ನೌಕರರ ವೇತನ ಕಡಿತಗೊಳಿಸುವ ಖಾಸಗಿ ಸಂಸ್ಥೆಗಳಿಗೆ ಎಚ್ಚರಿಕೆ

ಒಮಾನ್: ನೌಕರರ ವೇತನವನ್ನು ವಿಳಂಬಗೊಳಿಸುವ ಅಥವಾ ಕಡಿಮೆ ಮಾಡುವ ಖಾಸಗಿ ಸಂಸ್ಥೆಗಳಿಗೆ ಒಮಾನ್‌ ಮಾನವ ಸಂಪನ್ಮೂಲ ಸಚಿವಾಲಯ ಎಚ್ಚರಿಕೆ ನೀಡಿದೆ. ಇಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉದ್ಯೋಗ ಒಪ್ಪಂದದಲ್ಲಿ ಹೇಳಿರುವ ವೇತನವು ಕಾರ್ಮಿಕರ ಹಕ್ಕು. ಒಮಾನ್ ಕಾರ್ಮಿಕ ಕಾನೂನು ಈ ಹಕ್ಕನ್ನು ಖಾತರಿಪಡಿಸುತ್ತದೆ. ಯಾವುದೇ ಕಂಪನಿಯು ಇದನ್ನು ತಡೆಯಲು ಸಾಧ್ಯವಿಲ್ಲ. ವೇತನ ವಿಳಂಬ ಮತ್ತು ಕಡಿತಗೊಳಿಸುವುದಕ್ಕೆ ಸಂಬಧಿಸಿದ ದೂರುಗಳಿಗೆ ಕಂಪನಿಯನ್ನು ಸ್ಥಗಿತಗೊಳಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡುವ ಅಧಿಕಾರವಿದೆ ಎಂದು ಮಾನವ ಸಂಪನ್ಮೂಲ ಸಚಿವಾಲಯ ಹೇಳಿದೆ.

ಒಮಾನಿ ಕಾರ್ಮಿಕ ಕಾಯ್ದೆಯ ಸೆಕ್ಷನ್ 23 ರ ಪ್ರಕಾರ ಕಾರ್ಮಿಕರಿಗೆ ಲಭಿಸುವ ಮೂಲ ವೇತನ ಮತ್ತು ಇತರ ಭತ್ಯೆಗಳು ಮತ್ತು ಸವಲತ್ತುಗಳನ್ನು ಉದ್ಯೋಗ ಒಪ್ಪಂದದಲ್ಲಿ ಸರಿಯಾಗಿ ದಾಖಲಿಸಬೇಕು. ಉದ್ಯೋಗದಾತ ವೇತನವನ್ನು ಸ್ಥಳೀಯ ಬ್ಯಾಂಕಿನಲ್ಲಿರುವ ನೌಕರರ ಖಾತೆಗೆ ಜಮಾ ಮಾಡಬೇಕು. ಕಂಪನಿಗಳು ಹಣಕಾಸಿನ ತೊಂದರೆಗಳು ಅಥವಾ ಇತರ ಸಮಸ್ಯೆಗಳಿದ್ದಾಗ ನೌಕರರ ವೇತನ ಮತ್ತು ಇತರ ಪ್ರಯೋಜನಗಳನ್ನು ಕಡಿಮೆ ಮಾಡಲು ಒಲವು ತೋರುವುದು ಕಂಡುಬರುತ್ತದ್ದು, ಇದು ಕಾನೂನು ಬಾಹಿರವಾಗಿದೆ.

ಮಾನವ ಸಂಪನ್ಮೂಲ ಸಚಿವಾಲಯವು ಅನುಮೋದಿಸಿದ ದಂಡನಾತ್ಮಕ ಕ್ರಮಗಳ ಭಾಗವಾಗಿ ಅಥವಾ ಸಂಸ್ಥೆಯಲ್ಲಿನ ಶಿಸ್ತು ಕ್ರಮಗಳ ಭಾಗವಾಗಿ ಮಾತ್ರ ವೇತನವನ್ನು ಕಡಿಮೆ ಮಾಡಲು ಕಾನೂನು ಅನುಮತಿಸುತ್ತದೆ.

Leave a Reply

Your email address will not be published. Required fields are marked *

error: Content is protected !!