janadhvani

Kannada Online News Paper

ಸಮಸ್ತ ನಾಗರೀಕರಿಗೆ ಈದ್ ಹಬ್ಬದ ಶುಭಕಾಮನೆಗಳು
ಈ ವರದಿಯ ಧ್ವನಿಯನ್ನು ಆಲಿಸಿ

ಅಲ್ಲಾಹು ಅಕ್ಬರ್…
ಮುಸ್ಲಿಂ ಜಗತ್ತಿಗೆ ನವ ಚೈತನ್ಯವನ್ನು ನೀಡುತ್ತಾ ಮುಸಲ್ಮಾನರ ಮೈಮನಗಳಲ್ಲಿ ಧಾರ್ಮಿಕತೆಯ ಲಕ್ಷಣಗಳನ್ನು ಗೋಚರಿಸುತ್ತಾ ಪವಿತ್ರ ತಿಂಗಳು ದುಲ್ ಹಿಜ್ಜಃದ ಚಂದ್ರ ಬಾನಲ್ಲಿ ದರ್ಶನವಾಗುತ್ತಿದ್ದಂತೆ ಸತ್ಯ ವಿಶ್ವಾಸಿಗಳ ಹೃದಯಾಂತರಾಳದಲ್ಲಿ ಸಂತಸ ಸಂಭ್ರಮಗಳ ಹರ್ಷಧಾರೆಗಳು ವರ್ಷಿಸುತ್ತಿದೆ.

ದೀರ್ಘವಾದ ಪರೀಕ್ಷೆಗಳಲ್ಲಿ ವಿಜಯವನ್ನು ಪಡೆದು ಸಂರಕ್ಷಕನಾದ ಅಲ್ಲಾಹನ ಪ್ರೀತಿಯನ್ನು ಬಯಸಿ ಆಸೆ- ಆಗ್ರಹಗಳನ್ನೆಲ್ಲಾ ತ್ಯಜಿಸಿ ಜನ್ಮ ಶತ್ರುವಾದ ಪಿಶಾಚಿಯನ್ನು ಸೋಲಿಸಿದ ಪ್ರವಾದಿ ಇಬ್ರಾಹೀಮ್ (ಅ)ರವರ ಯಶೋಗಾಥೆಯನ್ನು ತಿಳಿಯುವಾಗ ಉಂಟಾದ ಆಹ್ಲಾದ. ದಾಸನೆಂಬ ನೆಲೆಯಲ್ಲಿ ಸೃಷ್ಟಿಕರ್ತನೊಂದಿಗಿರುವ ಈ ಬಾಧ್ಯತೆಯನ್ನು ನಿರ್ವಹಿಸಲು ಸಾಧ್ಯವಾದ ಅಲ್ಲಾಹನ ಆಪ್ತರಾದ ಇಬ್ರಾಹಿಮ್ (ಅ) ರವರನ್ನು ಪ್ರೀತಿಸುವವರಿಗೆ ಈದ್ ಆಚರಣೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳದಿರಲು ಹೇಗೆ ತಾನೇ ಸಾಧ್ಯ.? ಈ ಒಂದು ಸ್ಮರಣೆಯು ನಮ್ಮ ಬದುಕಿನಲ್ಲಿ ಕೆಲವೊಂದು ಬದಲಾವಣೆಗಳನ್ನಾದರೂ ಸೃಷ್ಟಿಸುತ್ತಾ ನಾವು ಹೊಸ ಬದುಕಿಗೆ ಕಾಲಿಡಬೇಕಾಗಿದೆ.

