janadhvani

Kannada Online News Paper

ದಕ ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳಿಗೆ ಕಡಿವಾಣ ಬೀಳಲಿ-SMA ರಾಜ್ಯ ಸಮಿತಿ ಆಗ್ರಹ

ದುಷ್ಕರ್ಮಿಗಳು ಮಾಡುವ ಪಾಪಕೃತ್ಯಗಳನ್ನು ಧರ್ಮದ ಮೇಲೆ ಎತ್ತಿಕಟ್ಟುವುದು ಅಕ್ಷಮ್ಯ ಅಪರಾಧ

ದ.ಕ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಶಾಂತಿಪ್ರಿಯ ನಾಗರಿಕರನ್ನು ಬೆಚ್ಚಿಬೀಳಿಸುವಂತೆ ಮಾಡಿದೆ. ಸುಳ್ಯದಲ್ಲಿ ನಡೆದ ಮಸೂದ್ ಮತ್ತು ಪ್ರವೀಣ್ ಹಾಗೂ ಸುರತ್ಕಲ್’ನ ಫಾಝಿಲ್ ಎಂಬ ಯುವಕನ ಕೊಲೆ ಅತ್ಯಂತ ಅಮಾನವೀಯ ಮತ್ತು ಹೇಯ ಕೃತ್ಯವಾಗಿದೆ.

ಮಾನವೀಯತೆ ಇರುವವರಿಗೆ ಖಂಡಿತಕ್ಕೂ ಇದನ್ನು ಮಾಡಲು ಸಾಧ್ಯವಿಲ್ಲ. ಇಂತಹ ನೀಚ ಕೃತ್ಯಗಳನ್ನು ಎಲ್ಲರೂ ಒಕ್ಕೊರಳಿನಿಂದ ಖಂಡಿಸಲೇಬೇಕು. ಕೊಲೆ ಮಾಡುತ್ತಿರುವ ಗೂಂಡಾಗಳು ಈ ಮೂಲಕ ಪವಿತ್ರವಾದ ಧರ್ಮಗಳನ್ನು ಅಪಹಾಸ್ಯಕ್ಕೀಡು ಮಾಡುತ್ತಿದ್ದಾರೆ.

ದುಷ್ಕರ್ಮಿಗಳು ಮಾಡುವ ಪಾಪಕೃತ್ಯಗಳನ್ನು ಧರ್ಮದ ಮೇಲೆ ಎತ್ತಿಕಟ್ಟುವುದು ಅಕ್ಷಮ್ಯ ಅಪರಾಧ. ಯಾವುದೇ ಧರ್ಮಗಳು ಹಿಂಸೆಗಳನ್ನು ಪ್ರಚೋದಿಸುವುದಿಲ್ಲ. ಇಂತಹ ಘಟನೆಗಳು ಜಿಲ್ಲೆಯಲ್ಲಿ ಪದೇ ಪದೇ ಮರುಕಳಿಸುತ್ತಿರುವುದರ ಹಿಂದೆ ರಾಜಕೀಯ ಷಡ್ಯಂತ್ರ ಗೋಚರವಾಗುತ್ತಿದೆ.ಚುನಾವಣೆವರೆಗೂ ಇಂತಹ ಪರಿಸ್ಥಿತಿ ಮುಂದುವರಿದರೆ ನಾಡಿನ ಸ್ಥಿತಿ ಏನಾಗಬಹುದೆಂದು ನಾಗರಿಕರು ಆತಂಕಿತರಾಗಿದ್ದಾರೆ.

ಆದ್ದರಿಂದ ಈ ಕ್ರೌರ್ಯದ ವಿರುದ್ಧ ಸಮಾಜ ಧರ್ಮ ರಹಿತವಾಗಿ ಧ್ವನಿ ಎತ್ತಬೇಕು.ಪ್ರಜಾಪ್ರಭುತ್ವ ರೀತಿಯಲ್ಲಿ ಆಯ್ಕೆಗೊಂಡ ಸರಕಾರವೊಂದು ಸಾವಿನಲ್ಲೂ ತಾರತಮ್ಯ ನೀತಿ ಅನುಸರಿಸಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಎಂಬಂತಹ ಕೆಲಸ ಮಾಡಬಾರದು.ಇಂತಹಾ ದ್ವಂದ್ವ ನಿಲುವು ಪ್ರಜಾಪ್ರಭುತ್ವ ಸರ್ಕಾರದಿಂದ ನಡೆಯುತ್ತಿರುವುದು ಖೇದಕರ.

ಇಂತಹ ಘಟನೆಗಳನ್ನೇ ನೆಪವಾಗಿಸಿ ಸಮಾಜದಲ್ಲಿ ಶಾಂತಿ ಕದಡುವ ದುಷ್ಟಶಕ್ತಿಗಳನ್ನು ಪೊಲೀಸ್ ಇಲಾಖೆ ಮಟ್ಟ ಹಾಕಿ ಜನರಿಗೆ ರಕ್ಷಣೆ ಕೊಡಬೇಕು. ಸರಕಾರ ಮತ್ತು ಪೊಲೀಸ್ ಇಲಾಖೆ ಯಾವುದೇ ಪಕ್ಷಪಾತ ಧೋರಣೆ ಹೊಂದುವುದರಿಂದ ಇಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ನಾಶವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ, ಆದ್ದರಿಂದ ಈ ಘಟನೆಯನ್ನು ಕರ್ನಾಟಕ ರಾಜ್ಯ ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ SMA ರಾಜ್ಯ ಸಮಿತಿ ತೀವ್ರವಾಗಿ ಖಂಡಿಸಿದೆ.

ಸರ್ವ ನಾಗರಿಕರು ಶಾಂತಿ ಕಾಪಾಡುವುದರ ಮೂಲಕ ಜನರು ನೆಮ್ಮದಿಯಿಂದ ಬದುಕುವಂತಾಗಬೇಕು. ಅಪರಾಧಿಗಳು ಯಾರೇ ಆದರೂ ಕಾನೂನು ಅಡಿಯಲ್ಲಿ ಶಿಕ್ಷಿಸಿ, ನೊಂದ ಕುಟುಂಬಕ್ಕೆ ಪರಿಹಾರ ನೀಡಿ ಸರಕಾರ ನ್ಯಾಯ ಒದಗಿಸಬೇಕು.

ಪರಿಸ್ಥಿತಿಯ ಲಾಭ ಪಡೆದು ಅಮಾಯಕರನ್ನು ಬಂಧಿಸುವ ಕೆಲಸವನ್ನು ಪೊಲೀಸ್ ಅಧಿಕಾರಿಗಳು ಮಾಡಬಾರದು. ಇಂತಹ ಪ್ರಕರಣಗಳು ಪುನರಾವರ್ತನೆಗೊಳ್ಳದಂತೆ ಸರ್ಕಾರ ಎಚ್ಚೆತ್ತುಕೊಂಡು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಎಸ್ಎಂ ಎ ರಾಜ್ಯ ನಾಯಕರಾದ ಹಾಜಿ ಹಮೀದ್ ಕೊಡುಂಗಾಯಿ ಮತ್ತು ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಮಾನ್ ಮದನಿ ಜೆಪ್ಪು ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ಸರಕಾರವನ್ನು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com