janadhvani

Kannada Online News Paper

ಮಂಗಳೂರು ಗೋಲಿಬಾರ್: ಮಹಿಳೆ, ಮಕ್ಕಳಿಗೆ ಪೊಲೀಸ್ ನೋಟಿಸ್‌

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರೋಧಿಸಿ ಡಿಸೆಂಬರ್‌ 19ರಂದು ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿ, ಗಲಭೆ ನಡೆಸಿದ ಆರೋಪದ ಮೇಲೆ ಕೇರಳದ ಹಲವು ಮಹಿಳೆಯರು, ಮಕ್ಕಳು, ಸರ್ಕಾರಿ ನೌಕರರಿಗೂ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

ಡಿ.19ರಂದು ನಡೆದ ಗಲಭೆಗೆ ಸಂಬಂಧಿಸಿದಂತೆ ಮಂಗಳೂರು ಉತ್ತರ (ಬಂದರು) ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಆರೋಪಿಗಳೆಂದು ಗುರುತಿಸಿ 650ಕ್ಕೂ ಹೆಚ್ಚು ಮಂದಿಗೆ ಈವರೆಗೆ ನೋಟಿಸ್‌ ನೀಡಲಾಗಿದೆ. ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಸಿಎಎ ವಿರೋಧಿಸಿ ಆ ದಿನ ಸಮಸ್ತ ಕೇರಳ ಸುನ್ನಿ ಸ್ಟೂಡೆಂಟ್‌ ಫೆಡರೇಷನ್‌ (ಎಸ್‌ಕೆಎಸ್‌ಎಸ್‌ಎಫ್‌) ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿತ್ತು. ಪೊಲೀಸರು ಅನುಮತಿ ನಿರಾಕರಿಸಿ, ಸೆಕ್ಷನ್‌ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.ಅದರನ್ವಯ ಪ್ರತಿಭಟನೆ ರದ್ದು ಪಡಿಸಲಾಗಿತ್ತು .ಆದರೂ, ಮಂಗಳೂರು ನಗರದಲ್ಲಿ ಬಸ್ ಕಾಯುತ್ತಿದ್ದವರ ಮೇಲೆ, ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಮೇಲೆ, ಶಾಲಾ ಮಕ್ಕಳ ಮೇಲೆ ಪೋಲೀಸರು ಲಾಠಿ ಪ್ರಹಾರ ನಡೆಸಿದ್ದರು. ಪೊಲೀಸರ ದೌರ್ಜನ್ಯದಿಂದ ಆಕ್ರೋಶಿತ ಗೊಂಡ ಯುವಕರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆದು, ಗೋಲಿಬಾರ್‌ ನಡೆದಿತ್ತು.

‘ಟವರ್‌ ಡಂಪ್‌’ ನೆರವು: ‘ಟವರ್‌ ಡಂಪ್‌’ ತಂತ್ರಜ್ಞಾನ ಬಳಸಿ ಸ್ಟೇಟ್‌ ಬ್ಯಾಂಕ್‌, ಬಂದರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಎಲ್ಲ ಮೊಬೈಲ್‌ ಟವರ್‌ಗಳಿಂದ ಆ ದಿನ ಸಂಪರ್ಕದಲ್ಲಿದ್ದವರ ವಿವರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಡಿ.19ರಂದು ಈ ಪ್ರದೇಶಗಳಿಗೆ ಬಂದು ಹೋಗಿದ್ದ ಕೇರಳದ ಕಾಸರಗೋಡು ಜಿಲ್ಲೆಯ ಹೆಚ್ಚಿನವರಿಗೆ ನೋಟಿಸ್‌ ಜಾರಿ ಮಾಡಲಾಗಿದೆ.