ಪೈಶಾಚಿಕ ಪ್ರೇರಣೆಗಳ ಬಲೆಗಳಲ್ಲಿ ಸಿಲುಕಿ ಬದುಕುವ ಮನುಷ್ಯನಿಗೆ, ಪಾಪಗಳತ್ತ ಸೆಳೆಯುವ ದೈಹಿಕ ವಾಂಛೆಗಳನ್ನು ಮೀರಿ ನಿಂತು ಶುದ್ಧ ಬದುಕಿನ ಮೂಲಕ ಅಲ್ಲಾಹುವಿನೆಡೆಗೆ ಸಾಗಲು, ಪಾರತ್ರಿಕ ಯಶಸ್ಸನ್ನು ಖಾತರಿಪಡಿಸಲು ನಿರಂತರವಾದ ಆಧ್ಯಾತ್ಮಿಕ ರಸಾನುಭೂತಿಯ ಸಂಸ್ಕರಣೆಗಳು ಅನಿವಾರ್ಯವಾಗಿದೆ. ಅದಕ್ಕಾಗಿಯೇ ಪವಿತ್ರ ಹಬ್ಬಗಳು ಆಗಮಿಸುತ್ತಿದೆ.
ಸ್ಮರಣೆಯ ಅರಫಾ ದಿನ ಬಂದು ಮರಳುವಾಗ ಸಡಗರ-ಸಂಭ್ರಮದ ಈದ್ ಹಬ್ಬವು ಆಗಮಿಸುತ್ತಿದೆ. ದೈವಿಕವಾದ ಅನುಗ್ರಹ ವರ್ಷ, ಮನುಷ್ಯರು ಪವಿತ್ರ ಪದವಿಯತ್ತ ಮರಳುವುದು ಮುಂತಾದ ಅರ್ಥಗಳು ‘ಈದ್’ ಎಂಬ ಪದಕ್ಕೆ ನೀಡಲಾಗುವುದು.

ಅಂದರೆ ಮನುಷ್ಯ ಮನಸ್ಸುಗಳಲ್ಲಿ ಪ್ರವಾದಿಗಳಾದ ಇಬ್ರಾಹೀಮ್ (ಅ), ಇಸ್ಮಾಈಲ್ (ಅ) ಮತ್ತು ಹಾಜರ್ ಬೀವಿ (ರ) ರವರ ಸ್ಮರಣೆಯು ಉಂಟುಮಾಡಿದ ಆಧ್ಯಾತ್ಮಿಕ ಪ್ರಭಾವಗಳಿಗೆ ಇನ್ನಷ್ಟು ಬಣ್ಣಹಚ್ಚುವುದೇ ಈದ್ ಹಬ್ಬ ಅರ್ಥಾತ್‌ ಪೆರ್ನಾಳ್.
ಉಪವಾಸ ದಿನಗಳಲ್ಲಿ ಅನ್ನ-ಆಹಾರಗಳ ಸೇವನೆ ನಿಷಿದ್ಧವಾಗಿದ್ದರೆ ಈದ್ ದಿನದಂದು ಉಪವಾಸದ ಹೆಸರಿನಲ್ಲಿ ಹಸಿಯುವುದು ಹರಾಮ್ ಆಗಿರುತ್ತದೆ. ತಾನು ಉನ್ನುವುದರೊಂದಿಗೆ ಬಡವರಿಗೂ ಉಣ್ಣಿಸಬೇಕು. ಅದಕ್ಕಾಗಿ ಈದ್ ದಿನದಂದು ಮಾಂಸದ ಮೂಲಕ ದಾನ ಮಾಡಬೇಕು. ಈ ಮೂಲಕ ಬಡವನಿಗೂ ಶ್ರೀಮಂತರ ಜೊತೆಯಲ್ಲಿ ಹಬ್ಬವನ್ನು ಆಚರಿಸಲು ಇಸ್ಲಾಂ ಧರ್ಮವು ಉತ್ತಮವಾದ ಅವಕಾಶಗಳನ್ನು ಮಾಡಿಕೊಡುತ್ತದೆ. ಅಂದರೆ ಈದ್ ಆಚರಣೆಯು ನಿಯಮ ಪರವಾದ ಹಾದಿಯಿಂದ ದೂರ ಸರಿಯದೇ ಕ್ರಮ ಪ್ರಕಾರವಾಗಿರಬೇಕು. ಸಂಬಂಧಿಕರ ಸಂಪರ್ಕ ಮಾಡುವುದು ಇದರಲ್ಲಿ ಅತಿಮುಖ್ಯ. ಕುಟುಂಬ, ನೆರೆಹೊರೆಯವರನ್ನು ಭೇಟಿ ಮಾಡಿ ಕ್ಷೇಮ-ಕ್ಷಮೆ ಪರಸ್ಪರ ವಿನಿಮಯ ಮಾಡುವುದು ಕೂಡಾ ಪುಣ್ಯವಾದ ಕಾರ್ಯವಾಗಿದೆ. ಸಂಬಂಧಿಕರ ಜೊತೆಯಲ್ಲಿ ಕುಳಿತು ಆಹಾರ ಸೇವಿಸುವುದು, ಪರಸ್ಪರ ಶುಭ ಹಾರೈಸುವುದು ಮುಂತಾದವುಗಳ ಮೂಲಕ ಸಂಬಂಧವನ್ನು ಗಟ್ಟಿ ಮಾಡಬೇಕೆಂದು ಪೂರ್ವಿಕ ವಿದ್ವಾಂಸರು ತಿಳಿಸಿದ್ದಾರೆ.

