janadhvani

Kannada Online News Paper

“ವೈದ್ಯೋ ನಾರಾಯಣೋ ಹರಿ” ಮಾತಿಗೆ ಅಪಚಾರವಾದರೇ ಪುತ್ತೂರಿನ ಡಾಕ್ಟರ್..?!

#ಸ್ನೇಹಜೀವಿ ಅಡ್ಕ

ವೈದ್ಯನೆನಿಸಿಕೊಂಡವನಿಗೆ ಈ ಸಮಾಜ ನೀಡುವ ಗೌರವ ಅಪಾರವಾದದ್ದು. ಸಮಾಜದಲ್ಲಿ ಮೇಲು – ಕೀಳು, ಬಡವ – ಬಲ್ಲಿದ, ಸ್ತ್ರೀ – ಪುರುಷ, ಒಳ್ಳೆಯವ – ಕೆಟ್ಟವ ಎನ್ನುವ ಯಾವುದೇ ಬೇಧ ಭಾವವಿಲ್ಲದೆ ಸರ್ವರನ್ನೂ ಸಮಾನವಾಗಿ ಸಲಹುವವನಾಗಿರುತ್ತಾನೆ ಒಬ್ಬ ವೈದ್ಯ.

ಆದರೆ ಬದಲಾದ ಕಾಲಘಟ್ಟದಲ್ಲಿ ಎಲ್ಲವೂ ಕೂಡ ಇಲ್ಲಿ ಮರುವ್ಯಾಖ್ಯಾನಗೊಳ್ಳುತ್ತಿದೆ. ಸಾಮಾಜಿಕ ವ್ಯವಸ್ಥೆಯಲ್ಲಿನ ಅಸಮತೋಲನ, ಧರ್ಮದ ಹೆಸರಿನಲ್ಲಿ ಮೇಲೈಸಿದ ಅಧರ್ಮಿಯತೆ, ಸೇವಾಧರ್ಮವೂ ವ್ಯಾವಾಹಾರಿಕ ಮನೋಭಾವನೆಯಿಂದ ಕೂಡಿರುವಾಗ ವೈದ್ಯೋ ನಾರಾಯಣೋ ಹರಿ ಅನ್ನುವ ಮಾತೂ ಕೂಡ ಇಲ್ಲಿ ಮರುವ್ಯಾಖ್ಯಾನಕ್ಕೊಳಪಡುತ್ತಿದೆಯಾ ಅನ್ನುವ ಸಂಶಯ ಬಲವಾಗಿ ಕಾಡುತ್ತಿದೆ.

ಕೊರೋನ ಅನ್ನುವ ಕಣ್ಣಿಗೆ ಕಾಣದ ವೈರಸೊಂದು ಜಗತ್ತಿನಾದ್ಯಂತ ಮನುಷ್ಯ ಜೀವಗಳನ್ನು ಅತಂತ್ರವಾಗಿರುವಂತೆ ಮಾಡಿ, ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಈ ವೈರಸ್ ಗೆ ಬಲಿಯರ್ಪಿಸಿಯಾಗಿದೆ. ಜಗತ್ತಿನ 140 ಕ್ಕೂ ಅಧಿಕ ದೇಶಗಳಲ್ಲಿ ವ್ಯಾಪಿಸಿದ ಈ ಮಹಾಪಿಡುಗು ಭಾರತದಲ್ಲೂ ನೂರೈವತ್ತಕ್ಕೂ ಅಧಿಕ ಮಂದಿಗೆ ವ್ಯಾಪಿಸಿಯಾಗಿದೆ ಐದು ಮಂದಿ ಜೀವವನ್ನೂ ಕಳೆದುಕೊಂಡಿದ್ದಾರೆ.

ರೋಗಿಗಳ ಪಾಲಿಗೆ ಆಸರೆಯಾಗಬೇಕಿದ್ದ ಪುತ್ತೂರಿನ ಪ್ರತಿಷ್ಠಿತ ಆಸ್ಪತ್ರೆಯೊಂದರ ವೈದ್ಯರು ” ಪ್ರೀತಿಯ ಕರೋನಾ, ಹೇಗಿದ್ದರೂ ಭಾರತಕ್ಕೆ ಬಂದು ಬಿಟ್ಟಿದ್ದೀಯಾ, ಮೋದಿ ವಿರೋಧಿಗಳನ್ನು ಒಂದು ಸಲ ಭೇಟಿ ಮಾಡಿ ಹೋಗು” ಅನ್ನುವ ಬರಹವೊಂದನ್ನು ಶೇರ್ ಮಾಡಿ ವೈದ್ಯ ಬಳಗಕ್ಕೆ ಅಪಚಾರವನ್ನೆಸಗಿದ್ದಾರೆ.
ತನಗೆ ವಕ್ಕರಿಸಿದ ರಾಜಕೀಯ ಹುಚ್ಚಾಟದಿಂದ ಇಂತಹ ಕೀಳುಮಟ್ಟದ ಹೇಳಿಕೆಯನ್ನು ಶೇರ್ ಮಾಡುವಾಗ ಕೊರೋನ ಒಂದು ಪಕ್ಷದ ಜನರನ್ನೋ, ಧರ್ಮದ ಜನರನ್ನೋ ನೋಡಿ ಬಂದದ್ದಲ್ಲ, ವೈದ್ಯರೂ ಹೊರತಲ್ಲ ಅನ್ನುವುದು ನೆನಪಿರಲಿ.

ಕೊನೆಯ ಪಕ್ಷ “ವೈದ್ಯೋ ನಾರಾಯಣೋ ಹರಿ” ಅನ್ನುವ ಮಾತಿಗಾದರೂ ಈ ಮಾತಿನ ಅರ್ಥವನ್ನು ಅರ್ಥೈಸಿಕೊಂಡು ಮನುಷ್ಯರಾಗಿ ಬಾಳುವಂತಾಗಿ.
ಎಲ್ಲಾ ರೀತಿಯ ರೋಗಗಳಿಂದ ಸರ್ವಶಕ್ತನು ನಮ್ಮೆಲ್ಲರನ್ನೂ ಕಾಪಾಡಲಿ.

error: Content is protected !! Not allowed copy content from janadhvani.com