janadhvani

Kannada Online News Paper

ಕರ್ನಾಟಕ ಬಂದ್: ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ- ತೀವ್ರ ಪ್ರತಿಭಟನೆ

ಬೆಂಗಳೂರು, ಸೆ.28: ರೈತ, ಕಾರ್ಮಿಕ ವಿರೋಧಿ ವಿಧೇಯಕಗಳನ್ನು ಜಾರಿಗೊಳಿಸುತ್ತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ರೈತಪರ, ಕಾರ್ಮಿಕ, ದಲಿತ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೆಂಗಳೂರಿನಲ್ಲಿ ಸಾವಿರಾರು ಮಂದಿ ವಿವಿಧ ಕಡೆಗಳಿಂದ ಮೆರವಣಿಗೆ ಮೂಲಕ ಟೌನ್ ಹಾಲ್ ಬಳಿ ಜಮಾವಣೆಗೊಂಡು ಪ್ರತಿಭಟನೆ ನಡೆಸುತ್ತಿದ್ದಾರೆ. ವಿವಿಧ ಕಲಾವಿದರು ಪ್ರತಿಭಟನೆಯ ಕಿಚ್ಚನ್ನು ಹೆಚ್ಚಿಸುತ್ತಿದ್ದಾರೆ. ರೈತರಿಗೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೂಡ ಸಾಥ್ ನೀಡಿದ್ದಾರೆ.

ಪುರಭವನದ ಬಳಿ ರೈತರ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಇದು ಸಾಂಕೇತಿಕ ಪ್ರತಿಭಟನೆ. ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಹೊಟೇಲ್ ಉದ್ಯಮದವರು ನಮ್ಮ ಪ್ರತಿಭಟನೆಗೆ ಬೆಂಬಲ ನೀಡಬೇಕಿತ್ತು. ನಾವು ಬೆಳೆದ ಅನ್ನ ಮಾರಿ ಬದುಕುತ್ತಿರುವ ನೀವು ನಮಗೆ ಬೆಂಬಲ ನೀಡಬೇಕಿತ್ತು ಎಂಬ ಆಕ್ರೋಶ ವ್ಯಕ್ತಪಡಿಸಿದರು.
ಕೃಷಿಗೆ ಮಾರಕವಾದ ರೈತರಿಗೆ ಮರಣಶಾಸನವಾದ ಈ ಕಾಯ್ದೆಗಳನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆ ಖಂಡಿಸಿದರು. ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಈ ಬಂದ್ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದರು.
ಇನ್ನು ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ರಾಮನಗರ, ರಾಯಚೂರು, ಬೀದರ್, ಹಾಸನ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಜೋರಾಗಿದ್ದರೆ ಚಾಮರಾಜನಗರ, ಬಳ್ಳಾರಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕರಾವಳಿ ಜಿಲ್ಲೆ ಗಳಲ್ಲಿ ನೀರಸ ಪ್ರತಿಕ್ರಿಯೆ ಕಂಡು ಬಂದಿದೆ.

ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ರೈತ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸಿದರೆ ಬಂದ್ ಬೆಂಬಲಿಸಿ ವಿವಿಧ ಸಂಘಟನೆಗಳು ರಸ್ತೆ ತಡೆ, ಧರಣಿ, ಪ್ರತಿಭಟನೆ ನಡೆಸಿದವು. ಹಲವೆಡೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದರು.ನಗರದ ಟೌನ್ಹಾುಲ್ ಬಳಿ ಕನ್ನಡಪರ ಹೋರಾಟಗಾರರು, ಕನ್ನಡಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಉರುಳುಸೇವೆ ಮಾಡಿದರು. ಅಲ್ಲದೆ, ಬೃಹತ್ ಗಾತ್ರದ ನೇಗಿಲು ಹೊತ್ತು ರೈತಪರ ಘೋಷಣೆಗಳನ್ನು ಕೂಗಿದರು. ಗದಗದಲ್ಲಿ ರೈತರು ತಲೆ ಮೇಲೆ ಕಲ್ಲು ಹೊತ್ತು ಬಾಯಿ ಬಡಿದುಕೊಂಡು ತಮ್ಮ ಆಕ್ರೋಶ ಹೊರಹಾಕಿದರು.