ಹಬ್ಬದ ಹಿನ್ನೆಲೆ

ಈದ್ ಹಬ್ಬವು ಆರಂಭವಾದ ವಿಷಯದ ಕುರಿತು ಸ್ವಹಾಬಿ ಪ್ರಮುಖರಾದ ಅನಸ್ (ಅ) ರವರು ಹೇಳುವುದು ಹೀಗೆ : ಪ್ರವಾದಿವರ್ಯ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಪವಿತ್ರ ಮದೀನಾಕ್ಕೆ ವಲಸೆ ಬಂದಾಗ ಅಜ್ಞಾನಿಗಳಾದ ಅಂದಿನ ಜನರು ಎರಡು ಹಬ್ಬಗಳ ಗುರುತು ಹೇಳುತ್ತಿದ್ದರು. ಆ ಸಂದರ್ಭದಲ್ಲಿ ಪ್ರವಾದಿವರ್ಯರು ಹೇಳಿದರು : ಅವುಗಳಿಗಿಂತಲೂ ಶ್ರೇಷ್ಠವಾದ ಎರಡು ದಿನಗಳನ್ನು ಅಲ್ಲಾಹು ನಮಗೆ ನೀಡಿದ್ದಾನೆ. ಈದುಲ್ ಫಿತ್ರ್ ಮತ್ತು ಈದುಲ್ ಅಳ್ಹಾ (ಹದೀಸ್ – ಅಬೂದಾವೂದ್). ಮುಸ್ಲಿಮರ ಧಾರ್ಮಿಕವಾದ ಆಚರಣೆ ಮತ್ತು ಅದರ ರೀತಿಯು ಹೇಗಿರಬೇಕೆಂದು ಇದರಲ್ಲಿ ಸೂಚಿಸಲಾಗಿದೆ.
ಈದ್ ಹಬ್ಬ ಆಚರಣೆ ಮತ್ತು ವಸ್ತ್ರಧಾರಣೆಗಳು ಇಸ್ಲಾಮಿನ ನೀತಿಯೊಂದಿಗೆ ಹೊಂದುವಂತಿರಬೇಕು. “ಯಾರಾದರೂ ಇಸ್ಲಾಮೇತರರ ಸಂಸ್ಕೃತಿಯೊಂದಿಗೆ ಬೆರೆತರೆ ಆತ ಅವರ ಅನುಯಾಯಿಯಾಗುವವನು” ಎಂಬ ಪ್ರವಾದಿವರ್ಯರ ತಾಕೀತು ಇದರೊಂದಿಗೆ ಸೇರಿಸಿ ವಾಚಿಸಬೇಕಾಗಿದೆ. ಆಧುನಿಕ ಯುಗದ ಫ್ಯಾಷನ್ ಉಡುಗೆ-ತೊಡುಗೆಗಳಿಗೆ ಮಾರು ಹೋಗುವ ನಾವು ಈ ಕಟು ಸತ್ಯವನ್ನು ಮರೆಯದೆ ಸದಾ ನೆನಪಿನಲ್ಲಿಡಬೇಕು. ಇಸ್ಲಾಮೀ ಚಿಹ್ನೆಗಳನ್ನು ಪ್ರದರ್ಶಿಸಿ, ಸ್ವತಃ ಎತ್ತಿ ಹಿಡಿಯಬೇಕೆಂದು ಈದ್ ಹಬ್ಬವು ಸಂದೇಶವನ್ನು ನೀಡುತ್ತದೆ. ಸ್ವಚ್ಛತೆಯನ್ನು ಕಾಪಾಡುವುದು ವ್ಯಕ್ತಿತ್ವ ವಿಕಸನದ ಭಾಗವಾಗಿದೆ.
ಹಝ್ರತ್ ಇಮಾಂ ಶಾಫಿ (ಅ) ರವರು ಹೇಳುತ್ತಾರೆ: “ಯಾರಾದರೂ ವಸ್ತ್ರಗಳನ್ನು ಶುಚಿಕರಿಸಿದ್ದಲ್ಲಿ ಆತನ ಮನಸ್ಸಿನ ದುಃಖವು ಕಡಿಮೆಯಾಗುವುದು. ಸುಗಂಧವನ್ನು ಉಪಯೋಗಿಸಿದರೆ ಬುದ್ಧಿಯು ವೃದ್ಧಿಸುವುದು.” ಈ ದಿನದಂದು ಸುಗಂಧ ಉಪಯೋಗಿಸುವುದಕ್ಕೆ ಪ್ರತ್ಯೇಕ ಪುಣ್ಯ ಲಭ್ಯವಾಗಲಿದೆ.
