janadhvani

Kannada Online News Paper

ಹಿಜಾಬ್: ವಿದ್ಯಾರ್ಥಿನಿಗಳನ್ನು ತಡೆದ ಪ್ರಾಂಶುಪಾಲರನ್ನು ವಜಾ ಮಾಡಬೇಕು- ಮಾಜಿ ಸಿಎಂ

ಪ್ರಾಂಶುಪಾಲರ ನಡವಳಿಕೆ ಶಿಕ್ಷಣದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ.

ಬೆಂಗಳೂರು,ಫೆ.4: ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸಿ ಕಾಲೇಜಿಗೆ ಬರುವುದು ಧಾರ್ಮಿಕ ನಿಯಮ. ನಮ್ಮ ಸಂವಿಧಾನ ಎಲ್ಲಾ ಧರ್ಮದವರಿಗೂ ಅವರು ನಂಬಿದ ಆಚರಣೆಗಳನ್ನು ಪಾಲಿಸಲು ಅವಕಾಶ ನೀಡಿದೆ.

ಹಿಜಾಬ್ ಧರಿಸಿರುವ ಮುಸ್ಲಿಂ ಹೆಣ್ಣು ಮಕ್ಕಳನ್ನು ಕಾಲೇಜು ಪ್ರವೇಶಿಸದಂತೆ ಗೇಟ್ ಬಂದ್ ಮಾಡಿದ ಉಡುಪಿ ಜಿಲ್ಲೆ ಕುಂದಾಪುರ ಸರ್ಕಾರಿ ಕಾಲೇಜಿನ ಪ್ರಾಂಶುಪಾಲರನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ

ಬಿಜೆಪಿಯವರು ಶಾಲಾ ಕಾಲೇಜುಗಳಲ್ಲೂ ರಾಜಕಾರಣ ಮಾಡಲಾರಂಭಿಸಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಿರುವುದು ಹೊಸದಲ್ಲ, ಆರಂಭದಿಂದಲೂ ಅವರು ಹಿಜಾಬ್ ಧರಿಸಿಯೇ ಬರುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಈ ಮೊದಲು ಕೇಸರಿ ಶಾಲು ಧರಿಸಿ ಬರುತ್ತಿರಲಿಲ್ಲ. ಇದ್ದಕ್ಕಿದ್ದಂತೆ ಕೇಸರಿ ಶಾಲು ಹಾಕಿಕೊಳ್ಳುತ್ತಿರುವುದರ ಹಿಂದೆ ಇರುವ ದುರುದ್ದೇಶವೇನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ನಾನು ನೋಡಿದ್ದೇನೆ. ಅದರಲ್ಲಿ ವಸ್ತ್ರ ಸಂಹಿತೆ ಇಲ್ಲ. ಬಿಜೆಪಿಯವರು ತಮ್ಮ ಸರ್ಕಾರದ ಲೋಪ ದೋಷಣಗಳನ್ನು ಹಾಗೂ ವೈಪಲ್ಯಗಳನ್ನು ಮರೆ ಮಾಚಲು ವಿಷಯಾಂತರ ಮಾಡುತ್ತಿದ್ದಾರೆ. ಹಿಜಾಬ್ ವಿಷಯವನ್ನು ಬೇಕೆಂತಲೇ ಮುನ್ನೆಲೆಗೆ ತಂದಿದ್ದಾರೆ ಎಂದು ಆರೋಪಿಸಿದರು.

ಅವರ್ಯಾರೋ ಬಿಜೆಪಿಯ ಶಾಸಕ ರಘುಪತಿ ಭಟ್ ಸಭೆ ಮಾಡಿ ಹೇಳಿದರು ಎಂಬ ಕಾರಣಕ್ಕೆ ಪ್ರಾಂಶುಪಾಲರು ಕಾಲೇಜಿನ ಗೇಟ್ ಮುಚ್ಚಿ ಹಿಜಾಬ್ ಧರಿಸಿ ಬಂದ ಮಕ್ಕಳಿಗೆ ಪ್ರವೇಶ ನಿರಾಕರಿಸಿದ್ದಾರೆ. ಈ ರೀತಿ ಆದೇಶ ನೀಡಲು ರಘುಪತಿ ಭಟ್ ಯಾರು. ಪ್ರಾಂಶುಪಾಲರ ನಡವಳಿಕೆ ಶಿಕ್ಷಣದ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ. ಕಡ್ಡಾಯ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ. ಹೆಣ್ಣುಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಈ ಹುನ್ನಾರ ಸರಿಯಲ್ಲ ಎಂದರು.

error: Content is protected !! Not allowed copy content from janadhvani.com