ರೈತರಿಗೆ ನ್ಯಾಯ ನೀಡಬೇಕೆಂದು ಆಗ್ರಹಿಸಿ ಕಲಬುರಗಿಯಲ್ಲಿ ರೈತರು ಅರೆಬೆತ್ತಲೆ ಮೆರವಣಿಗೆ ಮಾಡಿದರು. ಮಂಡ್ಯದಲ್ಲಿ ಬೈಕ್ ರಾಲಿ ನಡೆಸಿ ರೈತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ರೈತರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಮಹಿಳಾ ಘಟಕ, ವಿಮಾನ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಸುಮ್ಮನಹಳ್ಳಿ ಜಂಕ್ಷನ್ನ ಲ್ಲಿ ಕಬ್ಬು ಬೆಳೆಗಾರರ ಹೋರಾಟಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಅಲ್ಲಿಂದ ಮೆರವಣಿಗೆ ಮೂಲಕ ಟೌನ್ಹಾರಲ್‍ವರೆಗೆ ಮೆರವಣಿಗೆ ನಡೆಸಲಾಯಿತು. ಮೌರ್ಯ ವೃತ್ತದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಧರಣಿ ನಡೆಸಿ ಅಲ್ಲಿಂದ ಟೌನ್ಹಾೆಲ್ಗೆಗ ಮೆರವಣಿಗೆ ಮೂಲಕ ಸಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ರೈತರಿಗೆ ಮಾರಕವಾಗುವ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಲಾಯಿತು.

ಇನ್ನು ಮೆಜೆಸ್ಟಿಕ್ನಖಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕತ್ತೆಯ ಮೇಲೆ ವಾಟಾಳ್ ನಾಗರಾಜ್ ಮೆರವಣಿಗೆ ನಡೆಸಿದರು. ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದು, ಮಂಜುನಾಥ್ ದೇವು, ಗಿರೀಶ್ ಗೌಡ ಮುಂತಾದವರು ಪ್ರತಿಭಟನೆ ನಡೆಸಿ ಕೃಷಿಕರಿಗೆ ಮಾರಕವಾದ ಕಾಯ್ದೆಗಳನ್ನು ಕೂಡಲೇ ಹಿಂಪಡೆಯದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು.ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಾರಾಯಣಗೌಡ ನೇತೃತ್ವದಲ್ಲಿ ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕುವ ಯತ್ನ ನಡೆಸಿದರು. ಪೊಲೀಸರು ಕಾರ್ಯಕರ್ತರನ್ನು ರೈಲ್ವೆ ನಿಲ್ದಾಣದ ಒಳಗೆ ಬಿಡದೆ ತಡೆದು ಹಲವರನ್ನು ತಮ್ಮ ವಶಕ್ಕೆ ಪಡೆದರು.

ಮೈಸೂರಿನಲ್ಲಿ ತಲೆಯ ಮೇಲೆ ಕಲ್ಲು, ಹೆಗಲಿಗೆ ಗುದ್ದಲಿ, ಪಿಕಾಸಿಯನ್ನು ಹಾಕಿಕೊಂಡು ಬೆಂಗಳೂರಿಗೆ ತೆರಳುವ ಬಸ್ ತಡೆದು ರೈತರು ಸೇರಿದಂತೆ ವಿವಿಧ ಸಂಘಟನೆಯ ಸದಸ್ಯರು ಪ್ರತಿಭಟನೆ ನಡೆಸಿದರು.
ರಾಮನಗರದ ಐಜೂರು ವೃತ್ತದಲ್ಲಿ ರೈತ ಸಂಘ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಜನರು ‌ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಯಾದಗಿರಿಯಲ್ಲಿ ರೈತರು, ಕರವೇ ಕಾರ್ಯಕರ್ತರು ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಟೈರ್ ಗೆ ಬೆಂಕಿ ಹಚ್ಚಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆಯ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರೈತಸಂಘಟನೆಗಳು ಆರಂಭಿಸಿರುವ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆಗಳಯ ಕೈ ಜೋಡಿಸಿವೆ. ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಲ್ಲಿ ರಸ್ತೆತಡೆ ನಡೆಸುತ್ತಿದ್ದ ಪ್ರತಿಭಟನಕಾರರನ್ನು‌ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಶಾಲನಗರದ ಕೊಪ್ಪ ಗೇಟ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರು ಹಾಗೂ ಕಾರ್ಮಿಕರನ್ನು ಬಂಧಿಸಲಾಗಿದೆ. ದಾವಣಗೆರೆಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ.

