janadhvani

Kannada Online News Paper

ಮಣ್ಣು ಹಾಕಿ ಗಡಿ ಬಂದ್- ಅಧಿಕಾರಿಗಳ ಅಮಾನವೀಯ ನಡೆಗೆ ವ್ಯಾಪಕ ಆಕ್ರೋಶ

ಮಂಗಳೂರು: ಕೊರೊನಾ ಹರಡದಂತೆ ದೇಶಾದ್ಯಂತ ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದೆ. ಅಂತರಾಜ್ಯ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಆದರೆ ಮಂಗಳೂರು- ಕೇರಳ ಗಡಿಯನ್ನು ಮಣ್ಣು ಹಾಕಿ ಮುಚ್ಚಿರುವ ಅಧಿಕಾರಿಗಳ ನಡೆಗೆ ಜನರಿಂದ ವ್ಯಾಪಕ ವಿರೋಧಗಳು ವ್ಯಕ್ತವಾಗುತ್ತಿದೆ.

ಸಹಜವಾಗಿ ಗಡಿಭಾಗದಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಮುಚ್ಚಲಾಗುತ್ತದೆ. ಅಲ್ಲಿ ದಿನದ 24 ಗಂಟೆಯೂ ಪೊಲೀಸ್ ಪಹರೆಯನ್ನು ಹಾಕಲಾಗುತ್ತದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ಗಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿದೆ.

ಜಿಲ್ಲೆಯ ವಿಟ್ಲದ ಸಾರಡ್ಕ ಮಾರ್ಗವಾಗಿ ಕೇರಳ ಸಂಪರ್ಕ ಕಲ್ಪಿಸುವ ರಸ್ತೆ, ಕೊಣಾಜೆಯಿಂದ ಪಾತೂರು ಮಾರ್ಗವಾಗಿ ಕೇರಳ ಸಂಪರ್ಕ ಕಲ್ಪಿಸುವ ರಸ್ತೆ, ಪೆರುವಾಯಿಯಿಂದ ಕೇರಳ ಹಾಗೂ ಸುಳ್ಳದ ಗಾಳಿಮುಖದಿಂದ ಕೇರಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸಂಪೂರ್ಣ ಮುಚ್ಚಲಾಗಿದೆ.

ಗಡಿಯಲ್ಲಿ ಜೆಸಿಬಿ ಮೂಲಕ ಮಣ್ಣು ಹಾಕಿ ಯಾವುದೇ ವಾಹನಗಳು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಪರ್ಕ ಕಲ್ಪಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಅಧಿಕಾರಿಗಳ ಈ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಎರಡು ರಾಜ್ಯಗಳ ಗಡಿ ಭಾಗದ ಜನರು ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಹೋಗಲು ಗಡಿ ರಾಜ್ಯದ ಆಸ್ಪತ್ರೆಯಲ್ಲೇ ಅವಲಂಬಿಸುತ್ತಾರೆ. ಆದರೆ ಮಾನವೀಯತೆಯನ್ನು ಮರೆತು ಮಣ್ಣು ಹಾಕಿ ಗಡಿ ಮುಚ್ಚಿರುವುದುದು ಯಾಕಾಗಿ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ.

ಗಡಿಗಳನ್ನು ಬ್ಯಾರಿಕೇಡ್ ಮೂಲಕ ಮುಚ್ಚುವುದು ಸರಿ. ಹೀಗಿದ್ದರೆ ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಹೋಗಲು ಅನುಕೂಲವಾಗುತ್ತದೆ. ಆದರೆ ಮಣ್ಣು ಹಾಕಿ ಮುಚ್ಚಿದರೆ ಗಡಿ ಭಾಗದ ಜನರು ಆಸ್ಪತ್ರೆಗಳಿಗೆ ಹೋಗಬೇಕಾಗಿ ಬಂದರೆ ಏನು ಮಾಡುವುದು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಗಡಿಯನ್ನು ಈ ರೀತಿಯಾಗಿ ಮುಚ್ಚುವುದು ಸರಿಯಲ್ಲ. ಎರಡು ರಾಜ್ಯದ ಗಡಿ ಭಾಗದ ತಾಲೂಕಿನ ಅಧಿಕಾರಿಗಳು ಜೊತೆಗೂಡಿ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ. ಕೊರೊನಾದಂತಹಾ ತುರ್ತು ಸಂದರ್ಭದಲ್ಲಿ ಪರಸ್ಪರ ಸಹಕಾರ ಹಾಗೂ ಮನುಷ್ಯತ್ವ ಅತ್ಯಗತ್ಯ ಎಂಬುವುದನ್ನು ಮರೆಯಬಾರದು.

error: Content is protected !! Not allowed copy content from janadhvani.com