janadhvani

Kannada Online News Paper

ಈ ವರದಿಯ ಧ್ವನಿಯನ್ನು ಆಲಿಸಿ

✍️ಡಿ.ಪಿ ಯೂಸುಫ್ ಸಖಾಫಿ ಬೈತಾರ್

ಹಿಜ್ರಾ ಕ್ಯಾಲೆಂಡರ್ ಪ್ರಕಾರ ವರ್ಷದ ಮೊದಲ ತಿಂಗಳು ಮುಹರ‍್ರಮ್. ಹೊಸ ವರ್ಷದೊಂದಿಗೆ ಹೊಸತು ನಮ್ಮಲ್ಲಿ ಚಿಗುರಬೇಕು. ನವ ವರ್ಷಕ್ಕೆ ಹೆಜ್ಜೆ ಇಡುವಾಗ ಜೀವನದಲ್ಲಿ ಮುನ್ನಡೆಯಲು ನಮಗೆ ಹೊಸ ಹುರುಪು, ದೃಢ ಸಂಕಲ್ಪ ಬೇಕು. ಹೊಸ ಆಲೋಚನೆಗಳು ಮತ್ತು ಭರವಸೆಗಳು ಹುಟ್ಟಿಕೊಂಡಾಗ ಹೊಸ ವರ್ಷವು ಪ್ರಸ್ತುತವಾಗುತ್ತದೆ. ಸತ್ಯವಿಶ್ವಾಸಿಗಳು ಸಮಯದ ಮೌಲ್ಯವನ್ನು ಅರಿತು ಒಳ್ಳೆಯ ಚಟುವಟಿಕೆಗಳತ್ತ ಗಮನ ಹರಿಸಲು ಮತ್ತು ಒಂದು ಕ್ಷಣವೂ ಕಳೆದುಕೊಳ್ಳದೆ ಕರ್ಮ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ಸಿದ್ಧರಾಗಿರಬೇಕು.

ರಾತ್ರಿ ಹಗಲು ಪ್ರಕೃತಿ, ಸಮಯ ಮತ್ತು ಜೀವನವು ಎಲ್ಲವೂ ಸೃಷ್ಟಿಕರ್ತನ ಮಹಾ ಅನುಗ್ರಹಗಳಾಗಿವೆ ಎಂದು ಕುರಾನ್ ಅನೇಕ ಸ್ಥಳಗಳಲ್ಲಿ ನಮಗೆ ನೆನಪಿಸುತ್ತದೆ: ‘ಅಲ್ಲಾಹನೇ ಆಕಾಶಗಳನ್ನೂ ಮತ್ತು ಭೂಮಿಯನ್ನೂ ಸೃಷ್ಟಿಸಿದವನು ಮತ್ತು ಆಕಾಶದಿಂದ ನಿಮಗೆ ಮಳೆಯನ್ನು ಸುರಿಸಿದವನು ಮತ್ತು ಅದರ ಮೂಲಕ ನಿಮಗೆ ಉಪಜೀವನಕ್ಕಾಗಿ ಪಲ ಮೂಲಗಳನ್ನು ಉತ್ಪಾದಿಸಿದವನು. ಅವನು ತನ್ನ ಆಜ್ಞೆಯ ಮೇರೆಗೆ ಸಮುದ್ರಯಾನಕ್ಕಾಗಿ ಹಡಗನ್ನು ನಿಮ್ಮ ನಿಯಂತ್ರಣಕ್ಕೆ ಕೊಟ್ಟಿದ್ದಾನೆ. ಮತ್ತು ಅವನು ನದಿಗಳನ್ನು ನಿಮಗೆ ಅಧೀನಗೊಳಿಸಿದ್ದಾನೆ.