ಚಾಮರಾಜನಗರಲ್ಲಿಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ಖಂಡಿಸಿ ಕರೆ ನೀಡಿರುವ ಅಂಗವಾಗಿ ಚಾಮರಾಜನಗರದಲ್ಲಿ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಕ್ಷಣಾ ವೇದಿಕೆ, ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಬಹುತೇಕ ಅಂಗಡಿ‌ಮುಂಗಟ್ಟು ಮುಚ್ಚಿವೆ.
ಹುಬ್ಬಳ್ಳಿಯ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರೆ ಬೆಳಗಾವಿಯಲ್ಲಿ ರೈತ ವಿರೋಧಿ ನೀತಿಗಳನ್ನು ಖಂಡಿಸಿ ವಿವಿಧ ಸಂಘಟನೆಗಳಿಂದ ಬಂದ್ ಗೆ ಕರೆ ನೀಡಲಾಗಿದ್ದರೂ ಎನ್ ಡಬ್ಲ್ಯು ಕೆ ಎಸ್ ಆರ್ ಟಿ ಸಿ ಬಸ್ ಗಳ ಕಾರ್ಯಾಚರಣೆ ನಡೆಸುತ್ತಿರುವುದನ್ನು ವಿರೋಧಿಸಿ ಕರ್ನಾಟಕ ನವ ನಿರ್ಮಾಣ ಸೇನೆ ಜಿಲ್ಲಾ ಘಟಕದವರು ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರತಿಭಟಿಸಿದರು.

ಚಿತ್ರದುರ್ಗದ ಗಾಂಧಿ ವೃತ್ತದಲ್ಲಿ ಕನ್ನಡಪರ ಹಾಗೂ ರೈತ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು. ಅಂಗಡಿಗಳು ಬಾಗಿಲು ಮುಚ್ಚಿವೆ. ಚಿಕ್ಕಮಗಳೂರಿನ ಕೆಎಸ್ ಆರ್ ಟಿಸಿ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಲಾಗಿದೆ.ಕಲಬುರ್ಗಿಯಲ್ಲಿ ವಿವಿಧ ರೈತ ಹಾಗೂ ಕನ್ನಡಪರ ‌ಸಂಘಟನೆಗಳು ನಗರದಲ್ಲಿ ಬೆಳಿಗ್ಗೆಯಿಂದ ಇಲ್ಲಿನ ಕೇಂದ್ರ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ‌ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಬಸ್ ಸಂಚಾರ ವಿರಳವಾಗಿದೆ. ಚಿಕ್ಕಬಳ್ಳಾಪುರದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಿದವು.
ತುಮಕೂರು ನಗರದಲ್ಲಿ ಅಂಗಡಿ ಮುಗ್ಗಟ್ಟುಗಳು ಮುಚ್ಚಿದ್ದವು ಸರ್ಕಾರಿ ಬಸ್ ಸೇವೆ ,ಆಟೋ ರಿಕ್ಷಾಗಳ ಓಡಾಟ ,ಎಂದಿನಂತೆ ಇತ್ತು.

ಬಂದ್ ಗೆ ದಕ್ಷಿಣ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ನೀತಿ ಖಂಡಿಸಿ ನೀಡಲಾದ ಕರ್ನಾಟಕ ಬಂದ್ ಗೆ ದಕ್ಷಿಣ ಕನ್ನಡದಲ್ಲಿ ನೀರಸ ಪ್ರತಿಕ್ರಿಯೆ ದೊರೆತಿದೆ. ಎಂದಿನಂತೆ ಖಾಸಗಿ ಬಸ್‌ಗಳು ಮತ್ತು ಕೆ ಎಸ್ ಆರ್ ಟಿ ಸಿ ಬಸ್‌ಗಳು, ಆಟೋಗಳು ರಸ್ತೆಗಿಳಿದಿದ್ದು, ಬಂದರು ಪ್ರದೇಶದಲ್ಲಿ ವ್ಯಾಪಾರ ವಹಿವಾಟುಗಳು ಎಂದಿನಂತೆ ನಡೆಯುತ್ತಿದೆ.

