janadhvani

Kannada Online News Paper

ಬೆಂಗಳೂರು ಗಲಭೆ: ಕಾಂಗ್ರೆಸ್, ಎಸ್ಡಿಪಿಐ ನಡುವಿನ ವೈಮನಸ್ಯವೇ ಕಾರಣ- ಬೊಮ್ಮಾಯಿ

ಬೆಂಗಳೂರು: ನವೀನ್ ಎಂಬಾತ ತನ್ನ ಫೇಸ್ಬುಕ್ ನಲ್ಲಿ ಕೋಮು ಪ್ರಚೋದನಾತ್ಮಕ ಪೋಸ್ಟ್ ಪ್ರಕಟಿಸಿದ ಪರಿಣಾಮ ಉಂಟಾದ ಗಲಭೆಯ ಬಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಮತ್ತು ಎಸ್ಡಿಪಿಐ ನಡುವಿನ ರಾಜಕೀಯ ವೈಮನಸ್ಯದಿಂದಲೇ ಡಿಜೆ ಹಳ್ಳಿ ಗಲಭೆ ನಡೆದಿದೆ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿ ಪ್ರಕರಣ ಸದ್ಯ ನಿಯಂತ್ರಣದಲ್ಲಿದೆ. ನವೀನ್ ಎಂಬ ಯುವಕ ಒಂದು ಪೋಸ್ಟ್ ಮಾಡಿದ್ದ. ಫಿರೋಜ್ ಪಾಷ ಎಂಬಾತ ರಾತ್ರಿ 7.40 ಕ್ಕೆ ಬಂದು ದೂರು ನೀಡಿದರು. 7.45 ಕ್ಕೆ ದೂರು ದಾಖಲಾಗಿರುತ್ತದೆ. ಎಫ್ಐಆರ್ ದಾಖಲು ಮಾಡಲು ವಿಳಂಬ ಮಾಡಿದರು ಎಂಬುದು ಶುದ್ಧ ಸುಳ್ಳು ಎಂದರು.

ಸುಮಾರು 9 ಗಂಟೆಯೊಳಗೆ ಠಾಣೆಯ ಬಳಿ ಜಮಾಯಿಸಿದ ಜನರಿಗೆ ಪ್ರಕರಣ ದಾಖಲಾಗಿರುವ ಬಗ್ಗೆ ಪೊಲೀಸರು ತಿಳಿಸಿದರು. ಆದರೆ, ಅವರು ಆರೋಪಿಯನ್ನು ನಮಗೆ ಒಪ್ಪಿಸಿ ಎಂದು ಕೇಳಿದರು. ಅದು ಸಾಧ್ಯವಿಲ್ಲ ಎಂದು ಪೋಲಿಸರು ಹೇಳಿದರು. ಆ ನಂತರವೂ ಅಲ್ಲಿ ಜನ ಸೇರುತ್ತಿದ್ದರು. ಬಳಿಕ ಗಲಭೆ ಉಂಟು ಮಾಡಿದರು. ಈ ಹಿಂದಿನ ಕೆಲ ರಾಜಕೀಯ ಘಟನೆ ಹಿನ್ನೆಲೆ ಗಲಭೆ ನಡೆದಿದೆ. ಇದರಲ್ಲಿ ಎಸ್ಡಿಪಿಐ ಕೈವಾಡವು ಇದೆ ಎಂದು ಬೊಮ್ಮಾಯಿ ತಿಳಿಸಿದರು.

ಪ್ರಕರಣದಲ್ಲಿ ಯಾವೆಲ್ಲಾ ರಾಜಕಾರಣಿಗಳ ಪಾತ್ರ ಇದೆ ಎಂಬ ಬಗ್ಗೆ ಪೋಲಿಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಬಳಿಕ ಎಲ್ಲಾ ಗೊತ್ತಾಗಲಿದೆ. ಕೆಜೆ ಹಳ್ಳಿ ಹಾಗೂ ಡಿಜೆ ಹಳ್ಳಿ ವ್ಯಾಪ್ತಿಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಈಗಾಗಲೇ ಅಲ್ಲಿ ಸಾಕಷ್ಟು ಭದ್ರತೆ ಇದೆ. ಆಗಸ್ಟ್ 15ರವರಗೆ ಕರ್ಪ್ಯೂ ವಿಸ್ತರಣೆ ಆಗಲಿದೆ. ರಾಜಕೀಯ ಭಿನ್ನಾಭಿಪ್ರಾಯ ಜೊತೆಗೆ ಎಸ್ಡಿಪಿಐನ ಕಾನೂನು ಹದಗೆಡಿಸುವ ಪಾತ್ರ ಕೂಡ ಸೇರಿದೆ. ತನಿಖೆ ಮುಂದುವರಿದಿದೆ. ಈಗಾಗಲೇ 206 ಮಂದಿ ಬಂಧನವಾಗಿದೆ. ಕೆಲವರು ಬಳ್ಳಾರಿ ಜೈಲಿನಲ್ಲಿದ್ದಾರೆ. ಕಾರ್ಯಾಚರಣೆ ಮುಂದುವರಿಯಲಿದೆ. ಸಮಾಜ ವಿರೋಧಿ ಚಟುವಟಿಕೆಗೆ ಎಲ್ಲಾ ಕಡಿವಾಣ ಹಾಕಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಜಮೀರ್ ಅಹಮದ್ ‌ನಿಲುವು ಮತ್ತು ನಿರ್ಣಯಗಳು ಅವರು ಯಾರ ಪರ ಇದ್ದಾರೆಂದು ಹೇಳುತ್ತದೆ. ಅವರೂ ಕೂಡ ಗಲಭೆ ಸ್ಥಳಕ್ಕೆ ಬಂದಿದ್ದರು. ಕಾಂಗ್ರೆಸ್ನ ತುಷ್ಟೀಕರಣ ರಾಜಕಾರಣ ಇನ್ನೂ ಮುಂದುವರಿದೆ. ಸದ್ಯಕ್ಕೆ ಸ್ಥಳೀಯ ರಾಜಕಾರಣಿಗಳ ಪಾತ್ರ ಇದೆ ಎಂಬುದರಲ್ಲಿ ಕೆಲವರನ್ನು ಅರೆಸ್ಟ್ ಮಾಡಿದ್ದೇವೆ. ಮುಂದೆ‌ ತನಿಖೆ ಹಂತದಲ್ಲಿ ಎಲ್ಲವನ್ನೂ ಗೊತ್ತಾಗುತ್ತದೆ ಎಂದರು.

ಅಪರಾಧಿಗಳಿಗೆ ನಿರ್ದಾಕ್ಷಿಣ್ಯವಾಗಿ ಕ್ರಮವಾಗಬೇಕೆಂದು ಸಿಎಂ ಹೇಳಿದ್ದಾರೆ. ಯಾರು ದೊಂಬಿ ಮಾಡಿದ್ದಾರೆ ಅವರಿಂದಲೇ ವಸೂಲಿ ಮಾಡುತ್ತೇವೆ. ಸುಪ್ರೀಂಕೋರ್ಟ್ ಆದೇಶವೇ ಕಾನೂನು ಎಂದು ತಿಳಿದುಕೊಂಡೇ ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಹಿಂದೆ ನಡೆದ ಚುನಾವಣೆಯಲ್ಲಿ ಸಂಭವಿಸಿದ ಬಿರುಕು, ಭಿನ್ನಾಭಿಪ್ರಾಯಗಳು ಹಾಗೂ ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಈ ಗಲಭೆ ಮಾಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

error: Content is protected !! Not allowed copy content from janadhvani.com