janadhvani

Kannada Online News Paper

ಕೇರಳ ಸದನದಲ್ಲಿ ರಾಜ್ಯಪಾಲ ಆರಿಫ್ ಖಾನ್ ವಿರುದ್ಧ ‘ಗೋ ಬ್ಯಾಕ್’ ಘೋಷಣೆ

ತಿರುವನಂತಪುರ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರನ್ನು ಬುಧವಾರ ಬೆಳಿಗ್ಗೆ ವಿಧಾನಸಭೆ ಪ್ರವೇಶಿ ಭಾಷಣ ಮಾಡಲು ತೆರಳುವ ವೇಳೆ ಪ್ರತಿಪಕ್ಷ ಯುಡಿಎಫ್ (ಕಾಂಗ್ರೆಸ್) ಶಾಸಕರು ತಡೆದಿದ್ದಾರೆ. ರಾಜ್ಯಪಾಲರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ ಹೇಳಿಕೆ ನೀಡಿದ್ದಕ್ಕೆ ಯುಡಿಎಫ್ ಶಾಸಕರು ಈ ರೀತಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಬೆಳಿಗ್ಗೆ ಸುಮಾರು 9 ಗಂಟೆಗೆ ರಾಜ್ಯಪಾಲರು ವಿಧಾನಸಭೆಗೆ ಬಂದಾಗ ಯುಡಿಎಫ್ ಶಾಸಕರು ‘ಗೋ ಬ್ಯಾಕ್’, ‘ನೊ ಟು ಸಿಎಎ’, ಹಾಗೂ ‘ಆರ್‌ಎಸ್‌ಎಸ್ ಏಜೆಂಟ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ. ರಾಜ್ಯಪಾಲರು ಭಾಷಣ ಮಾಡಲು ತೆರಳದಂತೆ ತಡೆದಿದ್ದಾರೆ. ಸ್ಪೀಕರ್ ಪೀಠದ ಎದುರಿಗೆ ಬಂದ ಶಾಸಕರು ಸಿಎಎ ವಿರುದ್ಧ ಫಲಕಗಳನ್ನೂ ಪ್ರದರ್ಶಿಸಿದ್ದಾರೆ. ಈ ವೇಳೆ, ರಾಜ್ಯಪಾಲರಿಗೆ ಅಡ್ಡಿಪಡಿಸದಂತೆ ಶಾಸಕರಲ್ಲಿ ಸ್ಪೀಕರ್ ಶ್ರೀರಾಮಕೃಷ್ಣನ್ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಬಳಿಕ ಮಾರ್ಷಲ್‌ಗಳು ಬಂದು ರಾಜ್ಯಪಾಲರಿಗೆ ದಾರಿ ಮಾಡಿಕೊಟ್ಟಿದ್ದಾರೆ.

ನಂತರ ಸರ್ಕಾರದ ನೀತಿಗಳ ಬಗ್ಗೆ ಭಾಷಣ ಮಾಡಿದ ರಾಜ್ಯಪಾಲರು ಸಿಎಎ ವಿರುದ್ಧ ರಾಜ್ಯ ಸರ್ಕಾರ ಕೈಗೊಂಡ ನಿರ್ಣಯದ ಅಂಶಗಳನ್ನೂ ಉಲ್ಲೇಖಿಸಿದ್ದಾರೆ. ಅದಕ್ಕೆ ತಮ್ಮ ಅಸಮ್ಮತಿಯನ್ನೂ ಸೂಚಿಸಿದ್ದಾರೆ. ಭಾಷಣದ ವೇಳೆಯೂ ಘೋಷಣೆಗಳನ್ನು ಕೂಗಿ ಅಡ್ಡಿಪಡಿಸಲು ಯತ್ನಿಸಿದ ಶಾಸಕರು, ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತ್ತಲ ಕರೆಯ ಮೇರೆಗೆ ಕಲಾಪ ಬಹಿಷ್ಕರಿಸಿದ್ದಾರೆ.

ಕೇರಳ ವಿಧಾನಸಭೆಯಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ಮಾಡುತ್ತಿರುವುದು ಇದೇ ಮೊದಲು. ಇತ್ತೀಚೆಗಷ್ಟೇ ಕೇರಳದ ಶಾಸನ ಸಭೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ನಿರ್ಣಯ ಹೊರಡಿಸಲಾಗಿತ್ತು. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ನಿರ್ಣಯದ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದ ರಾಜ್ಯಪಾಲರನ್ನು ವಾಪಾಸ್ ಕರೆಸಿಕೊಳ್ಳಬೇಕೆಂದು ಕೇರಳದ ಶಾಸಕರು ರಾಷ್ಟ್ರಪತಿಗಳಿಗೆ ಮನವಿ ಮಾಡಿದ್ದರು.

ವಿಧಾನಸಭೆಯ ನಿರ್ಣಯದ ವಿರುದ್ಧ ರಾಜ್ಯಪಾಲರು ಹೇಳಿಕೆ ನೀಡಿದ್ದರೂ ಸಿಎಂ ಪಿಣರಾಯಿ ವಿಜಯನ್ ಇದುವರೆಗೂ ರಾಜ್ಯಪಾಲರ ವಿರುದ್ಧ ಬಹಿರಂಗವಾಗಿ ಯಾವುದೇ ಹೇಳಿಕೆ ನೀಡಿಲ್ಲ, ಸಿಎಂ ಕೇಂದ್ರ ಸರ್ಕಾರದ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂದು ವಿಪಕ್ಷದ ಶಾಸಕರು ಆರೋಪಿಸಿದ್ದಾರೆ.

error: Content is protected !! Not allowed copy content from janadhvani.com