janadhvani

Kannada Online News Paper

ಖಾಸಗಿ ಆಸ್ಪತ್ರೆಗಳ ಕೊರೋನಾ ಟೆಸ್ಟ್ ಎಡವಟ್ಟು- ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗೆ ಮನವಿ

ಮೊದಲಿಗೆ ನೆಗೆಟಿವ್ ವರದಿ ನೀಡಿ, ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗಿರುವ ಕೆಲವು ಮಂದಿಗೆ ಎರಡು ದಿನಗಳ ಬಳಿಕ ನಿಮ್ಮ ವರದಿ ಪಾಸಿಟಿವ್ ಬಂದಿದೆ, ಆಂಬುಲೆನ್ಸ್ ಕಳುಹಿಸುತ್ತೇವೆ, ಆಸ್ಪತ್ರೆಗೆ ಹೊರಡಲು ರೆಡಿಯಾಗಿ ಎಂಬ ಕರೆಗಳು ಬರುತ್ತಿರುವ ಘಟನೆಗಳೂ ನಡೆಯುತ್ತಿವೆ. ಅವರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ!

ಮಂಗಳೂರು :ಖಾಸಗಿ ಆಸ್ಪತ್ರೆಗಳು ನಡೆಸುವ ಕೋವಿಡ್-19 ಗಂಟಲ ದ್ರವ ಪರೀಕ್ಷಾ ಕ್ರಮ ಮತ್ತು ನೀಡುವ ವರದಿಗಳಲ್ಲಿ ಎಡವಟ್ಟುಗಳಾಗುತ್ತಿದ್ದು, ಜನರ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿದೆ. ಜೊತೆಗೆ ಸಮಾಜದಲ್ಲಿ ಆತಂಕ, ಅನುಮಾನಗಳಿಗೆ ಎಡೆ ಮಾಡುತ್ತಿವೆ. ಈ ಕುರಿತಂತೆ ಪರಿಶೀಲನೆ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಉಮರ್ ಯು.ಹೆಚ್. ದಕ್ಷಿಣ ಕನ್ನಡ ಸಿಂಧೂ ಬಿ. ರೂಪೇಶ್ ರನ್ನು ಒತ್ತಾಯಿಸಿದ್ದಾರೆ.

ಕೋವಿಡ್-19 ವಿಪ್ಪತ್ತು ನಿರ್ವಹಣಾ ತಂಡಕ್ಕೆ ಸಮರ್ಥ ನಾಯಕತ್ವ ನೀಡುತ್ತಿರುವ ಜಿಲ್ಲಾಧಿಕಾರಿ ಹಾಗೂ ಜಿಲ್ಲಾಡಳಿತದ ತಂಡದಲ್ಲಿರುವ ಅಧಿಕಾರಿಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು ಮತ್ತು ಎಲ್ಲ ಸಿಬ್ಬಂದಿಗಳನ್ನು ಅಭಿನಂದಿಸಿರುವ ಉಮರ್ ಯು.ಹೆಚ್., ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿನ ಪ್ರಯೋಗಾಲದ ಒತ್ತಡ ಹೆಚ್ಚಾದಾಗ, ಅತ್ಯಂತ ಕಡಿಮೆ (ರೂ. 650) ದರದಲ್ಲಿ ವಿದೇಶಗಳಿಂದ ಬರುವ ನಮ್ಮ ಜಿಲ್ಲೆಯ ಜನರ ಗಂಟಲ ದ್ರವ ಪರೀಕ್ಷೆ ನಡೆಸಲು ಆಯ್ದ ಖಾಸಗಿ ಆಸ್ಪತ್ರೆಗಳಿಗೆ ಆದೇಶ ನೀಡಿರುವ ಜಿಲ್ಲಾಡಳಿತದ ಕ್ರಮವನ್ನು ಸ್ವಾಗತಿಸಿದ್ದಾರೆ.

ಆದರೆ, ಕೆಲವು ಖಾಸಗಿ ಆಸ್ಪತ್ರೆಗಳ ಪ್ರಯೋಗಾಲಯಗಳು ನಡೆಸುತ್ತಿರುವ, ಹೋಟೆಲ್ ಕ್ವಾರಂಟೈನ್ ನಲ್ಲಿರುವವರ ಗಂಟಲ ದ್ರವ ಪರೀಕ್ಷೆಯಲ್ಲಿ ಎಡವಟ್ಟುಗಳಾಗುತ್ತಿರುವುದನ್ನು ದಾಖಲೆ ಸಹಿತ ವಿವರಿಸಿದ್ದಾರೆ.