ನಿಯತವಾಗಿ ಚಲಿಸುತ್ತಿರುವ ಸೂರ್ಯ ಮತ್ತು ಚಂದ್ರರನ್ನೂ ಅವನು ನಿಮಗಾಗಿ ನಿಯಂತ್ರಿಸಿದನು. ಆತನು ಹಗಲು ರಾತ್ರಿಗಳನ್ನು ನಿಮಗಾಗಿ ನಿಯಂತ್ರಿಸಿದನು ನೀವು ಕೇಳಿದ್ದನ್ನೆಲ್ಲಾ ನಿಮಗೆ ಕೊಟ್ಟನು.ನೀವು ಅಲ್ಲಾಹನ ಅನುಗ್ರಹÀಗಳನ್ನು ಎಣಿಕೆ ಮಾಡಲಿಚ್ಛಿಸಿದರೆ ಅದನ್ನು ನೀವು ಎಣಿಸಿ ಮುಗಿಸಲಾರಿರಿ. ವಾಸ್ತವದಲ್ಲಿ ಮಾನವನು ಮಹಾ ಅಕ್ರಮಿಯೂ ಕೃತಘ್ನನೂ ಆಗಿರುತ್ತಾನೆ–ಸೂರಃ ಇಬ್ರಾಹಿಂ.

ರಾತ್ರಿ ಹಗಲೂ ಸೂರ್ಯಚಂದ್ರರೂ ಅಲ್ಲಾಹನ ನಿದರ್ಶನಗಳಲ್ಲಿ ಸೇರಿವೆ. ಸೂರ್ಯನಿಗಾಗಲಿ, ಚಂದ್ರನಿಗಾಗಲಿ ಸಾಷ್ಟಾಂಗವೆರಗಬೇಡಿರಿ. ಅವುಗಳನ್ನು ಸೃಷ್ಟಿಸಿದ ಅಲ್ಲಾಹನಿಗೇ ಸಾಷ್ಟಾಂಗವೆರಗಿರಿ. ನೀವು ನಿಜಕ್ಕೂ ಅವನನ್ನು ಮಾತ್ರ ಆರಾಧಿಸುವವರಾಗಿದ್ದರೆ ! – ಸೂರ : ಫುಸ್ವಿಲಾತ್.

ಕಾಲಚಕ್ರ ತಿರುಗುವುದರಲ್ಲಿ ಮತ್ತು ಆಯಸ್ಸು ಹೆಚ್ಚುತ್ತಿರುವುದರಲ್ಲಿ ಅಲ್ಲಾಹನ ಅನುಗ್ರಹವಿದೆ ಯೋಚಿಸುವವರಿಗೆ ಅವುಗಳಲ್ಲಿ ನಿದರ್ಶನಗಳಿವೆ ಎಂದು ಹೇಳುವ ಪವಿತ್ರ ಕುರಾನ್, ಅವುಗಳನ್ನು ವ್ಯರ್ಥ ಮಾಡುವವರನ್ನು ಎಚ್ಚರಿಸುತ್ತದೆ. “ ಯೋಚಿಸುವವರಿಗೆ ಅರ್ಥಮಾಡಿಕೊಳ್ಳಲು ಸಾಕಾಗುವಷ್ಟು ಆಯುಷ್ಯವನ್ನು ನಾವು ಕೊಟ್ಟಿರಲಿಲ್ಲವೇ? ನಿಮ್ಮ ಬಳಿಗೆ ಎಚ್ಚರಿಕೆ ಕೊಡುವವರೂ ಬಂದಿದ್ದರಲ್ಲವೇ? ಆದ್ದರಿಂದ ಈಗ ಸವಿಯಿರಿ, ಇನ್ನು ಅಕ್ರಮಿಗಳಿಗೆ ಯಾರೂ ಸಹಾಯಕನಿಲ್ಲ. ಸೂರ : ಅಲ್-ಫಾತ್ವಿರ್.

ಸಮಯದ ಪ್ರಾಮುಖ್ಯತೆ ಮತ್ತು ಶ್ರೇಷ್ಠತೆಯನ್ನು ವಿವರಿಸುವ ಸಲುವಾಗಿ, ಅಲ್ಲಾಹನು ಹಲವಾರು ಸೂಕ್ತಗಳನ್ನು ಅವತೀರ್ಣಗೊಳಿಸಿದನು.ಅದರಲ್ಲಿ ಅವನು ಸಮಯದ ಮೇಲೆ ಪ್ರತಿಜ್ಞೆ ಮಾಡುತ್ತಾನೆ: ರಾತ್ರಿಯಾಣೆ, ಅದು ಇರುಳಾವರಿಸಿದಾಗ, ಹಗಲಿನಾಣೆ ಅದು ಬೆಳಗಿದಾಗ. – ಸೂರ : ಅಲ್ಲೈಲ್.

