janadhvani

Kannada Online News Paper

ಗಾಂಧೀಜಿ, ನೆಹರು ಜೊತೆಗೆ ಅನಂತ ಕುಮಾರ್ ಹೆಗಡೆ ಕೂಡ ಇದ್ದರು: ಸಿದ್ದರಾಮಯ್ಯ ವ್ಯಂಗ್ಯ

ಹುಬ್ಬಳ್ಳಿ (ಫೆ. 3): ಗಾಂಧೀಜಿ, ನೆಹರು, ವಲ್ಲಭಬಾಯಿ ಪಟೇಲ್ ಜೊತೆಗೆ ಅನಂತ ಕುಮಾರ್ ಹೆಗಡೆ ಕೂಡ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದರು. ಅದರಿಂದಲೇ ಅವರು ಅಷ್ಟು ಕರಾರುವಕ್ಕಾಗಿ ಹೇಳಿಕೆ ನೀಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಇಂದು ಮತ್ತೆ ಹುಬ್ಬಳ್ಳಿಯಲ್ಲಿ ವ್ಯಂಗ್ಯವಾಡಿದ್ದಾರೆ. ಅಹಿಂಸೆಯಿಂದ ಸ್ವಾತಂತ್ರ್ಯ ಬಂದಿಲ್ಲ. ಸ್ವಾತಂತ್ರ್ಯ ಹೋರಾಟಗಾರರು ಎಂದು ಹೇಳಿಕೊಳ್ಳುತ್ತಿರುವವರು ಮತ್ತು ಪ್ರಗತಿಪರರು ಎಡಬಿಡಂಗಿಗಳು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ .

ಸ್ವಾತಂತ್ರ್ಯಕ್ಕೋಸ್ಕರ ಹೋರಾಟ ನಡೆಸಿರುವ ಅನಂತ್ ಕುಮಾರ್ ಹೆಗಡೆ ಹೇಳಿಕೆಯಲ್ಲಿ ಸತ್ಯಾಂಶವೂ ಇರಬಹುದು ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ನಂತರ ಅನಂತ್ ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಅನಂತ್ ಕುಮಾರ್ ಹೆಗಡೆ ನಾಚಿಕೆ, ಮಾನ- ಮರ್ಯಾದೆ ಇಲ್ಲದವರು. ಕೇಂದ್ರ ಸರ್ಕಾರವೇ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳಿದರೂ ಕೇಂದ್ರದ ಮಂತ್ರಿಯಾಗಿದ್ದರು. ಸ್ವತಂತ್ರ ಹೋರಾಟಗಾರರ ಬಗ್ಗೆ ಲಘುವಾಗಿ ಮಾತಾನಾಡೋದು ಸರಿಯಲ್ಲ. ಸ್ವಾತಂತ್ರ್ಯ ಹೋರಾಟಗಾರರು ಜೈಲಲ್ಲಿದ್ದು, ಪ್ರಾಣ ಕಳೆದುಕೊಂಡು, ಕುಟುಂಬ ತ್ಯಜಿಸಿ ನಮಗೆ ಸ್ವಾತಂತ್ರ್ಯ ಕೊಡಿಸಿದ್ದಾರೆ. ಅವರ ಬಗ್ಗೆ ಗೌರವದಿಂದ ಮಾತನಾಡಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರರು ಇಲ್ಲದಿದ್ದರೆ, ಸಂವಿಧಾನ ಇಲ್ಲದಿದ್ದರೆ ಅನಂತಕುಮಾರ್ ಹೆಗಡೆ ಸಂಸದ ಆಗುತ್ತಿದ್ದರಾ? ಸಂವಿಧಾನ ಬಂದ ಮೇಲೆಯೇ ಎಲ್ಲರಿಗೂ ಮತ ಹಾಕುವ ಹಕ್ಕು ಸಿಕ್ಕಿದ್ದು. ಸಂವಿಧಾನ ಓದದೆ ಇವರೆಲ್ಲ ಸಂಸದ ಯಾಕೆ ಆಗ್ತಾರೋ ಗೊತ್ತಾಗುತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಭಾನುವಾರ ಮೈಸೂರಿನಲ್ಲೂ ಅನಂತ್ ಕುಮಾರ್ ಹೆಗಡೆ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿದ್ದರಾಮಯ್ಯ, ಗೋಡ್ಸೆ ಹಾಗೂ ಸಾವರ್ಕರ್ ಪೂಜೆ ಮಾಡುವವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಸ್ವಾತಂತ್ರ್ಯ ಹೋರಾಟದ ಬಗ್ಗೆ ಇವನಿಗೇನು ಗೊತ್ತು? ಸ್ವಾತಂತ್ರ್ಯ ಹೋರಾಟದಲ್ಲಿ ಬಲಿಯಾದವರ ಹೆಸರನ್ನು ಅನಂತ್ ಕುಮಾರ್ ಹೆಗಡೆ ಹೇಳಲಿ ನೋಡೋಣ. ಗಾಂಧೀಜಿ ಎಷ್ಟು ವರ್ಷಗಳ ಕಾಲ ಜೈಲಿನಲ್ಲಿದ್ದರು ಎಂಬುದು ಹೆಗಡೆಗೆ ಗೊತ್ತಾ? ನಾನು 1947ರ ಆಗಸ್ಟ್​ 3ರಂದು ಸ್ವಾತಂತ್ರ್ಯಪೂರ್ವದಲ್ಲಿ ಹುಟ್ಟಿದ್ದೇನೆ ಎಂದು ಹೇಳಿದ್ದರು.

error: Content is protected !! Not allowed copy content from janadhvani.com