janadhvani

Kannada Online News Paper

ಇಂದಿನಿಂದ ಜಿದ್ದಾದಲ್ಲಿ ಮತ್ತೆ ಕರ್ಫ್ಯೂ – ರಿಯಾದ್ ನಲ್ಲೂ ಜಾರಿ ಸಾಧ್ಯತೆ

ಜಿದ್ದಾ: ಕೋವಿಡ್ ಪ್ರಕರಣಗಳು ಏರಿಕೆ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದ ಜಿದ್ದಾದಲ್ಲಿ ಮುಂದಿನ 15 ದಿನಗಳವರೆಗೆ ಕರ್ಫ್ಯೂ ಸಡಿಲಿಕೆಯನ್ನು ಭಾಗಶಃ ಹಿಂಪಡೆಯಲಾಗಿದೆ.ಈ ಆದೇಶವು ಇಂದಿನಿಂದ ಜಾರಿಗೆ ಬರಲಿದ್ದು, ಜೂನ್ 20 ರ ವರೆಗೆ ಮುಂದುವರಿಯಲಿದೆ.

ಮಧ್ಯಾಹ್ನ 3 ಗಂಟೆಯಿಂದ ಬೆಳಿಗ್ಗೆ ಆರು ಗಂಟೆಯವರೆಗೆ ಕರ್ಫ್ಯೂ ಜಾರಿಯಲ್ಲಿರುತ್ತದೆ.ಅಗತ್ಯ ವಸ್ತುಗಳ ಖರೀದಿಗಾಗಿ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಸಡಿಲಿಕೆ ಇರಲಿದೆ.ಮಸೀದಿಗಳಲ್ಲಿ ಪ್ರಾರ್ಥನೆಗೂ ನಿರ್ಬಂಧ ಹೇರಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಕೆಲಸ ಮಾಡುವಂತಿಲ್ಲ.

ಕರ್ಫ್ಯೂ ಇಲ್ಲದ ಸಮಯದಲ್ಲಿ, ಜಿದ್ದಾಗೆ ಪ್ರವೇಶಿಸಲು ಅಥವಾ ನಿರ್ಗಮಿಸಲು ಅನುಮತಿಯಿದೆ. ವಿಮಾನ, ರೈಲು ಮತ್ತು ರಸ್ತೆ ಸಂಚಾರ ಮುಂದುವರಿಯಲಿದೆ. ಹೋಟೆಲ್‌ಗಳಲ್ಲಿ ಆಹಾರ ಸೇವಿಸುವುದನ್ನು ನೀಷೇಧಿಸಲಾಗಿದೆ. ಐದಕ್ಕಿಂತ ಹೆಚ್ಚು ಜನರು ಒಗ್ಗೂಡಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು,ವಿದೇಶಿಯರಾಗಿದ್ದರೆ ಅವರನ್ನು ಗಡೀಪಾರು ಮಾಡಲಾಗುವುದು.

ಕೋವಿಡ್ ಹರಡುವುದನ್ನು ತಡೆಯಲು ವಿಧಿಸಲಾಗಿರುವ ಷರತ್ತುಗಳನ್ನು ಪಾಲಿಸದಿರುವುದೇ ಕೋವಿಡ್ ಪ್ರಕರಣ ಹೆಚ್ಚಳವಾಗಲು ಕಾರಣ. ರಿಯಾದ್‌ನಲ್ಲೂ ಪ್ರಕರಣಗಳು ಹೆಚ್ಚುತ್ತಿದ್ದು,ಅಲ್ಲಿ ಕೈಗೊಳ್ಳಬೇಕಾದ ನಿಯಂತ್ರಣದ ಬಗ್ಗೆ ಅವಲೋಕನ ನಡೆಸಲಾಗುತ್ತಿದೆ. ಉಳಿದ ನಗರಗಳ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಕೊಗೊಳ್ಳಲಾಗುವುದು.

error: Content is protected !! Not allowed copy content from janadhvani.com