‘ಕೆಮ್‌ ಚೊ ಟ್ರಂಪ್‌’: ರೋಡ್ ಶೋ ವೇಳೆ ‘ಸ್ಲಂ’ ನಿವಾಸಿಗಳನ್ನು ಕಾಣದಂತೆ ತಡೆ ಗೋಡೆ ನಿರ್ಮಾಣ

ಹೊಸದಿಲ್ಲಿ: ಫೆಬ್ರವರಿ ಅಂತ್ಯದಲ್ಲಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮೊದಲ ಬಾರಿಗೆ ಭಾರತಕ್ಕೆ ಅಧಿಕೃತ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಟೆಕ್ಸಾಸ್‌ನ ಹೂಸ್ಟನ್‌ನಲ್ಲಿ ನಡೆದ ‘ಹೌಡಿ ಮೋದಿ’ ಮಾದರಿಯಲ್ಲೇ ಬೃಹತ್‌ ಸಮಾವೇಶ ಆಯೋಜಿಸಲಾಗಿದೆ.

ಅಧ್ಯಕ್ಷ ಟ್ರಂಪ್ ಹಾಗೂ ಅಮೆರಿಕಾದ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರು ರಾಜಧಾನಿ ದೆಹಲಿ ಹಾಗೂ ಅಹ್ಮದಾಬಾದ್‍ಗೆ ಫೆ. 24 ಹಾಗೂ 25ರಂದು ಭೇಟಿ ನೀಡಲಿದ್ದಾರೆ. ಸಮಾವೇಶಕ್ಕೆ ‘ಕೆಮ್‌ ಚೊ ಟ್ರಂಪ್‌ (ಹೇಗಿದ್ದೀರಿ ಟ್ರಂಪ್‌)’ ಎಂದು ಹೆಸರಿಡಲಾಗಿದೆ. ನರೇಂದ್ರ ಮೋದಿ ತವರು ರಾಜ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ಸರ್ದಾರ್‌ ಪಟೇಲ್‌ ಸ್ಟೇಡಿಯಂನಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಮೊಟೇರಾದಲ್ಲಿರುವ ಸರ್ದಾರ್ ಪಟೇಲ್ ಸ್ಟೇಡಿಯಂ ತನಕ ಮೋದಿ ಹಾಗೂ ಟ್ರಂಪ್ ರೋಡ್ ಶೋ ನಡೆಸಲಿದ್ದಾರೆ.

ಅಹ್ಮದಾಬಾದ್ ನಗರದಲ್ಲಿ ನಡೆಸಲಿರುವ ರೋಡ್ ಶೋ ಹಾದಿಯಲ್ಲಿರುವ ಕೊಳೆಗೇರಿಯನ್ನು ಮರೆಮಾಚಲು ಒಂದು ಆವರಣ ಗೋಡೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದಿರಾ ಬ್ರಿಡ್ಜ್ ಸಂಪರ್ಕಿಸುವ ರಸ್ತೆಯುದ್ದಕ್ಕೂ ಈ ಅರ್ಧ ಕಿಮೀಗೂ ಹೆಚ್ಚು ಉದ್ದದ ಗೋಡೆ ನಿರ್ಮಾಣವಾಗುತ್ತಿದೆ. ಆರರಿಂದ ಏಳು ಅಡಿ ಎತ್ತರದ ಗೋಡೆಯು ಸುಮಾರು 600 ಮೀಟರ್ ವ್ಯಾಪ್ತಿಯಲ್ಲಿರುವ ಕೊಳೆಗೇರಿಯನ್ನು ಮರೆಮಾಚಲು ನಿರ್ಮಿಸಲಾಗುತ್ತಿದೆ ಎಂದು The Indian Express ವರದಿ ಮಾಡಿದೆ.

ಇಲ್ಲಿನ ದೇವ್ ಸರನ್ ಅಥವಾ ಸರನಿಯವಾಸ್ ಕೊಳೆಗೇರಿಯಲ್ಲಿ ಸುಮಾರು 500 ಗುಡಿಸಲುಗಳಿದ್ದು 2,500ಕ್ಕೂ ಅಧಿಕ ಜನರು ಅಲ್ಲಿ ವಾಸಿಸುತ್ತಿದ್ದಾರೆ. ಈ ಆವರಣ ಗೋಡೆ ಹೊರತಾಗಿ ಸ್ಥಳೀಯಾಡಳಿತವು ಸಂಪೂರ್ಣವಾಗಿ ಬೆಳೆದ ಖರ್ಜೂರದ ಗಿಡಗಳನ್ನೂ ರಸ್ತೆಯುದ್ದಕ್ಕೂ ನೆಡುತ್ತಿದೆ.

1.10 ಲಕ್ಷ ಜನರು ಈ ಸ್ಟೇಡಿಯಂನಲ್ಲಿ ಕುಳಿತುಕೊಳ್ಳಬಹುದಾಗಿದ್ದು, ಕಾರ್ಯಕ್ರಮದಲ್ಲಿ ಅಂದಾಜು ಒಂದು ಲಕ್ಷ ಜನರು ಪಾಲ್ಗೊಳ್ಳಲಿದ್ದಾರೆ. ಮೇಲ್ಬರ್ನ್‌ ಕ್ರಿಕೆಟ್‌ ಮೈದಾನಕ್ಕಿಂತ ಈ ಕ್ರೀಡಾಂಗಣ ವಿಶಾಲವಾಗಿದ್ದು, ಜಗತ್ತಿನಲ್ಲೇ ಅತೀ ದೊಡ್ಡ ಕ್ರಿಕೆಟ್‌ ಸ್ಟೇಡಿಯಂ ಆಗಿದೆ. ಇದನ್ನು ಸ್ವತಃ ಡೊನಾಲ್ಡ್‌ ಟ್ರಂಪ್‌ ಉದ್ಘಾಟನೆ ಮಾಡಲಿದ್ದು, ಇದೇ ಸ್ಟೇಡಿಯಂನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

“ನಮ್ಮ ಗೌರವಾನ್ವಿತ ಅತಿಥಿಗೆ ಭಾರತವು ಸ್ಮರಣೀಯ ಸ್ವಾಗತವನ್ನು ನೀಡಲಿದೆ. ಈ ಭೇಟಿ ಬಹಳ ವಿಶೇಷವಾದದ್ದು ಮತ್ತು ಭಾರತ-ಅಮೆರಿಕಾ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ,” ಎಂಬುದಾಗಿ ಟ್ರಂಪ್‌ ಭೇಟಿ ಸಂಬಂಧ ಮೋದಿ ಟ್ಟೀಟ್‌ ಮಾಡಿದ್ದಾರೆ.

ಈ ಹಿಂದೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಜಪಾನ್‌ ಪ್ರಧಾನಿ ಶಿಂಜೋ ಅಬೆ, ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ಭಾರತಕ್ಕೆ ಭೇಟಿ ನೀಡಿದ ವೇಳೆ ಅಹಮದಾಬಾದ್‌ನಲ್ಲಿ ಭಾರಿ ಸ್ವಾಗತ ಕೋರಲಾಗಿತ್ತು. ಇದೀಗ ಅಮೆರಿಕಾ ಅಧ್ಯಕ್ಷರಿಗೂ ಇದೇ ರೀತಿಯ ಅದ್ಧೂರಿ ಸ್ವಾಗತಕ್ಕೆ ವ್ಯವಸ್ಥೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!