ಸಾಮಾಜಿಕ ಬಾಧ್ಯತೆಯ ಬಗ್ಗೆ ಸ್ಪಷ್ಟವಾದ ಬೋಧನೆ ಮತ್ತು ತರಬೇತುಗಳು ಈ ಆಚರಣೆಯಲ್ಲಿ ಅಂಟಿ ನಿಂತಿದೆ. ಸಾಮಾಜಿಕ ಸೇವೆಗಳಿಗೆ ಇಸ್ಲಾಮ್ ನೀಡುವ ಬೆಂಬಲವನ್ನು ಎತ್ತಿ ಹೇಳಬೇಕಾಗಿದೆ. ದೇವ ದೂತರಾದ ಜಿಬ್ರೀಲ್ (ಅ) ರವರು ಅಲ್ಲಾಹನ ದಿವ್ಯ ಸಂದೇಶವನ್ನು ಪ್ರವಾದಿವರ್ಯರಿಗೆ ‘ಇಖ್’ರಅ್ ಮೂಲಕ ತಿಳಿಸಿದ ಸಂದರ್ಭದಲ್ಲಿ ಅವರ ಪ್ರಿಯ ಪತ್ನಿ ಖದೀಜಾ (ರ) ರವರು ತನ್ನ ಪತಿ ಪ್ರವಾದಿವರ್ಯರನ್ನು ಸಾಂತ್ವನ ಪಡಿಸಿದ್ದು ಸಾಮಾಜಿಕ ಸೇವೆಗಳನ್ನು ಹೇಳುವುದರ ಮೂಲಕವಾಗಿತ್ತು.
ಪ್ರವಾದಿವರ್ಯರು ಹೇಳಿದರು : ಪ್ರವಾದಿ ಮೂಸಾ (ಅ) ರವರಲ್ಲಿ ಅಲ್ಲಾಹನು ಕೇಳಿದನು ; “ಮೂಸಾ, ನನಗಾಗಿ ಏನು ಮಾಡಿರುವಿರಿ.?”
ಮೂಸಾ (ಅ) ಹೇಳಿದರು : “ನಮಾಜ್ ನಿರ್ವಹಿಸಿರುವೆನು. ವ್ರತಾನುಷ್ಠಾನ ಕೈಗೊಂಡಿರುವೆನು. ತಸ್ಬೀಹ್ ಹೇಳಿರುವೆನು.”
ಅಲ್ಲಾಹನ ಉತ್ತರ :
“ನಮಾಜ್ ಸ್ವಿರಾತ್ ಸೇತುವೆ ದಾಟಲು, ಉಪವಾಸ ನರಕ ಮುಕ್ತಿಗೂ, ತಸ್ಬೀಹ್ ಸ್ವರ್ಗದಲ್ಲಿ ಉನ್ನತ ಸ್ಥಾನ ಪಡೆಯಲೂ ಆಗಿರುತ್ತದೆ. ನೀವು ಬೇರೇನಾದರೂ ಮಾಡಿರುವಿರಾ.?”
ಪ್ರವಾದಿ ಮೂಸಾ (ಅ) ಅಳುತ್ತಾ ನುಡಿದರು :
“ಯಾ ಅಲ್ಲಾಹ್, ಅವುಗಳ ಕುರಿತು ನೀನು ನನಗೆ ಹೇಳಿಕೊಡಬೇಕು.”
ಅಲ್ಲಾಹನ ಪ್ರತ್ಯುತ್ತರ :
“ಹಸಿದವನ ಹೊಟ್ಟೆ ತುಂಬಿಸುವುದು, ಬಾಯಾರಿಕೆಯಾದವನಿಗೆ ಕುಡಿಯಲು ಕೊಡುವುದು, ನಗ್ನತೆ ಮುಚ್ಚಿಸುವುದು, ಸಂಕಷ್ಟದಲ್ಲಿರುವವರಿಗೆ ಸಾಂತ್ವನದ ಹಸ್ತ ಚಾಚುವುದು, ವಿದ್ವಾಂಸರನ್ನು ಗೌರವಿಸುವುದು ಮುಂತಾದುವುಗಳೆಲ್ಲಾ ಪುಣ್ಯ ಕರ್ಮವಾಗಿದೆ.” ಎಂದಾಗಿತ್ತು. (ಅರ್ಬಊನ ಹದೀಸ್)

