4th July 2020

janadhvani

Kannada Online News Paper

ಗರ್ಭಿಣಿ ಆನೆ ಅನಾನಸ್ ತಿಂದು ಸತ್ತಿಲ್ಲ- ಬಂಧಿತ ಆರೋಪಿ ವಿಲ್ಸನ್

ಪಾಲಕ್ಕಾಡ್: ದೇಶಾದ್ಯಂತ ಭಾರೀ ಚರ್ಚೆಗೆ ಗುರಿಯಾಗಿರುವ ಗರ್ಭಿಣಿ ಆನೆಯ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊದಲ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಮೊದಲ ಆರೋಪಿಯನ್ನು 40 ವರ್ಷದ ವಿಲ್ಸನ್ ಎಂದು ಗುರುತಿಸಲಾಗಿದ್ದು, ಈತ ರಬ್ಬರ್ ವ್ಯಾಪಾರಿಯಾಗಿದ್ದ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಈತ ಸ್ಫೋಟಕವನ್ನು ತಯಾರಿಸಿ ಬೇರೆಯವರಿಗೆ ನೀಡುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಇನ್ನಿಬ್ಬರು ತಪ್ಪಿಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಈ ವಿಚಾರದ ಬಗ್ಗೆ ಮಾಹಿತಿ ನೀಡಿರುವ ಮನ್ನಾರ್ಕಡ್ ವಿಭಾಗೀಯ ಅರಣ್ಯ ಅಧಿಕಾರಿ ಸುನಿಲ್ ಕುಮಾರ್, ನಾವು ಈಗಾಗಲೇ ಆನೆ ಪ್ರಕರಣಕ್ಕೆ ಸಂಬಂಧಿಸಿದ ಹಾಗೇ ಮೊದಲ ಆರೋಪಿಯನ್ನು ಪತ್ತೆ ಮಾಡಿದ್ದೇವೆ. ಇನ್ನಿಬ್ಬರನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಿದ್ದೇವೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮೃತಪಟ್ಟ ಗರ್ಭಿಣಿ ಆನೆ ಸ್ಫೋಟಕ ತುಂಬಿದ ಅನಾನಸ್ ಹಣ್ಣು ತಿಂದು ಸಾವನ್ನಪ್ಪಿಲ್ಲ. ಆನೆ ಸ್ಫೋಟಕ ತುಂಬಿದ ತೆಂಗಿನಕಾಯಿಯನ್ನು ತಿಂದು ಸಾವನ್ನಪ್ಪಿದೆ ಎಂದು ತನಿಖೆ ವೇಳೆ ಆರೋಪಿ ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ.

ಕೇರಳದಲ್ಲಿ ಬೆಳೆ ನಾಶ ಮಾಡಲು ಅಥವಾ ತಿನ್ನಲು ಬಂದ ಕಾಡುಹಂದಿಯಂತಹ ಪ್ರಾಣಿಗಳನ್ನು ಹೆದರಿಸಲು ಈ ರೀತಿಯ ಸ್ಫೋಟಕವನ್ನು ಸ್ಥಳೀಯವಾಗಿ ಬಳಸುತ್ತಾರೆ. ಸ್ಫೋಟಕವನ್ನು ಹಣ್ಣು ಮತ್ತು ಪ್ರಾಣಿಗಳ ಮಾಂಸದಲ್ಲಿ ಇಟ್ಟು ಅದನ್ನು ಸ್ಫೋಟಗೊಳಿಸಿ ಪ್ರಾಣಿಗಳನ್ನು ಓಡಿಸಲಾಗುತ್ತದೆ. ಆದರೆ ಇವರು ಆನೆಗೂ ಇದೇ ರೀತಿ ಮಾಡಿದ್ದಾರೆ. ಆದರೆ ಯಾರಿಗೂ ತೊಂದರೆ ಮಾಡದೇ ಆಹಾರವನ್ನು ಅರಸಿ ಬಂದ ಆನೆ ಇಲ್ಲಿ ದುರಂತವಾಗಿ ಸಾವನ್ನಪ್ಪಿದೆ.

ಅಧಿಕಾರಿಗಳು ಹೇಳಿರುವ ಪ್ರಕಾರ, ಆನೆ ತೆಂಗಿನಕಾಯಿಯ ಒಂದು ಭಾಗವನ್ನು ಮುರಿದುಕೊಂಡು ಬಾಯಿಯೊಳಗೆ ಹಾಕಿಕೊಂಡಿದೆ. ಈ ವೇಳೆ ಅದು ಸ್ಫೋಟಗೊಂಡಿದ್ದು, ಆನೆಯ ಎಡಭಾಗದ ಬಾಯಿ ಸಂಪೂರ್ಣವಾಗಿ ಗಾಯಗೊಂಡಿದೆ. ಇದರಿಂದ ಆನೆಗೆ ಆಹಾರ ಮತ್ತು ನೀರನ್ನು ಸೇವಿಸಲು ಆಗಿಲ್ಲ. ಆನೆ ಬಾಯಿಯ ನೋವಿನ ಜೊತೆಗೆ ಒಂದು ದಿನವೆಲ್ಲ ನರಳಿದೆ. ನಂತರ ಅದು ಪಾಲಕ್ಕಾಡ್‍ನ ವೆಲ್ಲಿಯಾರ್ ನದಿಯಲ್ಲಿ ಬಂದು ನಿಂತುಕೊಂಡು ಪ್ರಾಣಬಿಟ್ಟಿದೆ ಎಂದು ಹೇಳಿದ್ದಾರೆ.

ಆರೋಪಿ ವಿಲ್ಸನ್ ಬಂಧನದಿಂದ, ಕೇರಳದ ಮಲಪ್ಪುರಂ ಜಿಲ್ಲೆಯನ್ನು ಟಾರ್ಗೆಟ್ ಮಾಡಿ ಆನೆಯ ಸಾವಿಗೂ ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿ, ಸಾಮಾಜಿಕ ತಾಣದಲ್ಲಿ ಕೇಕೆ ಹೊಡೆಯುತ್ತಿದ್ದವರು ,ಬಾಲ ಮಡಚಿ ತೆಪ್ಪಗೆ ಕೂರುವಂತೆ ಮಾಡಿದೆ.

error: Content is protected !!