janadhvani

Kannada Online News Paper

ಯುಎಇ ರಾಷ್ಟ್ರೀಯ ದಿನದ ಪ್ರಯುಕ್ತ 700 ಕ್ಕೂ ಮಿಕ್ಕ ಕೈದಿಗಳ ಬಿಡುಗಡೆ

ದುಬೈ: ಯುಎಇ ರಾಷ್ಟ್ರೀಯ ದಿನದ ಪ್ರಯುಕ್ತ ಹೆಚ್ಚಿನ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ದುಬೈನಲ್ಲಿ ಮಾತ್ರ 674 ಕೈದಿಗಳನ್ನು ಬಿಡುಗಡೆ ಮಾಡಲು ಆಡಳಿತಗಾರ ಆದೇಶ ನೀಡಿದ್ದು, ಇತರ ಎಮಿರೇಟ್ಸ್‌ಗಳು ಶೀಘ್ರದಲ್ಲೇ ನೂರಾರು ಕೈದಿಗಳ ಬಿಡುಗಡೆ ಬಗ್ಗೆ ಪ್ರಕಟಿಸಲಿದೆ.

ಯುಎಇ ಉಪಾಧ್ಯಕ್ಷ, ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೈಖ್ ಮುಹಮ್ಮದ್ ಬಿನ್ ರಾಶಿದ್ ಅಲ್-ಮಕ್ತೂಮ್ ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದು, ಬಿಡುಗಡೆಗೊಳ್ಳುವವರು ದುಬೈನ ಅಪರಾಧ ಪರಿಹಾರ ಕೇಂದ್ರದ ಕೈದಿಗಳಾಗಿದ್ದಾರೆ.

ಶೈಖ್ ಮುಹಮ್ಮದ್ ಅವರ ನಿರ್ಧಾರವು ಖೈದಿಗಳು ಕುಟುಂಬಗಳೊಂದಿಗೆ ಹೊಸ ಜೀವನವನ್ನು ಪ್ರಾರಂಭಿಸಲು ಸಹಾಯ ಮಾಡಲಿದೆ ಎಂದು ದುಬೈ ಅಟಾರ್ನಿ ಜನರಲ್ ಇಸಾಮ್ ಅಲ್ ಹುಮೈದಾನ್ ಹೇಳಿದ್ದಾರೆ. ದುಬೈ ಪೊಲೀಸರೊಂದಿಗೆ ಸಮಾಲೋಚಿಸಿ ಬಿಡುಗಡೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುಎಇ ಅಧ್ಯಕ್ಷ ಶೈಖ್ ಖಲೀಫಾ ನಿನ್ನೆ 662 ಜನರನ್ನು ಬಿಡುಗಡೆ ಮಾಡಲು ಆದೇಶಿಸಿದ್ದಾರೆ. ಅವರ ಹಣಕಾಸಿನ ಹೊಣೆಗಾರಿಕೆಗಳನ್ನು ದೇಶವು ವಹಿಸಿಕೊಳ್ಳಲಿದೆ. ಅಜ್ಮಾನ್ ದೊರೆ ಶೈಖ್ ಹುಮೈದ್ ಬಿನ್ ರಾಶಿದ್ ಅಲ್-ನುಐಮಿ ಮತ್ತು ಉಮ್ ಅಲ್-ಕೂವೈನ್ ಆಡಳಿತಾಧಿಕಾರಿ ಸ‌ಊದ್ ಬಿನ್ ರಾಶಿದ್ ಅಲ್ ಮುಅಲ್ಲ ಹಲವಾರು ಕೈದಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಜೈಲಿನಲ್ಲಿರುವ ಜೀವನದಲ್ಲಿ ಪಶ್ಚಾತ್ತಾಪ ಮತ್ತು ಉತ್ತಮ ನಡವಳಿಕೆಯ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಜನಧ್ವನಿಗೆ ವಾಟ್ಸಾಪ್ ಮಾಡಿ whatsapp
error: Content is protected !!