janadhvani

Kannada Online News Paper

ಟ್ರಂಪ್ ಭಾರತ ಭೇಟಿ: ಶಿವಸೇನೆ ಗರಂ, ಔತಣಕೂಟಕ್ಕೆ ಕಾಂಗ್ರೆಸ್ ಗೈರು

ಹೊಸ ದಿಲ್ಲಿ: ಟ್ರಂಪ್‌ ಅವರ 36 ತಾಸುಗಳ ಭಾರತ ಭೇಟಿಯಿಂದ ಏನೂ ಪ್ರಯೋಜನ ಇಲ್ಲ ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಸಂಪಾದಕೀಯ ಲೇಖನ ಬರೆಯಲಾಗಿದೆ.

ಭಾರತದಲ್ಲಿ ಬಡವರ ಬದಲು ಹಸನಾಗುವುದಿಲ್ಲ. ಮಧ್ಯಮ ವರ್ಗದ ಏಳ್ಗೆ ಸಾಧ್ಯವಾಗುವುದಿಲ್ಲ. ಹೀಗಿರುವಾಗ ಟ್ರಂಪ್‌ ಭೇಟಿಯು ಜನರಲ್ಲಿ ಉತ್ಸಹ ಮೂಡಿಸುವ ಮಾತು ದೂರ ಉಳಿದಿದೆ. ಅಂತಹ ಕುತೂಹಲ ಏನಾದರೂ ಇದ್ದರೆ ಅದು ಅಹಮದಾಬಾದ್‌ಗೆ ಸೀಮಿತಗೊಂಡಿದೆ ಎಂದು ಸಾಮ್ನಾ ಪತ್ರಿಕೆಯ ಸಂಪಾದಕೀಯಲ್ಲಿ ಶಿವಸೇನೆ ಹರಿಹಾಯ್ದಿದೆ.

ಔತಣಕೂಟಕ್ಕೆ ಕಾಂಗ್ರೆಸ್ ಗೈರು:

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಮಂಗಳವಾರ ನೀಡಲಾಗುವ ಸತ್ಕಾರ ಕೂಟದಲ್ಲಿ ಪಾಲ್ಗೊಳ್ಳದಿರಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್‌ ಸಿಂಗ್‌, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಮತ್ತು ರಾಜ್ಯಸಭೆ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಅವರಿಗೆ ಶನಿವಾರ ಅಧಿಕೃತ ಆಹ್ವಾನ ನೀಡಲಾಗಿತ್ತು.

ಮೊದಲು ಆಹ್ವಾನ ಒಪ್ಪಿದ್ದ ನಾಯಕರು ಸೋಮವಾರ ದಿಢೀರ್‌ ಬೆಳವಣಿಗೆಯಲ್ಲಿ ಉಲ್ಟಾ ಹೊಡೆದಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡದಿರುವುದೇ ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ. ‘ಟ್ರಂಪ್‌ ಇಲ್ಲಿಗೆ ಬಂದಿದ್ದಾರೆ. ಅವರಿಗಾಗಿ ಸರಕಾರ ಭರ್ಜರಿ ಔತಣಕೂಟ ಏರ್ಪಡಿಸಿದೆ. ಇದಕ್ಕೆ ಪ್ರತಿಪಕ್ಷಗಳನ್ನು ಕಡೆಗಣಿಸಲಾಗಿದೆ.

ಟ್ರಂಪ್‌ ಜತೆಗಿನ ಸತ್ಕಾರ ಕೂಟಕ್ಕೆ ಸೋನಿಯಾ ಗಾಂಧಿ ಅವರಿಗೆ ಆಹ್ವಾನ ನೀಡಿಲ್ಲ ಯಾಕೆ? ಅಮೆರಿಕದಲ್ಲಿ ‘ಹೌಡಿ ಮೋದಿ’ ಕಾರ್ಯಕ್ರಮಕ್ಕೆ ರಿಪಬ್ಲಿಕನ್‌ ಮತ್ತು ಡೆಮಾಕ್ರಟಿಕ್ಸ್‌ ಎರಡೂ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಇಲ್ಲಿ ಮೋದಿ ಮಾತ್ರ ಟ್ರಂಪ್‌ ಜತೆಗೆ ವೇದಿಕೆ ಮೇಲಿದ್ದರು. ಇದು ಯಾವ ರೀತಿಯ ಪ್ರಜಾಪ್ರಭುತ್ವ?’ ಎಂದು ಅಧೀರ್‌ ರಂಜನ್‌ ಪ್ರಶ್ನಿಸಿದ್ದಾರೆ.

ಮುಫ್ತಿ ಪುತ್ರಿಯಿಂದಲೂ ಸಿಟ್ಟು..!
ದಿಲ್ಲಿ ಹೊತ್ತು ಉರಿಯುತ್ತಿದೆ. 80 ಲಕ್ಷ ಕಾಶ್ಮೀರಿಗಳು ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಆದರೆ ಕೇಂದ್ರ ಸರಕಾರ ಮಾತ್ರ ಅಮೆರಿಕ ಅಧ್ಯಕ್ಷ ಸ್ವಾಗತದಲ್ಲಿ ಬ್ಯುಸಿಯಾಗಿದೆ. ಗಾಂಧಿಯನ್ನು ಸ್ಮರಿಸಲಾಗಿದೆ, ಆದರೆ ಅವರ ಮೌಲ್ಯಗಳನ್ನು ಮರೆಯಲಾಗಿದೆ ಎಂದು ಮೆಹಬೂಬಾ ಮುಫ್ತಿ ಮಗಳು ಇಲ್ತಿಜಾ ಮುಫ್ತಿ ಹರಿಹಾಯ್ದಿದ್ದಾರೆ.

error: Content is protected !! Not allowed copy content from janadhvani.com