿವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದ್ದು, ಟ್ವಿಟ್ಟರ್ ನಲ್ಲಿ ಸಚಿವರ ರಾಜೀನಾಮೆಗೆ ಆಗ್ರಹಿಸಿ #ResignBCNagesh ಹ್ಯಾಶ್ ಟ್ಯಾಗ್ ನಲ್ಲಿನ ಅಭಿಯಾನವು ಟ್ರೆಂಡಿಗ್ ಆಗಿತ್ತು.

ಮುಸ್ಲಿಂ ವಿದ್ಯಾರ್ಥಿನಿಯರ ಕಡ್ಡಾಯ ಶಿರ ವಸ್ತ್ರವನ್ನು ಶಾಲಾ ಕಾಲೇಜಿನಲ್ಲಿ ನಿರ್ಬಂಧಿಸಿರುವ ರಾಜ್ಯ ಸರ್ಕಾರ, ಯಾವುದೇ ಧಾರ್ಮಿಕ ನಂಬಿಕೆಯ ಆಚಾರಗಳಿಗೆ ಶಾಲಾ ಕಾಲೇಜಿನಲ್ಲಿ ಅವಕಾಶವಿಲ್ಲ ಎಂದಿತ್ತು. ಕರ್ನಾಟಕದಲ್ಲಿ ಹಿಜಾಬ್‌ ವಿವಾದವು ಕೋರ್ಟ್ ಮೆಟ್ಟಲೇರಿತು.

ಹೈಕೋರ್ಟ್‌, ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಗುರುತು ತೋರಿಸುವುದಕ್ಕೆ ಅವಕಾಶ ಇಲ್ಲ ಎಂದು ತೀರ್ಪು ನೀಡಿ ಹಿಜಾಬ್‌ ಧರಿಸಿ ಶಾಲೆಗೆ ಬರುವುದನ್ನು ನಿಷೇಧಿಸಿತ್ತು.

ಈ ಸಂದರ್ಭದಲ್ಲಿ ಶಿಕ್ಷಣ ಸಚಿವರು ಶಾಲೆಗಳಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಅವಕಾಶ ನೀಡಿರುವುದು ಮತ್ತೊಂದು ವಿವಾದ ಸೃಷ್ಠಿಸುತ್ತಿದೆ. ಸರಕಾರಿ ಶಾಲೆಗಳಲ್ಲಿ ಗಣೇಶ ಹಬ್ಬದಂದು ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡುತ್ತೀರಾ ಎಂದು ಕೇಳಿದ್ದಕ್ಕೆ ” ಖಂಡಿತಾ ಪೂರ್ಣ ಸ್ವಾತಂತ್ರ್ಯವಿದೆ, ಎಲ್ಲೆಲ್ಲಿ ಹಿಂದಿನಿಂದ ಮಾಡಿಕೊಂಡು ಬಂದಿದ್ದಾರೋ, ಅವರಿಗೆ ಅಧಿಕಾರವಿದೆ. ಹೊಸದಾಗಿ ಮಾಡುವವರಿಗೆ ಅವಕಾಶವಿಲ್ಲ. ಇದು ಸಮಾಜವನ್ನು ಜೋಡಿಸುವಂತಹ ಕ್ರಿಯೆ, ಹಾಗಾಗಿ ಹಿಂದಿನಿಂದ ಮಾಡಿಕೊಂಡು ಬಂದವರು ಮಾಡಲಿ” ಎಂದು ಹೇಳಿದ್ದಾರೆ.

ಆದರೆ ಅವರ ಹೇಳಿಕೆಗೆ ಸಾಮಾಜಿಕ ಜಾಲಾತಾಣದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಧಾರ್ಮಿಕ ಸಂಕೇತಗಳಿಗೆ ಅವಕಾಶ ಇಲ್ಲ ಎಂದ ಮೇಲೆ, ಗಣೇಶ ವಿಗ್ರಹವನ್ನು ಶಾಲೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವುದಕ್ಕೆ ಅವಕಾಶ ಹೇಗೆ ಕೊಡುತ್ತಿದ್ದಾರೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಕೆಲವು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ.

ಈಗ ಶಾಲೆಗಳಲ್ಲಿ ಗಣೇಶ ಪೂಜೆಗೆ ಅವಕಾಶ ನೀಡಿದರೆ ಮುಂದೊಂದು ದಿನ ಕ್ರಿಶ್ಚಿಯನ್ನರಿಗೆ ಪ್ರಾರ್ಥನೆ ಮಾಡಲು, ಮುಸ್ಲೀಮರಿಗೆ ನಮಾಜ್ ಮಾಡುವುದಕ್ಕೆ ಅವಕಾಶ ಬೇಕೇಂದು ಬೇಡಿಕೆ ಬರಬಹುದು ಎಂದು ಶಿಕ್ಷಣ ಸಚಿವರ ಹೇಳಿಕೆ ಭಾರಿ ಚರ್ಚೆಗೀಡಾಗಿದೆ.