ಇನ್ನು ಕರ್ನಾಟಕ ಬಂದ್ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ನಗರದಾದ್ಯಂತ 300 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. 6 ಕೆಎಸ್‌ಆರ್‌ಪಿ, 8 ಡಿಎಆರ್ ತುಕಡಿಗಳು ಮತ್ತು 50 ಹೋಂ ಗಾರ್ಡ್ ಗಳನ್ನು ನಿಯೋಜನೆ ಮಾಡಿದ್ದು, ಇಂದು ಬೆಳಗ್ಗಿನಿಂದಲೇ ಪೊಲೀಸ್ ಅಧಿಕಾರಿಗಳು ರೌಂಡ್ಸ್ ನಲ್ಲಿದ್ದಾರೆ. ಇನ್ನು ಬಲವಂತವಾಗಿ ಬಂದ್ ನಡೆಸಲು ಮುಂದಾದವರಿಗೆ ಮತ್ತು ಕೋವಿಡ್ 19 ನಿಯಮಾವಳಿ ಉಲ್ಲಂಘಿಸಿದವರಿಗೆ ಕಾನೂನು ಕ್ರಮದ ಕೈಗೊಳ್ಳಲಾಗುವುದು ಎಂದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಮಂಗಳೂರಿನಲ್ಲಿ ಕೇವಲ ಪ್ರತಿಭಟನೆಗೆ ಮಾತ್ರ ಸೀಮಿತವಾಗಿರುವ ಕರ್ನಾಟಕ ಬಂದ್ ಹಿನ್ನಲೆಯಲ್ಲಿ ನಗರದ ಮಿನಿ ವಿಧಾನಸೌಧದ ಎದುರು ರೈತಪರ ಸಂಘಟನೆಗಳು, ಡಿವೈಎಫ್ ಐ ,ಸಿಪಿಐ, ಸಿಪಿಐಎಂ, ಕಾಂಗ್ರೆಸ್ ,ಜೆಡಿಎಸ್ , ಸಿಐಟಿಯು,ಎಐಟಿಯುಸಿ, ಡಿ ಎಸ್ ಎಸ್ ಸಂಘಟನೆಯಿಂದ ಪ್ರತಿಭಟನೆ ನಡೆಯಲಿದೆ.

ಬಂದ್‌ಗೆ ಕಾಂಗ್ರೆಸ್ ಜೆಡಿಎಸ್‌ ಬೆಂಬಲ

ರೈತ ವಿರೋಧಿ ಕಾಯ್ದೆ ಜಾರಿಗೆ ವಿರೋಧಿಸಿ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಕೂಡಾ ಬೆಂಬಲ ಸೂಚಿಸಿದೆ. 11.30 ಕ್ಕೆ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಮುಂಭಾಗದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಜಾರಿಗೆ ತರುತ್ತಿರುವ ಮಸೂದೆಗಳ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ಭಾಗಿಯಾಗಲಿದ್ದಾರೆ. ಇನ್ನು ಜೆಡಿಎಸ್‌ ಪಕ್ಷ ಕೂಡಾ ಬಂದ್‌ಗೆ ಬೆಂಬಲ ಸೂಚಿಸಿದ್ದು ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

ಭೂಸುಧಾರಣಾ ಕಾಯ್ದೆ ತಿದ್ದುಪಡಿಗೆ ವಿರೋಧ ಏಕೆ?
ತಳಸಮುದಾಯಕ್ಕೆ ಭೂಮಿಯ ಹಕ್ಕನ್ನು ನೀಡಿರುವ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ನಡೆ ರೈತರ ಆಕ್ರೋಶಕ್ಕೆ ಕಾರಣವಾಗಿದೆ. ತೀವ್ರ ವಿವಾದಕ್ಕೆ ಕಾರಣವಾಗಿದ್ದ ಕರ್ನಾಟಕ ಭೂಸುಧಾರಣೆಗಳ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗಿಕಾರಗೊಂಡಿದೆ. ಕೆಲ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ಅನುಮೋದನೆ ಕೊಟ್ಟ ವಿಧಾನಸಭೆ.

ವಿಧೇಯಕದ ಪ್ರಕಾರ ಇನ್ಮುಂದೆ ಯಾರು ಬೇಕಾದರೂ ಕೃಷಿ ಜಮೀನು ಖರೀದಿ ಮಾಡಬಹುದು. ನೀರಾವರಿ ಪ್ರದೇಶದಲ್ಲಿ ಖರೀದಿ ಮಾಡುವ ಜಮೀನು ಕೃಷಿಗೆ ಮಾತ್ರ ಬಳಕೆಯಾಗಬೇಕು. ಅಲ್ಲದೆ 5 ಜನರಿರುವ ಒಂದು ಕುಟುಂಬ ಗರಿಷ್ಠ 54 ಏಕರೆ ಕೃಷಿ ಜಮೀನು ಖರೀದಿಗೆ ಅವಕಾಶವಿದೆ ಹಾಗೂ 5 ಕ್ಕಿಂತ ಹೆಚ್ಚು ಇರುವ ಕುಟುಂಬ ಗರಿಷ್ಠ 108 ಎಕರೆ ಜಮೀನು ಖರೀದಿ ಮಾಡಬಹುದು ಎಂದಿದೆ. ಜೊತೆಗೆ ಕೃಷಿ ಜಮೀನು ಖರೀದಿಸಲು ಈ ಹಿಂದೆ ಇದ್ದ 25 ಲಕ್ಷ ರೂ ವಾರ್ಷಿಕ ಆದಾಯ ಮಿತಿ ರದ್ದು ಮಾಡಲಾಗಿದೆ.

error: Content is protected !! Not allowed copy content from janadhvani.com