janadhvani

Kannada Online News Paper

ಬಿಜೆಪಿ ಪ್ರಣಾಳಿಕೆ ಹೊಸ ಬಾಟಲಿಯಲ್ಲಿ ಹಳೆಯ ಮದ್ಯದಂತಿದೆ- ಸಿದ್ದರಾಮಯ್ಯ

ಈ ವರದಿಯ ಧ್ವನಿಯನ್ನು ಆಲಿಸಿ


ಬೆಂಗಳೂರು (ಏ. 9): ಬಿಜೆಪಿ ಪ್ರಣಾಳಿಕೆ ಹೊಸ ಬಾಟಲಿಯಲ್ಲಿ ಹಳೆಯ ಮದ್ಯದಂತಿದೆ. 370ನೇ ವಿಧಿಯನ್ನು ರದ್ದು ಮಾಡುತ್ತೇವೆ ಎಂದು ಹೇಳುತ್ತಿದ್ದೀರ. ಜನಸಂಘ ಬಂದಾಗಿನಿಂದಲೂ ಇದನ್ನೇ ಹೇಳುತ್ತಿದ್ದೀರಿ. ಬಾಬ್ರಿ ಮಸೀದಿ ಕೆಡವಿ ರಾಮಮಂದಿರ ಕಟ್ತೀವಿ ಅಂತ ಹೇಳಿದಿರಿ.

ವಾಜಪೇಯಿ 6 ವರ್ಷ, ನೀವು 5 ವರ್ಷ ಆಡಳಿತ ಮಾಡಿದಿರಿ, ಏನು ಮಾಡಿದ್ರಿ? ಊರೂರಿಂದ ತಂದ ಇಟ್ಟಿಗೆ, ಹಣ ಏನಾಯ್ತು? ಲೆಕ್ಕ ಕೊಡಬೇಕಲ್ವ ಮಿಸ್ಟರ್ ಮೋದಿ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮೋಹನ್ ಭಾಗವತ್ ಮೀಸಲಾತಿ ಕೊಡಬಾರದು ಎನ್ನುತ್ತಾರೆ. ಆರ್ಎಸ್ಎಸ್ ಪ್ರಧಾನ ಕಾರ್ಯದರ್ಶಿಯೊಬ್ಬ ಸಂವಿಧಾನವನ್ನು ಬದಲಾಯಿಸಬೇಕು ಅಂತಾನೆ. ಇಲ್ಲಿ ಯಾವೋನೋ ಅಭ್ಯರ್ಥಿಯಾಗಿರೋನು ಸಂವಿಧಾನ ಸುಟ್ಟು ಹಾಕಬೇಕು ಅಂತಾನೆ. ಜಗತ್ತಿನಲ್ಲಿ ಶ್ರೇಷ್ಠವಾಗಿರೋದೇ ನಮ್ಮ ಸಂವಿಧಾನ. ನಮ್ಮ ಸಂವಿಧಾನ ಉಳಿಯಬೇಕು, ಪ್ರಜಾತಂತ್ರ ಉಳಿಯಬೇಕು. ಸರ್ವಾಧಿಕಾರಿ ಮನೋಭಾವನೆ ಇರುವ ತತ್ವ ಬದಲಾಗಬೇಕು.

ಸಂಸತ್ನಲ್ಲಿ ಮಾತನಾಡದ ಮೋದಿ ರಾಜ್ಯಸಭೆಗೆ 5 ವರ್ಷದಲ್ಲಿ ಕೇವಲ 19 ಬಾರಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡದ ಮೋದಿ ಕೇವಲ ಮನ್ ಕಿ ಬಾತ್ ಮಾಡಿಕೊಂಡಿದ್ದಾರೆ. ಮನ್ ಕಿ ಬಾತ್ನಿಂದ ಬಡವರ ಹೊಟ್ಟೆ ತುಂಬುವುದಿಲ್ಲ, ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ರೈತರ ಬಗ್ಗೆ ಯಾವತ್ತೂ ಮೋದಿ ಮಾತನಾಡುವುದಿಲ್ಲ. ಅವರಿಗೆ ಆ ವಿಷಯ ಬೇಕಾಗಿಯೂ ಇಲ್ಲ. ಅವರೇನಿದ್ದರೂ ಉಳ್ಳವರ ಪರ ಎಂದು ಮೋದಿ ವಿರುದ್ದ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

error: Content is protected !! Not allowed copy content from janadhvani.com