ನಿಸ್ಸಂದೇಹ ! ಚಂದ್ರನಾಣೆ ! ಮತ್ತು ರಾತ್ರಿಯಾಣೆ ಅದು ಮರಳುವಾಗ ಮತ್ತು ಮುಂಜಾವಿನಾಣೆ ಅದು ಬೆಳಗುವಾಗ (ಸೂರ : ಅಲ್-ಮುದ್ದಸ್ಸಿರ್)

“ಕಾಲವೇ ಸತ್ಯ, ನಿಶ್ಚಯವಾಗಿಯೂ ಮನುಷ್ಯನು ವೈಫಲ್ಯದಲ್ಲಿದ್ದಾನೆ” (ಅಲ್-ಅಸ್ವ್ವರ್) ಇಮಾಮ್ ಫಕ್ರುದ್ದೀನ್ ಅಲ್-ರಾಝಿ ರಳಿಯಲ್ಲಾಹು ಅನ್ಹು ಸೂರತ್ ಅಲ್-ಅಸ್ವ್ರ್‌ನ ವ್ಯಾಖ್ಯಾನದಲ್ಲಿ ಬರೆಯುತ್ತಾರೆ: “ಈ ಸೂಕ್ತದ ಮೂಲಕ ಅಲ್ಲಾಹನು ನಮಗೆ ಹಗಲು ರಾತ್ರಿಗಳು ಒಳ್ಳೆಯ ಅವಕಾಶಗಳು ಮತ್ತು ಜನರು ಅವುಗಳನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ನೆನಪಿಸುತ್ತಾನೆ. ಅಲ್ಲಾಹು ಸಮಯದ ಮೇಲೆ ಪ್ರತಿಜ್ಞೆ ಮಾಡಿದನು ಏಕೆಂದರೆ ಸಮಯವು ಸ್ಥಳಕ್ಕಿಂತ ಮುಖ್ಯವಾಗಿದೆ’ -ಅತಫ್ಸೀರುಲ್ ಕಬೀರ್

“ಸಮಯವು ಬಹಳ ಮೌಲ್ಯಯುತವಾಗಿದೆ ಮತ್ತು ಅದನ್ನು ಸರಿಯಾಗಿ ಬಳಸದವನು ಮೋಸಗೊಂಡವನು” ಎಂದು ಹದೀಸ್‌ನಲ್ಲಿ ಕಾಣಬಹುದು. ಇಬ್ನ್ ಅಬ್ಬಾಸ್ ರಳಿಯಲ್ಲಾಹು ಅನ್ಹು ವರದಿ ಮಾಡಿದ ಹದೀಸ್ ನಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಹೇಳುತ್ತಾರೆ: “ಎರಡು ಅನುಗ್ರಹಗಳಲ್ಲಿ ಹೆಚ್ಚಿನ ಜನರು ಮೋಸ ಹೋಗುತ್ತಾರೆ. ಅವು ಆರೋಗ್ಯ ಮತ್ತು ವಿರಾಮ’ (ಸಹೀಹ್ ಅಲ್-ಬುಖಾರಿ). ದಿನದ ಪ್ರತಿ ಕ್ಷಣವನ್ನು ಸೃಜನಾತ್ಮಕವಾಗಿ ಬಳಸಿಕೊಳ್ಳಲು ನಾವು ಬಹಳ ಜಾಗರೂಕರಾಗಿರಬೇಕು.

ಇಮಾಮ್ ಶಾಫಿ ರಳಿಯಲ್ಲಾಹು ಅನ್ಹು
ಹೇಳಿದರು: ‘ನಾನು ಸೂಫಿಗಳ ಜತೆ ಸೇರಿಕೊಂಡೆ. ಅವರಿಂದ ನಾನು ಎರಡು ವಿಷಯಗಳನ್ನು ಕಲಿತೆ. ಒಂದು: ಸಮಯವು ಖಡ್ಗ. ನೀವು ಅದರಿಂದ ಕತ್ತರಿಸದಿದ್ದರೆ, ಅದು ನಿಮ್ಮನ್ನು ಕತ್ತರಿಸುತ್ತದೆ. ಎರಡು: ನಿಮ್ಮ ದೇಹವನ್ನು ಸತ್ಯದಲ್ಲಿ ತೊಡಗಿಸಿಕೊಳ್ಳಿ ಇಲ್ಲದಿದ್ದರೆ, ಅದು ನಿಮ್ಮನ್ನು ಸುಳ್ಳಿನಲ್ಲಿ ತೊಡಗಿಸಿಕೊಳ್ಳುತ್ತದೆ.

