janadhvani

Kannada Online News Paper

ಕೆಸಿಎಫ್ ಚಾರ್ಟೆಡ್ ವಿಮಾನ:ಎಸ್ಸಾರ್ಜೆ ಮಾಡನ್ನೂರ್ ರವರ ಅನುಭವದ ಮಾತು

ಸೃಷ್ಟಿಕರ್ತನ ಅಪಾರವಾದ ಅನುಗ್ರಹದಿಂದ ಇಂದು (ಸೆಪ್ಟೆಂಬರ್ 13) ಬೆಳಿಗ್ಗೆ ಮನೆ ತಲುಪಿ “ಹೋಮ್ ಕ್ವಾರೆಂಟೈನ್” ನಲ್ಲಿದ್ದೇನೆ.

ಅಂತರಾಷ್ಟ್ರೀಯ ವಿಮಾನಯಾನ ಕಾರ್ಯನಿರ್ವಹಿಸಲು ಆರಂಭವಾಗದ ಹಿನ್ನಲೆಯಲ್ಲಿ ಅದೆಷ್ಟೋ ಅನಿವಾಸಿ ಭಾರತೀಯರು ಊರಿಗೆ ಮರಳಲು ಸಾಧ್ಯವಾಗದೆ ಇದ್ದಾಗ ಅನಿವಾಸಿ ಸಹೋದರರ ಭಾವನೆಗಳಿಗೆ ಸ್ಪಂದಿಸುವ ದೃಷ್ಟಿಯಿಂದ ಹಲವು ಸಂಘಟನೆಗಳು ಆಯೋಜಿಸುವ ಚಾರ್ಟಡ್ ವಿಮಾನ ವ್ಯವಸ್ಥೆಯು ನಮ್ಮಂತವರ ಪಾಲಿಗೆ ಒಂದು ವರದಾನ ಅಂತಲೇ ಹೇಳಬಹುದು.

ನನಗೆ ಊರಿಗೆ ತಲುಪಲು ಸಹಕಾರಿಯಾದ “ಕೆಸಿಎಫ್ ಸೌದಿ ಅರೇಬಿಯಾ” ದಮ್ಮಾಮಿನಿಂದ ಆಯೋಜಿಸಿದ ಎರಡನೇ ಚಾರ್ಟಡ್ ವಿಮಾನದಲ್ಲಿ ಉತ್ತಮ ಸೇವೆಯ ಅನುಭವ ಸಿಕ್ಕಿದೆ.
ಟಿಕೇಟ್ ಖರೀದಿಸಿದಾಗಿನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುವವರೆಗೂ ವಾಟ್ಸಪ್ ಗ್ರೂಪ್ ನಲ್ಲಿ ಕೆಸಿಎಫ್ ನೇತಾರರು ನಿರಂತರವಾಗಿ ಪ್ರಯಾಣಿಕರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ಕ್ಷಣ ಕ್ಷಣದ ಮಾಹಿತಿಯನ್ನು ಒದಗಿಸಿ ಕೊಟ್ಟಿದ್ದಾರೆ.

ಕೋವಿಡ್-19 ಹಿನ್ನಲೆಯಲ್ಲಿ ದಮ್ಮಾಮ್ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಲ್ಲಿ ಹೆಚ್ಚುವರಿಯಾಗಿ ಒದಗಿಸಿ ಕೊಡಬೇಕಾದ ಪ್ರಯಾಣಿಕರ ಮಾಹಿತಿಗಳ ಫಾರಮ್ ಲಿಂಕ್’ಗಳನ್ನು ಆಯೋಜಕರು ಮೊದಲೇ ಕಳುಹಿಸಿಕೊಟ್ಟು ಭರ್ತಿಮಾಡಿಸಿಟ್ಟಿದ್ದ ಕಾರಣ ಪ್ರಯಾಣಿಕರಿಗೆ ಎರಡೂ ಕಡೆಯ ವಿಮಾನ ನಿಲ್ದಾಣಗಳಲ್ಲಿ ನಿರಾಯಾಸವಾಗಿ ಕೆಲಸ ಮುಗಿದಿದೆ.

