janadhvani

Kannada Online News Paper

ಸಿಖ್ ಹತ್ಯಾಕಾಂಡ: ಸ್ಯಾಮ್ ಪಿತ್ರೋಡ ಅವರ ಹೇಳಿಕೆ ಖಂಡನಾರ್ಹ- ರಾಹುಲ್

ಪಂಜಾಬ್ (ಮೇ.13) : 1984ರ ದೆಹಲಿ ಸಿಖ್ ಹತ್ಯಾಕಾಂಡದ ಕುರಿತ ಸ್ಯಾಮ್ ಪಿತ್ರೋಡ ಅವರ ಹೇಳಿಕೆ ಖಂಡನಾರ್ಹವಾಗಿದ್ದು ಅವರು ದೇಶದ ಎದುರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಒತ್ತಾಯಿಸಿದ್ದಾರೆ.

ಸೋಮವಾರ ಪಂಜಾಬ್ನ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ರಾಹುಲ್ ಗಾಂಧಿ, “ದೆಹಲಿ ಸಿಖ್ ಹತ್ಯಾಕಾಂಡದ ಕುರಿತು ಮಾತನಾಡುವಾಗ ಕಾಂಗ್ರೆಸ್ ಹಿರಿಯ ಮುಖಂಡ ಸ್ಯಾಮ್ ಪಿತ್ರೋಡ ‘ಆಗಿದ್ದು ಆಗಿ ಹೋಗಿದೆ’ (ಹುವಾ ತೋ ಹುವಾ) ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ, ಇದು ಬೇಜವಾಬ್ದಾರಿಯ ಹಾಗೂ ನಾಚಿಕೆಗೇಡಿನ ಹೇಳಿಕೆ. ಹತ್ಯಾಕಾಂಡಗಳು ಯಾವುದೇ ಕಾಲದಲ್ಲಿ ನಡೆದರೂ ಅದು ಖಂಡನಾರ್ಹ. ಇಂತಹ ಹೇಳಿಕೆ ನೀಡಿದ್ದಕ್ಕೆ ಸ್ಯಾಮ್ ಪಿತ್ರೋಡ ದೇಶದ ಎದುರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ಅವರ ಈ ಹೇಳಿಕೆಯನ್ನು ಖಂಡಿಸುತ್ತದೆ. ಅಲ್ಲದೆ ಈ ಹೇಳಿಕೆಗಾಗಿ ಅವರು ದೇಶದ ಎದುರು ಕ್ಷಮೆ ಕೇಳಬೇಕು ಎಂದು ಸೂಚಿಸಲಾಗಿದೆ. ಪಕ್ಷದ ಎಲ್ಲಾ ನಾಯಕರಿಗೂ ಸೂಕ್ಷ್ಮ ವಿಚಾರಗಳ ಕುರಿತು ಮಾತನಾಡುವಾಗ ನಾಲಗೆಯ ಮೇಲೆ ನಿಗಾ ವಹಿಸುವಂತೆಯೂ ಎಚ್ಚರಿಕೆ ನೀಡಲಾಗಿದೆ. ಆಡಳಿತ ಪಕ್ಷ ಬಿಜೆಪಿಯನ್ನು ಟೀಕಿಸಲು ವಿರೋಧಿಸಲು ಸಾಕಷ್ಟು ವಿಷಯಗಳಿವೆ. ಅಂತ ಮುಖ್ಯ ವಿಚಾರಗಳ ಕುರಿತು ಮಾತ್ರ ಮಾತನಾಡುವಂತೆಯೂ ತಿಳಿಸಲಾಗಿದೆ. ಅಲ್ಲದೆ ಸ್ಯಾಮ್ ಪಿತ್ರೋಡ ಅವರ ಹೇಳಿಕೆಗೆ ವ್ಯಯಕ್ತಿಕವಾಗಿ ನಾನೂ ಕ್ಷಮೆಯಾಚಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಹಿರಿಯ ಕಾಂಗ್ರೆಸ್ ನಾಯಕ ಪ್ರಧಾನಿ ನರೇಂದ್ರ ಮೋದಿಯನ್ನು ಕಟುವಾಗಿ ಟೀಕಿಸಿದ್ದರು. ಅಲ್ಲದೆ ಸಿಖ್ ಹತ್ಯಾಕಾಂಡದ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುವಾಗ “ಆಗಿದ್ದು ಆಗಿ ಹೋಗಿದೆ” ಎಂಬರ್ಥದಲ್ಲಿ ಪ್ರತಿಕ್ರಿಯಿಸಿದ್ದರು. ಸಿಖ್ ಹತ್ಯಾಕಾಂಡದ ಕುರಿತ ಅವರ ಹೇಳಿಕೆ ಇಡೀ ದೇಶದಾದ್ಯಂತ ಭಾರೀ ಟೀಕೆಗೆ ಗುರಿಯಾಗಿತ್ತು. ಅಲ್ಲದೆ ಸ್ವಪಕ್ಷೀಯರಿಂದಲೇ ಟೀಕೆಗೆ ಒಳಗಾಗಿತ್ತು. ಪರಿಣಾಮ ಇಂದು ಪಂಜಾಬ್ನಲ್ಲಿ ಚುನಾವಣಾ ಬಾಷಣ ಮಾಡಿದ ರಾಹುಲ್ ಪ್ರಕರಣವನ್ನು ಉಲ್ಲೇಖಿಸಿ ಕ್ಷಮೆ ಕೇಳಿದ್ದಾರೆ.

ಮೇ.19ರಂದು ನಡೆಯಲಿರುವ 7ನೇ ಹಾಗೂ ಕೊನೆಯ ಹಂತದ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ ರಾಜ್ಯದ ಅಮೃತಸರ, ಜಲಂಧರ್ ಸೇರಿದಂತೆ ಒಟ್ಟು 13 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

error: Content is protected !! Not allowed copy content from janadhvani.com