ಪೂರ್ವಿಕ ಮಹಾತ್ಮರು ಸಮಯ ವ್ಯರ್ಥ ಮಾಡದೆ ಬದುಕುವ ಶ್ರದ್ಧೆಯನ್ನು ಹೊಂದಿದ್ದರು. ಪ್ರಮುಖ ತಾಬಿಯಾದ ಸಯ್ಯಿದ್ ಇಬ್ನ್ ಅಲ್-ಮುಸಯ್ಯಬ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ: ‘ನಾನು ಹದೀಸ್‌ನ ಹುಡುಕಾಟದಲ್ಲಿ ಹಲವು ಹಗಲು ರಾತ್ರಿಗಳು ಪ್ರಯಾಣಿಸುತ್ತಿದ್ದೆನು. ತಾಬಿಅï ಪ್ರಮುಖರಾದ ಸಯ್ಯಿದ್ ಇಬ್ನ್ ಜುಬೈರ್ ಹೇಳುತ್ತಾರೆ: ‘ನಾನು ಇಬ್ನ್ ಅಬ್ಬಾಸ್ ರಳಿಯಲ್ಲಾಹು ಅನ್ಹು ಜತೆ ರಾತ್ರಿಯಲ್ಲಿ ಪ್ರಯಾಣಿಸುತ್ತಿದ್ದೆನು. ಅವರು ನನಗೆ ರಾತ್ರಿ ಪ್ರಯಾಣದಲ್ಲಿ ಹದೀಸ್ ಹೇಳಿಕೊಡುತ್ತಿದ್ದರು ಮತ್ತು ನಾನು ಪ್ರಯಾಣದಲ್ಲಿಯೇ ಅದನ್ನು ಬರೆಯುತ್ತಿದ್ದೆನು. ಇದು ಬೆಳಗಿನ ಜಾವದವರೆಗೂ ಮುಂದುವರಿಯುತ್ತಿತ್ತು.

ಉಮರ್ ಬಿನ್ ಖತ್ತಾಬ್ ರಳಿಯಲ್ಲಾಹು ಅನ್ಹು ಹೇಳುತ್ತಾರೆ; ನಾನು ಮತ್ತು ಅನ್ಸಾರ್ ಸ್ವಹಾಬಿಗಳ ಪೈಕಿ ನನ್ನ ನೆರೆಹೊರೆಯವರೊಬ್ಬರಾದ ಔಸ್ ಬಿನ್ ಅಲಿಯ್ಯ್ ರಳಿಯಲ್ಲಾಹು ಅನ್ಹು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವಸಲ್ಲಮ್ ರವರನ್ನು ಭೇಟಿ ಮಾಡುತ್ತಿದ್ದೆವು. ಒಂದು ದಿನ ಅವರು ಮತ್ತು ಮರು ದಿನ ನಾನು ಎಂಬ ರೀತಿಯಲ್ಲಿ ಭೇಟಿಯನ್ನು ಕ್ರಮೀಕರಿಸಿದ್ದೆವು. ನಾನು ಭೇಟಿ ಮಾಡುವ ದಿನದಲ್ಲಿ ಲಭಿಸುವ ಜ್ಞಾನ ಅನ್ಸಾರಿ ಸ್ವಹಾಬಿಗೆ ನಾನು ಹೇಳಿಕೊಡುತ್ತಿದ್ದೆನು. ನನ್ನ ನೆರೆಹೊರೆಯವನು ಹೋಗುವ ದಿನ ಲಭಿಸುವಂತಹ ಜ್ಞಾನ ನನಗೆ ಅವರು ಹೇಳಿಕೊಡುತ್ತಿದ್ದರು ( ಬುಖಾರಿ)

ಒಂದು ಹದೀಸ್ ಮಾತ್ರ ಕಲಿಯಲು ಜಾಬಿರ್ ಬಿನ್ ಅಬ್ದುಲ್ಲಾ ರಳಿಯಲ್ಲಾಹು ಅನ್ಹು ಒಂದು ತಿಂಗಳು ಯಾತ್ರೆ ಮಾಡಿದ ಘಟನೆ ಇಮಾಮ್ ಬುಖಾರಿ ರಳಿಯಲ್ಲಾಹು ಅನ್ಹು ಉದ್ದರಿಸುತ್ತಾರೆ. ಜಾಬಿರ್ ರಳಿಯಲ್ಲಾಹು ಅನ್ಹು ಘಟನೆಯನ್ನು ಹೀಗೆ ವಿವರಿಸುತ್ತಾರೆ;

ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರಿಂದ ಹದೀಸ್ ಕೇಳಿ ಕಲಿತ ಸ್ವಹಾಬಿಯೋರ್ವರ ಬಗ್ಗೆ ನನಗೆ ತಿಳಿಯಿತು. ನಾನು ತಕ್ಷಣ ಒಂಟೆಯನ್ನು ಖರೀದಿಸಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದೆ. ಒಂದು ತಿಂಗಳ ಪ್ರಯಾಣದ ನಂತರ ಅವರು ಶಾಮ್‌ಗೆ ತಲುಪಿದಾಗ ಆ ಸ್ವಹಾಬಿ ಅಬ್ದುಲ್ಲಾಹಿಬ್ ಉನಯ್ಸ್ ರಳಿಯಲ್ಲಾಹು ಅನ್ಹು ಎಂದು ತಿಳಿಯಲು ಸಾಧ್ಯವಾಯಿತು. ನಾನು ಕಾವಲುಗಾರನಿಗೆ ಹೇಳಿದೆ: ‘ಜಾಬಿರ್ ಬಂದಿದ್ದಾನೆಂದು ಹೇಳಿರಿ.’ ಅವರು ಕೇಳಿದರು: ನೀವು ಜಾಬಿರ್ ಇಬ್ನ್ ಅಬ್ದುಲ್ಲಾ ರಳಿಯಲ್ಲಾಹು ಅನ್ಹು ರವರೇ? ‘ಹೌದು’ ಎಂದು ನಾನು ಉತ್ತರಿಸಿದೆ. ತಕ್ಷಣವೇ ಅಬ್ದುಲ್ಲಾಹಿಬ್ ಉನೈಸ್ ರಳಿಯಲ್ಲಾಹು ಅನ್ಹು ಹೊರಗೆ ಬಂದು ನನ್ನನ್ನು ತಬ್ಬಿಕೊಂಡರು. ನಾನು ಹೇಳಿದೆ: ‘ನೀವು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ರಿಂದ ಕೇಳಿದ ಒಂದು ಹದೀಸ್ ಬಗ್ಗೆ ತಿಳಿದು ನಿಮ್ಮ ಬಳಿಗೆ ನಾನು ಬಂದೆ. ಆ ಹದೀಸ್ ನಿಮ್ಮಿಂದ ಕೇಳಿಸುವ ಮೊದಲು ನಾನೋ ನೀವೋ ಮರಣಹೊಂದಿದರೆ? ಎಂಬ ಭಯ ನನಗಿದೆ.’ ತಕ್ಷಣ ಅಬ್ದುಲ್ಲಾಹಿಬ್ ಉನೈಸ್ ರಳಿಯಲ್ಲಾಹು ಅನ್ಹು ಹದೀಸನ್ನು ಉಲ್ಲೇಖಿಸತೊಡಗಿದರು; ಪುನರುತ್ಥಾನ ದಿನದಂದು ಜನರು ನಗ್ನರೂ ನಿರ್ಗತಿಕರೂ ಮುಂಜಿ ಮಾಡದವರಾಗಿಯೂ ಒಟ್ಟು ಸೇರುವರು. ಹತ್ತಿರವಿರುವವರು ಮತ್ತು ದೂರದಲ್ಲಿರುವವರು ಕೇಳಿಸುವಂತೆ ಅಲ್ಲಾಹು ಹೀಗೆ ಘೋಷಣೆ ಮಾಡುವನು. ನಾನೊಬ್ಬನೇ ಇಂದಿನ ಸರ್ವಾಧಿಕಾರಿ ! ನರಕದವಾಸಿಗಳಲ್ಲಿ ಒಬ್ಬರು ತನ್ನ ಕಿತ್ತುಕೊಂಡ ಹಕ್ಕನ್ನು ಕೇಳುತ್ತಿರುವಾಗ ಸ್ವರ್ಗಕ್ಕೆ ಅರ್ಹರಾದ ಯಾರೂ ಸ್ವರ್ಗವನ್ನು ಪ್ರವೇಶಿಸಲು ಸಾಧ್ಯವಿಲ್ಲ.ಸ್ವರ್ಗದ ವಾರಸುದಾರರಲ್ಲಿ ಒಬ್ಬರು ತನ್ನ ಕಿತ್ತುಕೊಂಡ ಹಕ್ಕನ್ನು ಕೇಳುತ್ತಿರುವಾಗ ನರಕವಾಸಿಗಳ ಪೈಕಿ ಯಾರೂ ನರಕವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಅಥವಾ ಲೆಕ್ಕಪತ್ರಗಳನ್ನು ಮುಗಿಸಿದ ನಂತರವಲ್ಲದೆ ಸ್ವರ್ಗ ಮತ್ತು ನರಕ ಪ್ರವೇಶಗಳು ನಡೆಯುವುದಿಲ್ಲ.’ ನಾನು ಕೇಳಿದೆ: ‘ಹಕ್ಕುಗಳನ್ನು ಹೇಗೆ ಪಾವತಿಸುವುದು ನಾವು ನಿರ್ಗತಿಕರಾಗಿ ಮತ್ತು ಬೆತ್ತಲೆಯಾಗಿ ಅಲ್ಲಿಗೆ ಬರುವುದಲ್ಲವೇ?’ ಅವರ ಉತ್ತರ; ಸತ್ಕರ್ಮಗಳು ಮತ್ತು ಕೆಟ್ಟ ಕಾರ್ಯಗಳ ಮೂಲಕ ಲೆಕ್ಕ ತೀರಿಸಲಾಗುತ್ತದೆ. ( ಅದಬುಲ್ ಮುಫ್ರದ್ )
ಪ್ರಸಿದ್ಧ ತಾಬಿಈ ವಿದ್ವಾಂಸರಾದ ಅಬುಲ್ ಆಲಿಯಾ ರಳಿಯಲ್ಲಾಹು ಅನ್ಹು ಹೇಳುತ್ತಾರೆ: ‘ನಾವು ಬಸ್ವಾರದಲ್ಲಿದ್ದಾಗ ಸಹಾಬಿಗಳ ಹದೀಸ್‌ಗಳನ್ನು ಕೇಳುತ್ತಿದ್ದೆವು. ಆದರೆ ಅದರಿಂದ ನಮಗೆ ತೃಪ್ತಿಯಾಗುತ್ತಿರಲಿಲ್ಲ್ಲ. ಮದೀನಾಗೆ ಹೋಗಿ ಸ್ವಹಾಬಿಗಳ ಬಾಯಿಂದಲೇ ನೇರವಾಗಿ ಕೇಳಿದ ಬಳಿಕವೇ ತೃಪ್ತಿಪಡುತ್ತಿದ್ದೆವು. ಪೂರ್ವಿಕರು ಕಲಿಕೆಯ ಬಗ್ಗೆ ಬಹಳ ಕುತೂಹಲ ಹೊಂದಿದ್ದರು ಮತ್ತು ಜ್ಞಾನಕ್ಕಾಗಿ ಗರಿಷ್ಠ ಸಮಯ ಮತ್ತು ತ್ಯಾಗ ಮಾಡಿದ್ದರು ಎಂದು ಇದರಿಂದ ತಿಳಿಯಲು ಸಾಧ್ಯ. ಅಬೂಹನೀಫ ರವರ ಶಿಷ್ಯರಾಗಿದ್ದ ಖಾಝಿ ಅಬೂಯೂಸುಫ್ ರಳಿಯಲ್ಲಾಹು ಅನ್ಹು ರವರು ತನ್ನ ಮಗನು ಮರಣಹೊಂದಿದಾಗಲೂ ಅಬೂಹನೀಫಾ ರಳಿಯಲ್ಲಾಹು ಅನ್ಹು
ರವರ ತರಗತಿಗೆ ಹೋಗಿದ್ದರು.! ಒಂದು ದಿನವೂ ಕೂಡಾ ಉಸ್ತಾದ್ ನೊಂದಿಗಿರುವ ಸುಬ್‌ಹಿ ಜಮಾಹತ್ ನಮಾಝ್ ಅವರಿಗೆ ನಷ್ಟವಾಗಲಿಲ್ಲ. ಈದುಲ್ ಫಿತ್ರ್ ಮತ್ತು ಈದುಲ್ ಅಳ್‌ಹಾ ಉಸ್ತಾದ್‌ರ ಜತೆಗಿರುತ್ತಿದ್ದರು. ಅವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾಗ ಮಾತ್ರ ದೂರ ಉಳಿದರು. ಅವರ ಮಗ ಮರಣಹೊಂದಿದಾಗ ಅವನ ಅಂತ್ಯ ಸಂಸ್ಕಾರಕ್ಕೂ ಹಾಜರಾಗಲಿಲ್ಲ. ತನ್ನ ನೆರೆಹೊರೆಯವರು ಮತ್ತು ಹತ್ತಿರದ ಕುಟುಂಬ ಸದಸ್ಯರಿಗೆ ಅಂತ್ಯ ಕ್ರಿಯೆ ಮಾಡಲು ಒಪ್ಪಿಸಿದ ನಂತರ ಅವರು ದರ್ಸ್ಗೆ ಹೋದರು. ಅಬು ಹನೀಫ ರಳಿಯಲ್ಲಾಹು ಅನ್ಹು ರವರ ತರಗತಿ ನಷ್ಟ ಹೊಂದುತ್ತದೆAದೂ ಆ ನಷ್ಟವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ಕಾರಣವನ್ನು ಹೇಳಿದರು. (ಮನಾಖಿಬು ಅಬೂಹನೀಫಾ)