‘ಡಿ.19ರಂದು ಅಕ್ರಮ ಕೂಟದಲ್ಲಿ ಭಾಗಿಯಾಗಿ, ಗಲಭೆ ನಡೆಸಿರುವುದರಲ್ಲಿ ನಿಮ್ಮ ಪಾತ್ರ ಇರುವ ಬಗ್ಗೆ ನಮ್ಮ ಬಳಿ ಖಚಿತವಾದ ಮಾಹಿತಿ ಇದೆ. ಈ ಸಂಬಂಧ ಈಗ ತನಿಖೆ ನಡೆಯುತ್ತಿದೆ. ಈ ಸಂಬಂಧ ತನಿಖಾಧಿಕಾರಿ ಎದುರು ಹಾಜರಾಗಿ ವಿಚಾರಣೆ ಎದುರಿಸಿ. ವಿಚಾರಣೆಗೆ ಗೈರಾದರೆ ಕಠಿಣ ಕ್ರಮಕ್ಕೆ ಗರಿಯಾಗಬೇಕಾಗುತ್ತದೆ’ ಎಂದು ಪೊಲೀಸರು ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.

ಕೇರಳದ 650 ಮಂದಿಗೆ ಈ ರೀತಿಯ ನೋಟಿಸ್‌ಗಳನ್ನು ಜಾರಿ ಮಾಡಲಾಗಿದೆ. ಇನ್ನೂ 2,000 ಮಂದಿಗೆ ನೋಟಿಸ್‌ ಜಾರಿಗೊಳಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಮಹಿಳೆಯರು, ವಿದ್ಯಾರ್ಥಿಗಳು, ಚಿಕಿತ್ಸೆಗಾಗಿ ನಗರಕ್ಕೆ ಬಂದಿದ್ದ ರೋಗಿಗಳು, ನಿತ್ಯವೂ ನಗರಕ್ಕೆ ದುಡಿಯಲು ಬರುತ್ತಿದ್ದ ಹಲವರಿಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಎಲ್ಲ ಧರ್ಮೀಯರಿಗೂ ನೋಟಿಸ್‌: ‘ಕಾಸರಗೋಡು ಜಿಲ್ಲೆಯ ಛತ್ತಿಪಡಪ್ಪು ನಿವಾಸಿಯಾಗಿರುವ 54 ವರ್ಷ ವಯಸ್ಸಿನ ಶಾಫಿಯಾ ಎಂಬ ಬೀಡಿ ಕಾರ್ಮಿಕ ಮಹಿಳೆಗೂ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದರು. ಅವರೊಂದಿಗೆ ಬಂದರು ಪೊಲೀಸ್‌ ಠಾಣೆಗೆ ಹೋಗಿದ್ದೆ. ಅಲ್ಲಿ ಬ್ಯಾಂಕ್‌ ನೌಕರರು, ರೋಗಿಗಳು, ವಿದ್ಯಾರ್ಥಿಗಳು, ಮಹಿಳೆಯರು ಈ ರೀತಿಯ ನೋಟಿಸ್‌ ಹಿಡಿದು ವಿಚಾರಣೆ ಎದುರಿಸಲು ಕಾದು ನಿಂತಿದ್ದ ದೃಶ್ಯ ಕಂಡುಬಂತು’ ಎಂದು ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ.

‘ಕೇರಳದ ಜನರಿಂದಲೇ ಗಲಭೆ ನಡೆದಿದೆ ಎಂಬ ಆರೋಪವನ್ನು ನಗರದ ಪೊಲೀಸರು ಹೊರಿಸಿದ್ದಾರೆ. ಅದನ್ನು ಸಾಬೀತುಪಡಿಸಬೇಕೆಂಬ ಉದ್ದೇಶದಿಂದ ಅಲ್ಲಿನ ಜನರನ್ನು ಸಾಮೂಹಿಕವಾಗಿ ಅನುಮಾನಿಸುವ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ’ ಎಂದರು.

‘ಪಾರದರ್ಶಕ ತನಿಖೆ’: ಈ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ‘ನಮಗೆ ಲಭ್ಯವಿರುವ ಮಾಹಿತಿ ಆಧರಿಸಿ, ತನಿಖೆಗೆ ಸಹಕಾರ ನೀಡುವಂತೆ ನೋಟಿಸ್‌ ನೀಡಿದ್ದೇವೆ. ಅವರು ಅಮಾಯಕರು ಎಂದು ಸಾಬೀತುಪಡಿಸಿಕೊಳ್ಳಲು ಅವಕಾಶ ನೀಡಿದ್ದೇವೆ. ಅತ್ಯಂತ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ’ ಎಂದರು.

error: Content is protected !! Not allowed copy content from janadhvani.com