janadhvani

Kannada Online News Paper

ಡಿಜೆ ಹಳ್ಳಿ ಗಲಭೆ: ಪಕ್ಕಾ ಗೇಮ್ ಪ್ಲಾನ್- ಮಾಜಿ ಕಾಂಗ್ರೆಸ್‌ ಶಾಸಕ

ಬಿಜೆಪಿ ನಾಯಕರ ದೃಷ್ಟಿಯಲ್ಲಿ ಮಾತ್ರ ಶ್ರೀನಿವಾಸಮೂರ್ತಿ ಅಮಾಯಕ ಇರಬಹುದು ಆದರೆ, ವಾಸ್ತವ ಬೇರೆಯೇ ಇದೆ.

ಬೆಂಗಳೂರು, ಆಗಸ್ಟ್‌ 17; ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅಮಾಯಕ ಏನಲ್ಲ. ಇನ್ನೂ ಡಿಜೆ ಹಳ್ಳಿ ಗಲಭೆಗೆ ಕಾಂಗ್ರೆಸ್‌ ಪಕ್ಷ ಕಾರಣವಲ್ಲ. ಬದಲಿಗೆ ಇಂದೊಂದು ಪಕ್ಕಾ ಗೇಮ್ ಪ್ಲಾನ್ ಎಂದು ಮಾಜಿ ಕಾಂಗ್ರೆಸ್‌ ಶಾಸಕ ಬಿ. ಪ್ರಸನ್ನ ಆರೋಪಿಸಿದ್ದಾರೆ.

ಡಿಜೆ ಹಳ್ಳಿ ಗಲಭೆ ಸಂಬಂಧ ಇಂದು ಟಿ.ವಿ ಮಾಧ್ಯಮವೊಂದರ ಜೊತೆಗೆ ತಮ್ಮ ಮನದ ಇಂಗಿತವನ್ನು ಹಂಚಿಕೊಂಡಿರುವ ಬಿ. ಪ್ರಸನ್ನ, “ನನಗೆ ಹಾಗೂ ಅಖಂಡ ಶ್ರೀನಿವಾಸಮೂರ್ತಿಗೆ ಆಗ್ತಾ ಇರಲಿಲ್ಲ. ಯಾವಾಗಲೂ ಅವರು ನನ್ನ ರಾಜಕೀಯ ಎದುರಾಳಿ. ಆದರೆ, ಆತ ಅಮಾಯಕ ಏನಲ್ಲ. ಬಿಜೆಪಿ ನಾಯಕರ ದೃಷ್ಟಿಯಲ್ಲಿ ಮಾತ್ರ ಶ್ರೀನಿವಾಸಮೂರ್ತಿ ಅಮಾಯಕ ಇರಬಹುದು ಆದರೆ, ವಾಸ್ತವ ಬೇರೆಯೇ ಇದೆ.

ಕಾಂಗ್ರೆಸ್ ಕಾರ್ಯಕರ್ತರ ಸಮಸ್ಯೆಗೆ ಅಖಂಡ ಶ್ರೀನಿವಾಸಮೂರ್ತಿ ಎಂದಿಗೂ ಸೂಕ್ತವಾಗಿ ಸ್ಪಂದಿಸುತ್ತಿರಲಿಲ್ಲ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಅಖಂಡ ಶ್ರೀನಿವಾಸ್‌ ಕುರಿತು ಅಸಮಾಧಾನವಿತ್ತು” ಎಂದು ತಿಳಿಸಿದ್ದಾರೆ.

ಇನ್ನೂ ಡಿಜೆ ಹಳ್ಳಿ ಗಲಭೆಯನ್ನು ಪಕ್ಕಾ ಗೇಮ್ ಪ್ಲಾನ್ ಎಂದು ಉಲ್ಲೇಖಿಸಿರುವ ಬಿ. ಪ್ರಸನ್ನ, “ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಬೇಗನೇ ಕ್ರಮ ಕೈಗೊಳ್ಳದಿರುವುದೇ ಕಾರಣ. ಮಹಮ್ಮದ್‌ ಪೈಗಂಬರ್‌ ವಿರುದ್ಧ ನವೀನ್ ಎಂಬ ವ್ಯಕ್ತಿ ವಿವಾದಾತ್ಮಕ ಪೋಸ್ಟ್ ಮಾಡಿದ್ದೇ ಈ ಗಲಭೆಗೆ ಕಾರಣ. ಹಿಂದೆ ಎಂಎಲ್ಎ ಮಿಸ್ಸಿಂಗ್ ಅಂತಾ ಒಬ್ಬ ವ್ಯಕ್ತಿ ಪೋಸ್ಟ್ ಮಾಡಿದ್ದಕ್ಕೆ ಕೆಲವೇ ಕ್ಷಣದಲ್ಲಿ ಅವನನ್ನು ಬಂಧಿಸಲಾಗಿತ್ತು.

ಆದರೆ, ನವೀನ್‌ ಬಂಧನಕ್ಕೆ ಪೊಲೀಸರು ತಡ ಮಾಡಿದ್ದು ಏಕೆ? ಇದೇ ಕಾರಣಕ್ಕೆ ಗಲಭೆಯಾಗಿದೆ. ಇವನ್ನೆಲ್ಲಾ ಗಮನಿಸಿದರೆ ಈ ಗಲಭೆ ಪಕ್ಕಾ ಗೇಮ್ ಪ್ಲಾನ್‌ ಎಂಬುದು ಸ್ಪಷ್ಟವಾಗುತ್ತದೆ. ಈ ಗಲಭೆಯ ಮೂಲಕ ಯಾರೋ ಕೈ ಕಾಯಿಸಿಕೊಳ್ಳುವ ಕೆಲಸ ಆಗ್ತಿದೆ. ಆದರೆ, ಅದು ಯಾರು? ಯಾವ ರೀತಿಯಲ್ಲಿ ಇವೆಲ್ಲಾ ಆಗುತ್ತಿದೆ? ಎಂಬುದು ಮಾತ್ರ ಗೊತ್ತಾಗುತ್ತಿಲ್ಲ” ಎಂದು ಆರೋಪಿಸಿದ್ದಾರೆ.

error: Content is protected !! Not allowed copy content from janadhvani.com