ಆಚರಣೆಯು ಹೇಗಿರಬೇಕು..?

ಪವಿತ್ರ ಇಸ್ಲಾಂ ಧರ್ಮದ ಹಬ್ಬಗಳು ಮನುಷ್ಯನ ಶಾಂತಿಯುತ ಅಸ್ತಿತ್ವಕ್ಕೆ ಪೂರಕವಾಗಿಯೇ ಇವೆ. ಆರ್ಥಿಕವಾಗಿ ಹಿಂದುಳಿದವರಿಗೆ ದಾನಗಳನ್ನು ನೀಡದೆ ಪೆರ್ನಾಳ್ ಹಬ್ಬವು ಪೂರ್ತಿಯಾಗುವುದಿಲ್ಲ. ಆದುದರಿಂದಲೇ ಸಮಪಾಲು-ಸಮಬಾಳು ಎಂಬ ತತ್ವದ ಘೋಷಣೆಯು ಇದರಲ್ಲಿ ಕಾಣಬಹುದಾಗಿದೆ. ಈದ್ ಹಬ್ಬವನ್ನು ಆಚರಿಸಬೇಕೆಂಬ ಇಸ್ಲಾಮಿನ ಆದೇಶದಲ್ಲಿ ಮನುಷ್ಯನಿಗೆ ಸುಂದರವಾದ ಪಾಠವಿದೆ.

ಇತರ ಸಂದರ್ಭಗಳಲ್ಲಿ ತ್ಯಾಗ ಪೂರಿತ ಬದುಕು ಸವೆಸಿ, ಉನ್ನತ ಸ್ಥಾನಗಳನ್ನು ಸಂಪಾದಿಸುವಷ್ಟು ಒಳಿತುಗಳನ್ನು ಮಾಡಿದ ಜನರು ಪೆರ್ನಾಳ್ ದಿನದಂದು ಅವುಗಳನ್ನು ಗಾಳಿಗೆ ತೂರಿ ಬಿಡುವಷ್ಟು ಸಡಗರದ ಸಂಭ್ರಮ ಆಚರಿಸುವುದು, ಇತರರಿಗೆ ಅಡಚಣೆ ಉಂಟು ಮಾಡುವುದು ಯಾವುದೂ ಸಲ್ಲದು. ಪವಿತ್ರ ಇಸ್ಲಾಂ ಧರ್ಮದಲ್ಲಿ ಎಲ್ಲದಕ್ಕೂ ನೀತಿ-ನಿಯಮಗಳಿವೆ. ಅವುಗಳನ್ನು ಮೆಟ್ಟಿ ನಿಂತು ನಡೆಯುವ ಆಧ್ಯಾತ್ಮಿಕ ರಸಾನುಭೂತಿಯು ಹಲವು ಸಂದರ್ಭಗಳಲ್ಲಿ ಲಭಿಸಿದೆ.

