janadhvani

Kannada Online News Paper

ಸಾವಿಗೂ ಅಳತೆ ಮಾಪನ ಸೃಷ್ಟಿಸಿದ ಸಿ.ಎಂ.ಬೊಮ್ಮಾಯಿ- ಮುಸ್ಲಿಮ್ ಒಕ್ಕೂಟ ಆಕ್ರೋಶ

ಬೊಮ್ಮಾಯಿಯವರು ಉಭಯ ಸಾವನ್ನು ಒಂದೇ ದೃಷ್ಟಿಯಲ್ಲಿ ನೋಡಿದ್ದರೆ, ಖಂಡಿತ ಮೂರನೇ ಸಾವನ್ನು ನೈತಿಕವಾಗಿ ತಡೆಯ ಬಹುದಿತ್ತು.

ದ.ಕ.ಜಿಲ್ಲೆ ಕಳೆದ ಹಲವು ದಶಕಗಳಿಂದ ಮತೀಯ ಸೂಕ್ಷ್ಮ ಜಿಲ್ಲೆ.ಇದರ ಅಂತಿಮ ಫಸಲು ರಾಜಕೀಯ ಪಕ್ಷಗಳೇ ಮೇಯುತ್ತಿದೆ. ಈ ಬೆಳವಣಿಗೆ ಇಂದಿನವರೆಗೂ ಮುಂದುವರಿದಿದೆ. ಇತ್ತೀಚೆಗೆ ಸುಳ್ಯದಲ್ಲಿನ ಘಟನೆಗಳು ಈ ದೇಶದಲ್ಲಿ ಕನಿಷ್ಠ ರಾಜಧರ್ಮ ಪಾಲಿಸುವ ಆಡಳಿತಗಾರರ ವಂಶ ಅಂತಿಮವಾಗುತ್ತಾ ಬರುವ ಸೂಚನೆಗೆ ಬಂದು ನಿಲ್ಲುವ ಸ್ಥಿತಿ ಸೃಷ್ಟಿಯಾಗಿದೆ.

ಸುಳ್ಯದ ಸಾವುಗಳು ಖಂಡನೀಯ, ಆದರೆ ಈ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು ಸಾವಿನಲ್ಲಿ ಸತ್ತವನ ಧರ್ಮ ನೋಡಿದರು, ಮತ್ತು ತನ್ನ ಭೇಟಿಯನ್ನು ಪ್ರವೀಣ್ ನೆಟ್ಟಾರು ಮನೆಗೆ ಸೀಮಿತ ಗೊಳಿಸಿ ಸಾಂತ್ವನ ಹೇಳಿ ಪರಿಹಾರ ಘೋಷಿಸಿ ಹಿಂತಿರುಗಿದರು. ಅದೇ ಕೆಲವು ದಿನ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಯಾದ ಮಸೂದ್ ಮನೆಗೆ ಸಾಂತ್ವಾನ ಭೇಟಿ ನೀಡಲಿಲ್ಲ. ಹಿಂತಿರುಗಿ ಬೆಂಗಳೂರು ತಲುಪುವ ಮುನ್ನವೇ ತನ್ನ ಕ್ರಿಯೆಗೆ ಪ್ರತಿಕ್ರಿಯೆ ಸಿದ್ದಾಂತವನ್ನು ಈ ಹಿಂದೆ ಮಂಗಳೂರಿನಲ್ಲಿ ಪ್ರತಿಪಾದಿಸಿದಂತೆ, ಸುರತ್ಕಲ್ ನ ಮುಸ್ಲಿಮ್ ಯುವಕನ ಮತೀಯ ಹತ್ಯೆಗೆ ಕಾರಣರಾದರು.

ಈ ಮೂಲಕ ಬೊಮ್ಮಾಯಿಯವರು ಉಭಯ ಸಾವನ್ನು ಒಂದೇ ದೃಷ್ಟಿಯಲ್ಲಿ ನೋಡಿದ್ದರೆ, ಖಂಡಿತ ಮೂರನೇ ಸಾವನ್ನು ನೈತಿಕವಾಗಿ ತಡೆಯ ಬಹುದಿತ್ತು. ಇದು ರಾಜಧರ್ಮ, ಆದರೆ ದುರದೃಷ್ಟವಶಾತ್ ಬೊಮ್ಮಾಯಿ ಯವರು ಸಾವಿನ ಅಳತೆಯ ಮಾಪನವನ್ನು ಈ ರಾಜ್ಯದ ಜನತೆಗೆ ಕೊಡುಗೆ ನೀಡಿದರು.

ಇಂದು ಬೊಮ್ಮಾಯಿ ನೀಡಿದ ಈ ಕೊಡುಗೆ ಮುಂದೆ ಇನ್ನಿತರ ಸಮುದಾಯಕ್ಕೆ ಅನ್ವಯವಾಗುವ ಭೀತಿ ಸೃಷ್ಟಿಯಾಗಿದೆ. ಈ ದೇಶದ ಜಾತ್ಯಾತೀತ ಸಂಕಲ್ಪ ಉಳ್ಳ ಸರ್ವರೂ ಈ ಬೆಳವಣಿಗೆಗಳ ಬಗ್ಗೆ ವಿಮರ್ಶಿಸ ಬೇಕಿದೆ. ಸಂಭವಿಸಿದ ಸಾವಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಸರಕಾರಕ್ಕೆ ಇರಲಿ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಇದರ ಅಧ್ಯಕ್ಷರಾದ ಕೆ.ಅಶ್ರಫ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com