ಪೂರ್ವಿಕ ಮಹಾತ್ಮರು ತಮ್ಮ ಸಮಯದ ಸಿಂಹಪಾಲನ್ನು ಜ್ಞಾನ ಸಂಪಾದನೆಗೆ ಮೀಸಲಿಟ್ಟರು ಏಕೆಂದರೆ ಆರಾಧನೆಯ ಪ್ರಮುಖ ಅಂಶವೆAದರೆ ಜ್ಞಾನ ಸಂಪಾದನೆ. ಧಿಕ್ರ್ ಗಳನ್ನು ಅಧಿಕಗೊಳಿಸಿ ನಮ್ಮ ಸಮಯವನ್ನು ಸೃಜನಾತ್ಮಕವಾಗಿ ಬಳಸಬೇಕು, ನಿಯಮಿತವಾಗಿ ಒಳ್ಳೆಯ ಕೆಲಸಗಳನ್ನು ಮಾಡಬೇಕು, ಒಳ್ಳೆಯ ಕಾರ್ಯಗಳನ್ನು ಅಭ್ಯಾಸವಾಗಿಸಿಕೊಳ್ಳಬೇಕು ಮತ್ತು ಒಳಿತಿನ ಕಡೆಗೆ ಸಾಗಬೇಕು. ಹೊಸ ವರ್ಷದಲ್ಲಿ ನಮಗೆ ಬೇಕಾಗಿರುವುದು ಈ ವಿಷಯಗಳ ಬಗ್ಗೆ ಹೆಚ್ಚು ಗಮನ ಹರಿಸುವ ಪ್ರತಿಜ್ಞೆಯಾಗಿದೆ. ಸೃಷ್ಟಿಕರ್ತನ ಮುಂದೆ ವಿಚಾರಣೆಯಲ್ಲಿ ಸಮಯದ ಬಳಕೆಯ ಬಗ್ಗೆ ಎಂಬ ಹದೀಸನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಪ್ರವಾದಿ ಸ್ವಲ್ಲಲ್ಲಾಹು ಅಲೈಹಿವ ಸಲ್ಲಮ್ ಹೇಳಿದರು: ಐದು ಕಾರ್ಯಗಳು ಬರುವ ಮೊದಲು ಐದು ವಿಷಯಗಳನ್ನು ಸದುಪಯೋಗಪಡಿಸಿರಿ. ಅವು ವೃದ್ಧಾಪ್ಯದ ಮೊದಲು ಯೌವನ, ಅನಾರೋಗ್ಯದ ಮೊದಲು ಆರೋಗ್ಯ, ಬಡತನದ ಮೊದಲು ಸಂಪತ್ತು, ಕೆಲಸದ ಮೊದಲು ವಿರಾಮ ಮತ್ತು ಮರಣದ ಮೊದಲು ಜೀವನ (ಬೈಹಕಿ)

error: Content is protected !! Not allowed copy content from janadhvani.com