ಬದುಕಿನಲ್ಲಿ ಎದುರಾಗಬಹುದಾದ ಸಣ್ಣಪುಟ್ಟ ಎಡರು-ತೊಡರುಗಳನ್ನು ಸಂಭಾಳಿಸಿ ಮುನ್ನಡೆಯುವ ಎದೆಗಾರಿಕೆಯನ್ನು ವಶಪಡಿಸಿಕೊಳ್ಳಲು ಕಳೆದ ದಿನಗಳಲ್ಲಿ ತರಭೇತು ಸಿಕ್ಕಿದೆ. ಸೃಷ್ಟಿಕರ್ತನ ತೀರ್ಮಾನದ ಮುಂದೆ ಉಳಿದೆಲ್ಲವೂ ಗೌಣ ಎಂಬ ಧೃಡತೆ ಮನುಷ್ಯ ಮನಸ್ಸಿನಲ್ಲಿ ರೂಢ ಮೂಲವಾದರೆ ಅಲ್ಲಿ ಸಭ್ಯ- ಸ್ವಚ್ಛ- ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಸೃಷ್ಟಿಕರ್ತನಿಗೆ ಆರಾಧನೆ ಸಲ್ಲಿಸುವುದರ ಜೊತೆಗೆ ಸಂಬಂಧಿಕರು, ನೆರೆಹೊರೆಯವರನ್ನು ಸಾಂತ್ವನ ಪಡಿಸಿ ಪರಸ್ಪರ ಕ್ಷಮೆ- ಕ್ಷೇಮ, ಸುಖ – ದುಃಖ ವಿನಿಮಯ ಮಾಡಿ ಹಬ್ಬಗಳನ್ನು ಆಚರಿಸಬೇಕೆಂಬ ಬೇಡಿಕೆ-ಬಯಕೆಯ ಹಿಂದೆ ಉತ್ತಮವಾದ ಸಮಾಜ ನಿರ್ಮಾಣದ ಗುರಿಯಿದೆ. ದೇವ ಸಾಮೀಪ್ಯ ಬಯಸುವವನ ಸಾಮಾಜಿಕ ಬದುಕು ಕೂಡ ಪರಿಗಣಿಸಲ್ಪಡುವುದು ಇಲ್ಲಿನ ವಿಶೇಷತೆಯಾಗಿದೆ. ಕುಡಿದು,ಕುಣಿದು, ಪಟಾಕಿ ಸಿಡಿಸಿ ಕುಪ್ಪಳಿಸುವ ಹಬ್ಬಗಳಲ್ಲಿ ಸಾಮಾಜಿಕ ಬದ್ಧತೆಯ ಅಭಾವ ಎದ್ದು ಕಾಣುತ್ತಿದೆ.

ಜಗತ್ತಿಗೊಮ್ಮೆ ಕಣ್ಣು ಹಾಯಿಸಿ ನೋಡಿ.! ಎಲ್ಲಾ ಧರ್ಮಗಳು ಕೂಡ ಹಬ್ಬಗಳನ್ನು ಆಚರಿಸುತ್ತವೆ. ಹಬ್ಬಗಳಿಲ್ಲದ ಧರ್ಮಗಳು ಯಾವುದಿವೆ.? ಅದರಲ್ಲೂ ಹಲವು ವಿಚಿತ್ರ – ವಿಕೃತ ರೀತಿಯ ಹಬ್ಬಗಳನ್ನು ಆಚರಿಸುವ ಮಂದಿಗಳು ಇಂದಿಗೂ ಇದ್ದಾರೆ. ಹಬ್ಬಗಳು ಸಂತಸದ ಸಂಭ್ರಮವನ್ನು, ಆನಂದದ ಕ್ಷಣಗಳನ್ನು, ಆಹ್ಲಾದಕರವಾದ ಸಂಗತಿಗಳನ್ನು ತೋರ್ಪಡಿಸಲಿಕ್ಕೇ ಹೊರತು ಸಂತಸದ ಸಮಾಪ್ತಿಗೆ ಕಾರಣವಾಗಬಾರದು. ಇನ್ನೊಂದು ವಿಷಯವೆಂದರೆ ಹಬ್ಬಗಳೆಂದ ಮೇಲೆ ಅವುಗಳಿಗೆ ತಾರ್ಕಿಕವಾದ ಚಾರಿತ್ರಿಕ ಪರಂಪರೆಗಳು ಇರಬೇಕು. ಹಬ್ಬದ ಕಾರಣದಿಂದಾಗಿಯೇ ಕಣ್ಣು ಕಳೆದುಕೊಂಡ ಕುರುಡನಾಗುವ, ಕಿವಿ ಕೆಟ್ಟು ಕಿವುಡನಾಗುವ, ಮಾತು ನಿಂತು ಮೂಕನಾಗುವ, ಶರೀರದ ಅಂಗಾಗಳಿಗೆ ಅಪಾಯವಾಗುವ, ಸಂಭ್ರಮದ ನೆಪದಲ್ಲಿ ಮಧ್ಯಪಾನ ಸೇವಿಸಿ ಅಪ್ರಜ್ಞಾವಸ್ಥೆಗೆ ತಲುಪಿ ಒಂದಷ್ಟು ತಾಸು ಮಾನವೀಯತೆಯನ್ನೇ ಕಳೆದುಕೊಂಡು ಮೃಗೀಯತೆಯನ್ನು ಮೈಗೂಡಿಸಿಕೊಳ್ಳುವ, ಆಹಾರ- ಪದಾರ್ಥಗಳನ್ನು ಪೋಲು ಮಾಡುವುದೆಲ್ಲವೂ ಪುಣ್ಯಕರ್ಮ ಎಂದು ಬಿಂಬಿಸುವ ಹಬ್ಬಗಳಿಂದ ಬೌದ್ಧಿಕ ವಿಕಾಸವಾಗದು.