ಶಿಕ್ಷಣ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಜ್ಯ ವಕ್ಫ್ ಬೋರ್ಡ್ ಇಲಾಖೆ, ಗಣೇಶ ಹಬ್ಬಕ್ಕೆ ಅನುಮತಿ ಇದೆ ಎಂದಾದರೆ ಶಾಲೆಗಳಲ್ಲಿ ನಮಾಜ್ ಗೂ ಅವಕಾಶ ಕೊಡಿ ಎಂದು ಬೇಡಿಕೆ ಮುಂದಿಟ್ಟಿದೆ. ವಕ್ಫ್ ಬೋರ್ಡ್, ಶಿಕ್ಷಣ ಇಲಾಖೆ ಮುಂದೆ ಇಟ್ಟಿದ್ದ ಹೊಸ ಬೇಡಿಕೆಯನ್ನು ಸಚಿವ ಬಿ.ಸಿ.ನಾಗೇಶ್ ತಿರಸ್ಕರಿಸಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಶಾಲೆಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅನುಮತಿ ನೀಡಿಲ್ಲ, ಅವಕಾಶ ನೀಡುವುದೂ ಇಲ್ಲ. ಯಾವುದೇ ಕಾರಣಕ್ಕೂ ಯಾವುದೇ ಧರ್ಮದ ಆಚರಣೆಗೆ ಸರ್ಕಾರ ಅವಕಾಶ ನೀಡುವುದಿಲ್ಲ. ವಕ್ಫ್ ಬೋರ್ಡ್ ಬೇಡಿಕೆಗಳನ್ನು ಸರ್ಕಾರ ಪುರಸ್ಕರಿಸುವುದಿಲ್ಲ. ಶಾಲೆಗಳಲ್ಲಿ ಗಣಪತಿ ಹಬ್ಬ ಆಚರಣೆ ಸರ್ಕಾರ ಜಾರಿಗೆ ತಂದಿದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಶಾಲೆಗಳಲ್ಲಿ ಗಣಪತಿ ಮೂರ್ತಿ ಇಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ವಕ್ಫ್ ಬೋರ್ಡ್ ಶಿಕ್ಷಣ ಇಲಾಖೆ ಮುಂದಿಟ್ಟ ಬೇಡಿಕೆಗಳು

  • ಶಾಲೆಗಳಲ್ಲಿ ನಮಾಜ್‌ಗೆ ಪ್ರತ್ಯೇಕ ಕೊಠಡಿ ಮೀಸಲಿಡಬೇಕು.
  • ನಮ್ಮ ಧಾರ್ಮಿಕ ಹಬ್ಬಗಳ ಆಚರಣೆಗೂ ಅವಕಾಶ ಮಾಡಿಕೊಡಬೇಕು.
  • ಎಲ್ಲಾ ಧರ್ಮದ ಮಕ್ಕಳಿಗೂ ಸಮಾನ ಅವಕಾಶ ಸಿಗಬೇಕು.
  • ಗಣೇಶ ಹಬ್ಬದಂತೆ ಈದ್ ಮಿಲಾದ್ ಹಬ್ಬದ ಆಚರಣೆಗೂ ಅವಕಾಶ ಕೊಡಬೇಕು.
  • ಪ್ರತಿ ಮಕ್ಕಳಿಗೂ ಧರ್ಮದ ಕುರಿತು ಅರಿವು ಮೂಡಿಸಬೇಕು.
  • ನೈತಿಕ ಶಿಕ್ಷಣ ಅಡಿ ಧಾರ್ಮಿಕ ಪಾಠ ಮಕ್ಕಳಿಗೆ ನೀಡಬೇಕು

ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ ಅವರು ಬೇಡಿಕೆ ಇಟ್ಟಿದ್ದಾರೆ.

ಶಿಕ್ಷಣ ಸಚಿವರ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಹಿಜಾಬ್ ವಿವಾದ ಆದಾಗಲೂ ನಾವು ಒಂದು ವಿಷಯ ಸ್ಪಷ್ಟ ಪಡಿಸಿದ್ದೇವೆ. ಧಾರ್ಮಿಕ‌ ವಿಚಾರಗಳನ್ನು ತಿಳಿಸುವ ಮೂಲಕ ಅಪನಂಬಿಕೆ ಹೋಗಲಾಡಿಸಬೇಕು. ಎಲ್ಲಾ ಧಾರ್ಮಿಕ ಆಚರಣೆಗಳಿಗೂ ಅವಕಾಶ ಮಾಡಿಕೊಡಬೇಕು. ಗಣೇಶೋತ್ಸವಕ್ಕೆ ಅವಕಾಶ ಕೊಟ್ಟ ರೀತಿಯಲ್ಲೇ ಇಸ್ಲಾಮಿಕ್ ಧಾರ್ಮಿಕ ಆಚರಣೆಗಳಿಗೂ ಅವಕಾಶ ನೀಡಬೇಕು ಎಂದು ಶಾಫಿ ಸಅದಿ ಅವರು ಆಗ್ರಹಿಸಿದರು.

error: Content is protected !! Not allowed copy content from janadhvani.com