ಚಿತ್ರದುರ್ಗ, ಏ 9 – ಕಳೆದ 70 ವರ್ಷಗಳಲ್ಲಿ ಸಂಕುಚಿತ ರಾಜಕೀಯ ಹಿತಾಸಕ್ತಿಯಿಂದಾಗಿ ಜನತೆಗೆ “ನ್ಯಾಯ” ನೀಡದೆ ,ರೈತರು ಮತ್ತು ಬಡವರಿಗೆ ವಾರ್ಷಿಕ 72 ಸಾವಿರ ರೂ ಹಣಕಾಸು ನೆರವು ನೀಡುವ ಕಾಂಗ್ರೆಸ್ ನ “ ನ್ಯಾಯ್ “ ಯೋಜನೆಯನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ,ಅದನ್ನು ತಿರಸ್ಕರಿಸಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ.
ಕೋಟೆಕೊತ್ತಲೆಗಳ ನಾಡು ದುರ್ಗದ ಮೈದಾನದಲ್ಲಿ ಆಯೋಜಿಸಲಾಗಿದ್ದ “ ವಿಜಯ ಸಂಕಲ್ಪ ಯಾತ್ರೆ “ಯಲ್ಲಿ ಕನ್ನಡ, ಹಿಂದಿಯಲ್ಲಿ ಭಾಷಣ ಮಾಡಿ ಮತಯಾಚಿಸಿದ ಮೋದಿ, 20 ನೇ ಶತಮಾನದಲ್ಲಿ ಕಾಂಗ್ರೆಸ್ ಭ್ರಷ್ಟಾಚಾರ ನಡೆಸಿ ದೇಶದ ಜನರ ಭಾವನೆಗಳಿಗೆ ಘಾಸಿಯುಂಟು ಮಾಡಿತ್ತು. ಇಂತಹ ಪಕ್ಷವನ್ನು ತಿರಸ್ಕರಿಸಿ ಎಂದರು.
ನ್ಯಾಷನಲ್ ಹೆರಾಲ್ಡ್ ಹಗರಣ ನಡೆಸಿದವರಿಗೆ ಶಿಕ್ಷೆ ಆಗಲಿದೆ. ಕಾಮನ್ ವೆಲ್ತ್, 2 ಜಿ, ಕಲ್ಲಿದ್ದಲು, ಹೆಲಿಕಾಪ್ಟರ್ ಹಗರಣ ನಡೆಸಿದವರಿಗೆ ತಕ್ಕ ಶಾಸ್ತಿಯಾಗಲಿದೆ. ರಾಜ್ಯದ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರ್ಕಾರದ ರಿಮೋಟ್ ಕಂಟ್ರೋಲ್ 12 ಮಂದಿ ಕೈಯಲ್ಲಿದೆ. ಈ ಸರ್ಕಾರವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಇವರು ಸ್ವಾರ್ಥದಿಂದ ಮೈತ್ರಿ ಮಾಡಿಕೊಂಡಿದ್ದಾರೆ. ಇಂತಹ ಮಾದರಿಯ ಸರ್ಕಾರ ಕೇಂದ್ರದಲ್ಲಿ ಅವಶ್ಯಕತೆಯಿದೆಯೇ?. ಹೈಕಮಾಂಡ್ ಎಂದರೆ ನಮಗೆ 125 ಕೋಟಿ ಜನ ಮಾತ್ರ ಎಂದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ – ಜೆಡಿಎಸ್ ಮತಗಳಿಕೆಗಾಗಿ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ. ನಮ್ಮದು ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸರ್ಕಾರ. ಹಿಂದಿನ ಕಾಂಗ್ರೆಸ್ ಸರ್ಕಾರ, ಒಮ್ಮ ಲಿಂಗಾಯಿತರನ್ನು ವಿಭಜಿಸಿಲು ಮುಂದಾಗಿದ್ದರು. ಹೀಗೆ ವಿಭಜಿಸಿ ಆಡಳಿತ ನಡೆಸುವುದೇ ಇವರ ರಾಜಕೀಯ ತಂತ್ರವಾಗಿದೆ ಎಂದು ಮೋದಿ ಟೀಕಿಸಿದರು.
ಪ್ರತಿಯೊಂದು ಕುಟುಂಬಕ್ಕೆ ವಿದ್ಯುತ್, ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ನವ ಭಾರತ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ಇದಕ್ಕೆ ಯುವ ಜನತೆ, ಅದರಲ್ಲೂ ನಿರ್ದಿಷ್ಟವಾಗಿ ಮೊದಲ ಬಾರಿಗೆ ಮತ ಚಲಾಯಿಸುವವರು ಯೋಚಿಸಿ ತೀರ್ಮಾನ ಕೈಗೊಳ್ಳಬೇಕು. ಮೊದಲ ಮತ ಬಡವರಿಗೆ ಮನೆ ಕೊಟ್ಟವರಿಗೆ, ಬಡವರಿಗೆ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ದೊರಕಿಸಿಕೊಟ್ಟವರಿಗೆ ಹಾಕಬೇಕು. ಎಲ್ಲರ ಮತ ದೊರೆತರೆ ತಮಗೆ ಹೆಚ್ಚು ಶಕ್ತಿ ಬರುತ್ತದೆ. ನಿಮ್ಮ ಮತ ನೇರವಾಗಿ ಮೋದಿಗೆ ಬೀಳಬೇಕಾಗಿದೆ. ಸಮರ್ಥ ಆಡಳಿತ, ಸಮರ್ಥ ಸರ್ಕಾರಕ್ಕಾಗಿ ಪೂರ್ಣ ಪ್ರಮಾಣದಲ್ಲಿ ತಮಗೆ ಮತಹಾಕಬೇಕು. ಪ್ರತಿಯೊಂದು ಮತಗಟ್ಟೆಯಲ್ಲಿ ಕಮಲ ಅರಳಬೇಕು ಎಂದು ಕರೆ ನೀಡಿದರು.