ನಿರಂತರ ಮಾಹಿತಿಗಳನ್ನು ಕೊಟ್ಟರೂ ಸಹ ಫಾರ್ಮ್ ಭರ್ತಿಮಾಡಲು ತಿಳಿಯದ ಪ್ರಯಾಣಿಕರು “ಕೆಸಿಎಫ್ ಚಾರ್ಟಡ್ ವಿಮಾನ” ಆಯೋಜಕರನ್ನು ಯಾವುದೇ ಸಮಯದಲ್ಲೂ ಗ್ರೂಪಿನಲ್ಲಿ ಮತ್ತು ಪರ್ಸನಲ್ ಆಗಿ ಸಂಪರ್ಕಿಸಿದಾಗ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ಎಲ್ಲವನ್ನೂ ತಿಳಿಸಿಕೊಟ್ಟು ತಮ್ಮ ಜವಾಬ್ದಾರಿಯನ್ನು ಬಹಳ ಜಾಗರೂಕವಾಗಿ ನಿಭಾಯಿಸಿದ್ದಾರೆ.

ತಾಂತ್ರಿಕ ದೋಷದ ಕಾರಣ ನಿಗದಿತ ಸಮಯಕ್ಕಿಂತ ಎರಡು ಮೂರು ಗಂಟೆ ದಮ್ಮಾಮಿನಿಂದ ತಡವಾಗಿ ಹೊರಟ ವಿಮಾನ ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ಲ್ಯಾಂಡ್‌ ಮಾಡಿದಾಗ ಅದಾಗಲೇ ದಮ್ಮಾಮಿನಲ್ಲಿ ಹೆಚ್ಚುವರಿ ಮೂರು ಗಂಟೆಗಳನ್ನು ಕಳೆದಿದ್ದ ಪ್ರಯಾಣಿಕರ ಮುಖದಲ್ಲಿ ಇದ್ಯಾವಾಗ ಮಂಗಳೂರು ತಲುಪುತ್ತೋ ಎಂಬ ಭಾವ ಮೂಡಿತ್ತು. ವಿಮಾನದ ತಾಂತ್ರಿಕ ದೋಷದಿಂದ ಉಂಟಾಗುವ ವಿಳಂಬಕ್ಕೆ ಆಯೋಜಕರು ಜವಾಬ್ದಾರರಲ್ಲದಿದ್ದರೂ, ಕೆಸಿಎಫ್ ಚಾರ್ಟಡ್ ವಿಮಾನ ಆಯೋಜಕರು ಪ್ರಯಾಣಿಕರಿಗೆ ಆಶ್ವಾಸನೆಯ ಸಂದೇಶಗಳನ್ನು ನೀಡುತ್ತಾ ಮಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಕರು ಹೊರಗೆ ಬರುವವರೆಗೂ ಪ್ರತಿ ಕ್ಷಣದ ಮಾಹಿತಿಗಳನ್ನು ಕಲೆಹಾಕುತ್ತಾ ತಮ್ಮ ಕೆಲಸವನ್ನು ಜವಾಬ್ದಾರಿಯುತವಾಗಿ ಪೂರ್ಣಗೊಳಿಸಿದರು.

ತಮ್ಮ ತಮ್ಮ ಊರನ್ನು ಸೇರಲು ಹಂಬಲಿಸುತ್ತಿರುವ ಅನಿವಾಸಿ ಕನ್ನಡಿಗರಿಗೆ ನಿರಂತರವಾಗಿ ಚಾರ್ಟಡ್ ವಿಮಾನ ಒದಗಿಸಿಕೊಡುವ “ಕೆಸಿಎಫ್” ತಂಡದ ಸೇವೆ ನಿಜಕ್ಕೂ ಪ್ರಶಂಸೆಗೆ ಅರ್ಹವಾಗಿದೆ.

error: Content is protected !! Not allowed copy content from janadhvani.com