ಖಾತೆ ಹಂಚಿಕೆ ಗೊಂದಲಕ್ಕೆ ತೆರೆ

ಬೆಂಗಳೂರು, ಡಿ. 28- ಸಚಿವ ಸಂಪುಟದ ಪುನಾರಚನೆಯಾದ ನಂತರ ನೂತನ ಸಚಿವರಿಗೆ ಖಾತೆಗಳ ಹಂಚಿಕೆ ವಿಚಾರದಲ್ಲಿ  ಕಳೆದ ಒಂದು ವಾರದಿಂದ ಉಂಟಾಗಿದ್ದ ಕಗ್ಗಂಟು ಕೊನೆಗೂ ಬಗೆಹರಿದಿದೆ. ಕಾಂಗ್ರೆಸ್ ಹೈಕಮಾಂಡ್‌ನ ಮಧ್ಯಪ್ರವೇಶದಿಂದಾಗಿ ಕೆಲವು ಪ್ರಭಾವಿ ಸಚಿವರು ತಮ್ಮ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು ಬಿಟ್ಟುಕೊಡಲು ಸಮ್ಮತಿಸಿದ್ದರಿಂದ ಬಿಕ್ಕಟ್ಟು ಸುಖಾಂತ್ಯಗೊಂಡಿದೆ.

ಯಾರಿಗೆ, ಯಾವ ಖಾತೆ?

 • ಡಾ.ಜಿ. ಪರಮೇಶ್ವರ್ – ಡಿಸಿಎಂ- ಬೆಂಗಳೂರು ಅಭಿವೃದ್ಧಿ ಹಾಗೂ ಕಾನೂನು, ಐಟಿಬಿಟಿ
 • ಡಿಕೆ ಶಿವಕುಮಾರ್ – ಜಲಸಂಪನ್ಮೂಲ ಇಲಾಖೆ
 • ಆರ್.ವಿ.ದೇಶಪಾಂಡೆ- ಕಂದಾಯ ಇಲಾಖೆ
 • ಕೆ.ಜೆ.ಜಾರ್ಜ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖೆ
 • ಕೃಷ್ಣ ಬೈರೇಗೌಡ- ಗ್ರಾಮೀಣಾಭಿವೃದ್ಧಿ ಇಲಾಖೆ
 • ಯು.ಟಿ.ಖಾದರ್-  ನಗರಾಭಿವೃದ್ಧಿ ಇಲಾಖೆ  
 • ಜಯಮಾಲಾ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
 • ಎಂ.ಬಿ.ಪಾಟೀಲ್ – ಗೃಹ ಇಲಾಖೆ
 • ಸತೀಶ್ ಜಾರಕಿಹೊಳಿ- ಅರಣ್ಯ, ಪರಿಸರ ಇಲಾಖೆ
 • ಎಂ.ಟಿ.ಬಿ. ನಾಗರಾಜ್- ವಸತಿ ಇಲಾಖೆ
 • ಇ.ತುಕಾರಾಂ- ವೈದ್ಯಕೀಯ ಶಿಕ್ಷಣ ಇಲಾಖೆ
 • ಎನ್ ಎಚ್ .ಶಿವಶಂಕರ ರೆಡ್ಡಿ- ಕೃಷಿ ಇಲಾಖೆ  
 • ಪ್ರಿಯಾಂಕ್ ಖರ್ಗೆ- ಸಮಾಜ ಕಲ್ಯಾಣ  ಇಲಾಖೆ
 • ಜಮೀರ್ ಅಹ್ಮದ್- ಆಹಾರ, ನಾಗರಿಕ ಪೂರೈಕೆ  ಇಲಾಖೆ
 • ಶಿವಾನಂದ ಪಾಟೀಲ್- ಆರೋಗ್ಯ, ಕುಟುಂಬ ಕಲ್ಯಾಣ  ಇಲಾಖೆ
 • ವೆಂಕಟರಮಣಪ್ಪ- ಕಾರ್ಮಿಕ ಇಲಾಖೆ
 • ರಾಜಶೇಖರ್ ಪಾಟೀಲ್- ಗಣಿ, ಭೂವಿಜ್ಞಾನ ಇಲಾಖೆ
 • ಪಿ.ಟಿ.ಪರಮೇಶ್ವರ್ ನಾಯ್ಕ್- ಮುಜರಾಯಿ, ಕೌಶಲಾಭಿವೃದ್ಧಿ
 • ರಹೀಂ ಖಾನ್- ಯುವಜನ, ಕ್ರೀಡೆ ಇಲಾಖೆ  
 • ಆರ್.ಬಿ.ತಿಮ್ಮಾಪುರ- ಬಂದರು, ಒಳನಾಡು ಸಾರಿಗೆ, ಸಕ್ಕರೆ ಖಾತೆ

ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಅವರೊಂದಿಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಪ್ರಭಾವಿ ಸಚಿವರಾದ ಡಿ.ಕೆ ಶಿವಕುಮಾರ್, ಆರ್.ವಿ ದೇಶಪಾಂಡೆ, ಕೃಷ್ಣಭೈರೇಗೌಡ, ಯು.ಟಿ ಖಾದರ್, ಜಮೀರ್ ಅಹ್ಮದ್ ಖಾನ್ ಮತ್ತಿತರರು ತಮ್ಮ ಬಳಿ ಇದ್ದ ಹೆಚ್ಚುವರಿ ಖಾತೆಗಳನ್ನು ಬಿಟ್ಟುಕೊಡಲು ಸಮ್ಮತಿಸಿದ್ದಾರೆ. ಅದರ ಫಲವಾಗಿ 8 ಮಂದಿ ನೂತನ ಸಚಿವರಿಗೆ ಖಾತಗಳಿಗೆ ಹಂಚಿಕೆ ಮಾಡಲಾಗಿದೆ.

ಪರಮೇಶ್ವರ್ ಅವರು ತಮ್ಮ ಬಳಿ ಇದ್ದ ಗೃಹ ಖಾತೆಯನ್ನು ಬಿಟ್ಟುಕೊಡಲು ಒಪ್ಪಿದ್ದರಿಂದ ಈ ಖಾತೆಯನ್ನು ಉತ್ತರ ಕರ್ನಾಟಕ ಭಾಗದ ಪ್ರಭಾವಿ ನಾಯಕ ಎಂ.ಬಿ ಪಾಟೀಲ್ ಅವರಿಗೆ ಧಕ್ಕಿದೆ.

ಶಿವಕುಮಾರ್ ಅವರು ಜಲಸಂಪನ್ಮೂಲ ಖಾತೆಯನ್ನು ಬಿಟ್ಟುಕೊಡಲು ಒಪ್ಪದ ಹಿನ್ನೆಲೆಯಲ್ಲಿ ಅವರ ಬಳಿಯಿದ್ದ ವೈದ್ಯಕೀಯ ಶಿಕ್ಷಣ ಖಾತೆಯನ್ನು ಬಳ್ಳಾರಿ ಜಿಲ್ಲೆಯ ಶಾಸಕ ಈ. ತುಕಾರಾಂ ಅವರಿಗೆ ನೀಡಲಾಗಿದೆ.

ದೇಶಪಾಂಡೆ ಅವರ ಬಳಿಯಿದ್ದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆಯನ್ನು ನೂತನ ಸಚಿವರಿಗೆ ಹಂಚಿಕೆ ಮಾಡಲಾಗಿದೆ.

ಕೃಷ್ಣಭೈರೇಗೌಡ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಜೋತು ಬಿದ್ದಿದ್ದರಿಂದ ಅವರ ಬಳಿಯಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆಯನ್ನು ಉಪಮುಖ್ಯಮಂತ್ರಿ ‌ ಪರಮೇಶ್ವರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.

ಸಚಿವ ಯು.ಟಿ ಖಾದರ್ ಬಳಿಯಿದ್ದ ವಸತಿ ಮತ್ತು ನಗರಾಭಿವೃದ್ಧಿ ಖಾತೆಗಳ ಪೈಕಿ ವಸತಿ ಖಾತೆಯನ್ನು ಎಂ.ಟಿ.ಬಿ ನಾಗರಾಜ್ ಅವರಿಗೆ ನೀಡಲಾಗಿದೆ.

ಜಯಮಾಲಾ ಅವರ ಬಳಿಯಿದ್ದ 2 ಖಾತೆಗಳ ಪೈಕಿ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ಶಿವಕುಮಾರ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಇತ್ತೀಚೆಗೆ ಸಂಪುಟ ಸೇರಿದ ಸತೀಶ್ ಜಾರಕಿಹೊಳಿ ಅವರಿಗೆ ಅರಣ್ಯ, ಪರಿಸರ ಖಾತೆಯನ್ನು ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!