janadhvani

Kannada Online News Paper

ದೆಹಲಿ ಹಿಂಸಾಚಾರ: ದೇಗುಲವನ್ನು ರಕ್ಷಿಸಲು ಹಿಂದೂಗಳೊಂದಿಗೆ ಕೈಜೋಡಿಸಿದ ಮುಸ್ಲಿಮರು

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಹಿಂಸಾಚಾರ ಭುಗಿಲೆದ್ದ ವೇಳೆ ದುಷ್ಕರ್ಮಿಗಳ ದಾಳಿಯಿಂದ ಶಿವ ದೇಗುಲವೊಂದನ್ನು ರಕ್ಷಿಸಲು ಹಿಂದೂ ಸಹೋದರರೊಂದಿಗೆ ಮುಸ್ಲಿಮರೂ ಕೈಜೋಡಿಸಿದ್ದಾಗಿ ವರದಿಯಾಗಿದೆ. ಇದೇ ಪ್ರದೇಶದಲ್ಲಿ ಮಸೀದಿಯೊಂದಕ್ಕೆ ಗಲಭೆಕೋರರು ಬೆಂಕಿ ಹಚ್ಚಿದ್ದರು.

ಫೆಬ್ರುವರಿ 25ರಂದು ರಾತ್ರಿ ಇಂದಿರಾ ವಿಹಾರ್ ಪ್ರದೇಶದಲ್ಲಿ ದುಷ್ಕರ್ಮಿಗಳ ಗುಂಪೊಂದು ಶಿವ ದೇಗುಲದ ಮೇಲೆ ದಾಳಿ ನಡೆಸಿ ಧ್ವಂಸ ಮಾಡಲು ಮುಂದಾಗಿತ್ತು. ಧಾರ್ಮಿಕ ಕೇಂದ್ರಗಳು ಮತ್ತು ಮನೆಗಳ ಮೇಲೆ ದಾಳಿ ನಡೆಸುತ್ತಿತ್ತು. ಆ ಸಂದರ್ಭದಲ್ಲಿ, ಶಕೀಲ್ ಅಹ್ಮದ್ ಎಂಬ ವ್ಯಕ್ತಿ ಮತ್ತು ಇತರ ನಿವಾಸಿಗಳು ದೇಗುಲವನ್ನು ರಕ್ಷಿಸಲು ಮುಂದಾಗಿಸಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಗುಂಪೊಂದು ದಾಳಿ ನಡೆಸಲು ಬಂದಾಗ ನಾವು ಶಿವ ದೇಗುಲ ಮತ್ತು ಮಸೀದಿಯನ್ನು ರಕ್ಷಿಸಿದೆವು. ನಿರ್ದಿಷ್ಟವಾಗಿ ಹೇಳಬೇಕೆಂದರೆ, ನಾವು ದೇಗುಲವನ್ನು ರಕ್ಷಿಸಿದೆವು. ಇಲ್ಲವಾದಲ್ಲಿ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ದೇವಾಲಯ ಧ್ವಂಸ ಮಾಡಲಾಗಿದೆ ಎಂಬ ಆರೋಪ ಕೇಳಬೇಕಾಗುತ್ತಿತ್ತು. ದಾಳಿಕೋರರ ಗುಂಪನ್ನು ದೇಗುಲದ ಬಳಿ ಬರಲೂ ನಾವು ಬಿಡಲಿಲ್ಲ. ಅವರೆಲ್ಲ ಹೊರಗಿನಿಂದ ಬಂದವರು’ ಎಂಬ ಅಹ್ಮದ್ ಹೇಳಿಕೆಯನ್ನೂ ಎಎನ್‌ಐ ಉಲ್ಲೇಖಿಸಿದೆ.

“ಗಲಭೆಕೋರರ ಗುಂಪು ಈ ಕಡೆ ಬಂದರೆ ನಿಭಾಯಿಸಲು ಇಲ್ಲಿದ್ದವರೇ ಸಾಕು. ನಮ್ಮ ಪ್ರದೇಶದಲ್ಲಿ ಭ್ರಾತೃತ್ವ ಹಾಗೂ ಸೌಹಾರ್ದ ಇದೆ. ಅದನ್ನು ನಾಶ ಮಾಡಲು ನಾವು ಎಂದೂ ಅವಕಾಶ ನೀಡಲಾರೆವು” ಎಂದು ದಿಲ್ಲಿ ವಿಶ್ವವಿದ್ಯಾನಿಲಯದ ದೇಶಬಂಧು ಕಾಲೇಜಿನ ಬಿ.ಎ. ವಿದ್ಯಾರ್ಥಿ ಮುಹಮ್ಮದ್ ಹಸೀನ್ (24) ಹೇಳುತ್ತಾರೆ.

ಶಿವದೇವಾಲಯವನ್ನು ದಾಳಿಕೋರರಿಂದ ರಕ್ಷಿಸಲು 24 ಗಂಟೆಗಳ ಕಾಲ ಕಣ್ಣಿರಿಸಿದ ಹಿಂದೂ-ಮುಸ್ಲಿಮರ ತಂಡದಲ್ಲಿ ಚಹಾದ ಅಂಗಡಿಗಳಿಗೆ ಸ್ನಾಕ್ಸ್‌ ಪೂರೈಸುವ ಕಮರುದ್ದೀನ್ (52) ಕೂಡ ಸೇರಿದ್ದಾರೆ. ‘‘ನಾವು ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ. ಇಲ್ಲಿ ಅಂತಹ ಗಲಭೆ ಎಂದಿಗೂ ನಡೆಯದು ಎಂಬುದು ನಮ್ಮ ನಿರೀಕ್ಷೆ. ಮಾನವತೆ ಕಾಪಾಡುವುದು ಇಂದು ಅತಿ ಮುಖ್ಯ’’ ಎಂದು ಅವರು ಹೇಳಿದ್ದಾರೆ.

“ಸಮೀಪದ ಪ್ರದೇಶಗಳಲ್ಲಿ ಹಿಂಸಾಚಾರ ಆರಂಭವಾದರೂ ನಮ್ಮ ಬೀದಿಯಲ್ಲಿ ಯಾವುದೇ ಗಲಭೆ ನಡೆದಿಲ್ಲ. ಎರಡೂ ಸಮುದಾಯಗಳು ಸಣ್ಣ ಸಣ್ಣ ತಂಡವಾಗಿ ಕೈಯಲ್ಲಿ ಲಾಠಿ ಹಿಡಿದುಕೊಂಡೆವು. ಗಲಭೆ ಉಂಟು ಮಾಡಲು ಪ್ರಯತ್ನಿಸಿದವರನ್ನು ಮಟ್ಟ ಹಾಕಲು ನಿರ್ಧರಿಸಿದೆವು” ಎಂದು ಹಸನ್ ಎಂಬವರು ಹೇಳಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನಾಕಾರರು ಮತ್ತು ಕಾಯ್ದೆ ಬೆಂಬಲಿಗರ ಮಧ್ಯೆ ಆರಂಭವಾದ ಗಲಭೆ ಬಳಿಕ ತೀವ್ರಗೊಂಡಿತ್ತು. ಈವರೆಗೆ ಹಿಂಸಾಚಾರದಲ್ಲಿ 42 ಮಂದಿ ಮೃತಪಟ್ಟಿದ್ದಾರೆ. 200ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಹತ್ತಾರು ಮನೆಗಳು, ಅಂಗಡಿಗಳಿಗೆ ಹಾನಿಯಾಗಿದೆ.

error: Content is protected !! Not allowed copy content from janadhvani.com