• ವಿದೇಶದಿಂದ ಬಂದ ಮರುದಿನವೇ ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳು ಮತ್ತಿತರರ ಗಂಟಲ ದ್ರವ ಪಡೆಯಲು ಆಸ್ಪತ್ರೆಯ ಪ್ರಯೋಗಾಲದ ಸಿಬ್ಬಂದಿಗಳು ಹೋಟೆಲ್ ಗಳಿಗೆ ಭೇಟಿ ನೀಡಬೇಕೆಂಬ ನಿಯಮವಿದೆ. ಆದರೆ ಇದರ ಕಟ್ಟು ನಿಟ್ಟಿನ ಪಾಲನೆಯಾಗುತ್ತಿಲ್ಲ. 2-3 ದಿನಗಳ ಬಳಿಕವೇ ಬರುತ್ತಿದ್ದಾರೆ.

• ಗಂಟಲ ದ್ರವ ಪಡೆದ ಬಳಿಕ ಪ್ರತಿಯೊಬ್ಬರಿಗೂ ಪ್ರಯೋಗಾಲಯದಿಂದ ಕಳುಹಿಸುವ ವರದಿಯ ಪ್ರಾಥಮಿಕ ಚೀಟಿಯಲ್ಲಿ ಎಡವಟ್ಟಾಗುತ್ತಿದೆ. ರೋಗ ಲಕ್ಷಣಗಳಿಲ್ಲದವರಿಗೂ ‘ರೋಗ ಲಕ್ಷಣಗಳಿರುವ ವಿದೇಶಿ ಪ್ರಯಾಣಿಕ’ ಎಂದು ನಮೂದಿಸಲಾಗುತ್ತಿದೆ.

• ಅಂತಿಮ ವರದಿ ಬರುವುದೂ ವಿಳಂಬವಾಗುತ್ತಿದೆ. ಎರಡರಿಂದ ನಾಲ್ಕುದಿನಗಳ ಕಾಲ ವರದಿಗೆ ಕಾಯಬೇಕಾದ ಅನಿವಾರ್ಯತೆ ಹೋಟೆಲ್ ಕ್ವಾರಂಟೈನ್ ನಲ್ಲಿರುವವರಿಗಿದೆ.

• ಮೊದಲಿಗೆ ನೆಗೆಟಿವ್ ವರದಿ ನೀಡಿ, ಹೋಂ ಕ್ವಾರಂಟೈನ್ ಗೆ ಕಳುಹಿಸಲಾಗಿರುವ ಕೆಲವು ಮಂದಿಗೆ ಎರಡು ದಿನಗಳ ಬಳಿಕ ನಿಮ್ಮ ವರದಿ ಪಾಸಿಟಿವ್ ಬಂದಿದೆ, ಆಂಬುಲೆನ್ಸ್ ಕಳುಹಿಸುತ್ತೇವೆ, ಆಸ್ಪತ್ರೆಗೆ ಹೊರಡಲು ರೆಡಿಯಾಗಿ ಎಂಬ ಕರೆಗಳು ಬರುತ್ತಿರುವ ಘಟನೆಗಳೂ ನಡೆಯುತ್ತಿವೆ. ಅವರನ್ನು ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ! ಎಂದು ದೂರಿದ್ದಾರೆ.

ಸಿಬ್ಬಂದಿಗಳ ಕೊರತೆಯ ಕಾರಣದಿಂದಾಗಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಗುತ್ತಿರುವ ಗಂಟಲ ದ್ರವ ಪರೀಕ್ಷೆಗಳಲ್ಲಿ ಸಣ್ಣಪುಟ್ಟ ಲೋಪಗಳು ನಡೆಯುತ್ತಿರುವುದು ನಿಜ. ಆದರೆ ಖಾಸಗಿ ಆಸ್ಪತ್ರೆಗಳ ಈ ನಡೆ ಸಹಿಸಲಸಾಧ್ಯ ಎಂದು ಉಮರ್ ಯು.ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com