janadhvani

Kannada Online News Paper

ವಾಟ್ಸಾಪ್ ಸಂದೇಶಗಳನ್ನು ಸಾಕ್ಷ್ಯಾಧಾರವಾಗಿ ಪರಿಗಣಿಸಲಾಗದು – ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಸಾಮಾಜಿಕ ಮಾಧ್ಯಮ ವೇದಿಕೆಯಾಗಿರುವ ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಗುವ ಸಂದೇಶಗಳಿಗೆ ಯಾವುದೇ ಸಾಕ್ಷ್ಯಾಧಾರದ ಮೌಲ್ಯವಿಲ್ಲ ಎಂದು ಹೇಳಿದೆ. ಮುಖ್ಯವಾಗಿ ಒಪ್ಪಂದಗಳ ಮೂಲಕ ನಡೆಯುವ ಉದ್ಯಮ ಪಾಲುದಾರಿಕೆಗಳಲ್ಲಿ ವಾಟ್ಸಾಪ್ ಸಂದೇಶಗಳ ಸೃಷ್ಟಿಕರ್ತನನ್ನು ಅವುಗಳಿಗೆ ಹೊಣೆಗಾರನನ್ನಾಗಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

‘ಈ ದಿನಗಳಲ್ಲಿ ವಾಟ್ಸಾಪ್ ಸಂದೇಶಗಳಿಗೆ ಯಾವ ಸಾಕ್ಷ್ಯಾಧಾರದ ಮೌಲ್ಯವಿದೆ? ಇಂದಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಏನನ್ನು ಬೇಕಾದರೂ ಸೃಷ್ಟಿಸಬಹುದು ಮತ್ತು ಅಳಿಸಿ ಹಾಕಬಹುದು. ವಾಟ್ಸಾಪ್ ಸಂದೇಶಗಳಲ್ಲಿ ಯಾವುದೇ ಮೌಲ್ಯ ಇದೆ ಎಂದು ನಾವು ಪರಿಗಣಿಸುವುದಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ಹೃಷಿಕೇಶ್ ರಾಯ್ ಅವರನ್ನು ಒಳಗೊಂಡ ನ್ಯಾಯಪೀಠ ಹೇಳಿದೆ.

ಏನಿದು ಪ್ರಕರಣ?
ತ್ಯಾಜ್ಯ ಸಾಮಗ್ರಿ ಸಂಗ್ರಹ ಮತ್ತು ಸಾಗಾಣಿಕೆಗಾಗಿ ದಕ್ಷಿಣ ದಿಲ್ಲಿ ಪಾಲಿಕೆ (ಎಸ್‌ಡಿಎಂಸಿ) ಮತ್ತು ಎ2ಜೆಡ್ ಇನ್‌ಫ್ರಾ ಸರ್ವೀಸಸ್ ಹಾಗೂ ಮತ್ತೊಂದು ಸಂಸ್ಥೆ ನಡುವೆ 2016ರ ಡಿಸೆಂಬರ್ 2ರಂದು ಸಮ್ಮತಿ ಒಪ್ಪಂದ ನಡೆದಿತ್ತು. 2017ರ ಏಪ್ರಿಲ್ 28ರಂದು ಎ2ಜೆಡ್ ಕಂಪೆನಿಯು ಕ್ಯುಪ್ಪೋ ಇನ್‌ಫ್ರಾಸ್ಟ್ರಕ್ಚರ್ ಎಂಬ ಮತ್ತೊಂದು ಕಂಪೆನಿ ಜತೆ ಒಡಂಬಡಿಕೆ ಮಾಡಿಕೊಂಡಿತ್ತು. ಎ2ಜೆಡ್‌ನಿಂದ ಸಿಗುವ ಎಲ್ಲ ಹಣವನ್ನೂ ಮೂರನೇ ವ್ಯಕ್ತಿ ಖಾತೆಯಲ್ಲಿ ಇರಿಸಿ, ಅದರ ಮೂಲಕ ಉಳಿದ ಎಲ್ಲ ಪಾವತಿಗಳನ್ನು ಮಾಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಕಳೆದ ವರ್ಷ ಮೇ 28ರಂದು ಎ2ಜೆಡ್ ಎಲ್ಲ ಗುತ್ತಿಗೆ ಒಪ್ಪಂದಗಳನ್ನೂ ರದ್ದುಗೊಳಿಸಿದ್ದರಿಂದ ಕ್ಯುಪ್ಪೋ ಸಂಸ್ಥೆ

ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು. 2020ರ ಮಾರ್ಷ್ 19ರಂದು ವಾಟ್ಸಾಪ್ ಸಂದೇಶದಲ್ಲಿ ಎ2ಜೆಡ್ ಸಂಸ್ಥೆಯು ಕ್ಯುಪ್ಪೋಗೆ 8.18 ಕೋಟಿ ರೂ ಪಾವತಿ ಹಣ ಬಾಕಿ ಇರುವುದನ್ನು ಒಪ್ಪಿಕೊಂಡಿತ್ತು. ಅಲ್ಲದೆ ಕ್ಯುಪ್ಪೋ, 2018ರಲ್ಲಿ ಎಸ್‌ಡಿಎಂಸಿಯಿಂದ ಪಡೆದ ಎ2ಜೆಡ್ ತನ್ನ ಎಲ್ಲ ಹಣವನ್ನೂ ಮೂರನೇ ವ್ಯಕ್ತಿ ಖಾತೆಯಲ್ಲಿ ಠೇವಣಿ ಇರಿಸುವುದಾಗಿ ಇಮೇಲ್ ಕಳುಹಿಸಿದ್ದನ್ನೂ ಅದು ತೋರಿಸಿತ್ತು.

ಸುಪ್ರೀಂ ಕೋರ್ಟ್‌ನ ಅಧಿಕೃತ ಸಂವಹನಕ್ಕೆ ಇನ್ನು ಮುಂದೆ ವಾಟ್ಸಾಪ್‌ ಬಳಕೆ ಇಲ್ಲ
ವಾಟ್ಸಾಪ್ ಪುರಾವೆಯಾಗಲಾರದು
ವಾಟ್ಸಾಪ್ ಸಂದೇಶವು ನಕಲಿಯಾಗಿದ್ದು, ಅದನ್ನು ತಿರುಚಲಾಗಿದೆ ಎಂದು ಎ2ಜೆಡ್ ವಾದಿಸಿತ್ತು. ಆದರೆ ಕಲ್ಕತ್ತಾ ಹೈಕೋರ್ಟ್, ಕ್ಯುಪ್ಪೋ ಪರ ತೀರ್ಪು ನೀಡಿತ್ತು. ಮೂರನೇ ವ್ಯಕ್ತಿ ಖಾತೆಗೆ ಹಣ ಪಾವತಿಸುವಂತೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ವಾಟ್ಸಾಪ್ ಸಂದೇಶದ ಭಾಗವನ್ನು ತಾನು ಒಪ್ಪುವುದಿಲ್ಲ ಎಂದು ತಿಳಿಸಿತು.

ನ್ಯಾಯಮಂಡಳಿಯ ಬಳಿ ಈ ಪ್ರಕರಣ ಬಗೆಹರಿಸಿಕೊಳ್ಳಬೇಕು. ಅದರ ತೀರ್ಪಿಗೆ ಎರಡೂ ಸಂಸ್ಥೆಗಳು ಬದ್ಧವಾಗಿರಬೇಕು ಎಂದು ಸುಪ್ರೀಂಕೋರ್ಟ್ ಹೇಳಿತು.
ಆದರೆ, ಸುಪ್ರೀಂಕೋರ್ಟ್ ನೀಡಿರುವ ಹೇಳಿಕೆ ಗೊಂದಲ ಮೂಡಿಸಿದೆ. ವಾಟ್ಸಾಪ್ ಮೂಲಕ ಯಾವುದೇ ಬಲವಾದ ಪುರಾವೆ ರವಾನಿಸಿದ್ದರೂ ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎನ್ನುವುದು ಅಪರಾಧಿಗಳಿಗೆ ರಕ್ಷಣೆ ಒದಗಿಸುವ ಅವಕಾಶವನ್ನೂ ಒದಗಿಸಬಹುದು. ವಾಟ್ಸಾಪ್ ಮೂಲಕ ಅಪರಾಧದ ವಿಡಿಯೋ ರವಾನಿಸಿದ್ದರೆ ಅದನ್ನು ಸಾಕ್ಷ್ಯ ಎಂದು ಪರಿಗಣಿಸದೆ ಇದ್ದರೆ ಸೂಕ್ತ ನ್ಯಾಯ ದೊರಕದೆ ಇರುವ ಸಂಭವ ಇದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

error: Content is protected !! Not allowed copy content from janadhvani.com