ಮುಗಿಸುವ ಮುನ್ನ

ಸತ್ಯ ವಿಶ್ವಾಸಿಗಳ ಪಾಲಿಗೆ ಸಂತೋಷದ ಸಿಹಿ ಸಿಂಚನವನ್ನು ಸುರಿಸುವ ಸಂಭ್ರಮವಾಗಿದೆ ಈದ್. ನಿತ್ಯ ಬದುಕಿನ ಜಂಜಾಟದ ನಡುವೆ ಸಣ್ಣದೊಂದು ರಿಲ್ಯಾಕ್ಸ್ ಗಳಿಗಾಗಿ ಸಂತಸವನ್ನು ಆಚರಿಸಬೇಕೆನ್ನುವ ಮನುಷ್ಯನ ಸಹಜವಾದ ಹಂಬಲಕ್ಕೆ ಬೆಂಬಲ ನೀಡುವ ಸಲುವಾಗಿ ಇಸ್ಲಾಂ ಪೆರ್ನಾಳ್ ಹಬ್ಬವನ್ನು ನಿಗದಿಗೊಳಿಸಿದೆ.

ನೆನಪಿರಲಿ, ನಾವಿಲ್ಲಿ ಹಬ್ಬದ ಹೆಸರಿನಲ್ಲಿ ಸಂಭ್ರಮ ಪಡುವಾಗ
ದೇಶವಿದೇಶಗಳ ಹಲವು ಪ್ರದೇಶದಲ್ಲಿ ಬದುಕನ್ನು ಕೈಯಲ್ಲಿ ಹಿಡಿದು ನಮ್ಮಂತಹ ಕೋಟ್ಯಾಂತರ ಜನರು ಬದುಕುಳಿಯಲು ಹಂಬಲಿಸುತ್ತಿದ್ದಾರೆ. ಈದ್ ಪ್ರಾರ್ಥನೆಯಲ್ಲಿ ಅವರನ್ನು ಸೇರಿಸೋಣ. ಅವರ ಸ್ಥಿತಿಯು ಇನ್ಯಾರಿಗೂ ಬಾರದಿರಲಿ. ಮುಂದಿನ ಹಬ್ಬವಾದರೂ ಅವರಿಗೊಲಿಯಲಿ.
ಸಮಸ್ತ ನಾಗರೀಕರಿಗೆ ಈದ್ ಹಬ್ಬದ ಶುಭಕಾಮನೆಗಳು

ಬರಹ : ಎಂಕೆಎಂ ಕಾಮಿಲ್ ಸಖಾಫಿ ಕೊಡಂಗಾಯಿ
(ತೌಬಃ ಜುಮಾ ಮಸ್ಜಿದ್ ಮೋಂತಿಮಾರ್)

error: Content is protected !! Not allowed copy content from janadhvani.com