janadhvani

Kannada Online News Paper

ಯುಎಇ- ಸೌದಿ ಜಂಟಿ ವೀಸಾ: ಕನಿಷ್ಠ ಅವಧಿಗೆ ಮಾತ್ರ ಸೀಮಿತ

ರಿಯಾದ್: ಯುಎಇ ಮತ್ತು ಸೌದಿ ಅರೇಬಿಯಾ ಜಾರಿಗೆ ತರುವ ಜಂಟಿ ವೀಸಾ ಯೋಜನೆಯು ಕನಿಷ್ಠ ಅವಧಿಗೆ ಮಾತ್ರ ಸೀಮಿತ ಎಂದು ವರದಿಯಾಗಿವೆ. ವೀಸಾವನ್ನು ಅಲ್ಪಾವಧಿಯ ಭೇಟಿಗಳಿಗೆ ಮಾತ್ರ ಬಳಸಬಹುದಾಗಿದೆ ಎಂದು ಸೌದಿ ಪ್ರವಾಸೋದ್ಯಮ ಆಯೋಗ ಮತ್ತು ರಾಷ್ಟ್ರೀಯ ಪರಂಪರೆಯ ಉಪಾಧ್ಯಕ್ಷೆ ಹೈಫಾ ಬಿಂತ್ ಮುಹಮ್ಮದ್ ಅಲ್ ಸೌದ್ ರಾಜಕುಮಾರಿ ಹೇಳಿದ್ದಾರೆ.

ಜಂಟಿ ವೀಸಾಗಳನ್ನು ಕೆಲಸ, ವಿನೋದ ಯಾತ್ರೆ ಅಥವಾ ಸಂಬಂಧಿಕರ ಅಲ್ಪಾವಧಿ ಭೇಟಿಗೆ ಬಳಸಬಹುದು. ವೀಸಾ ಜಾರಿಗೊಳಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ‘ತಾಂತ್ರಿಕ ಮತ್ತು ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಅಂತಿಮ ವೀಸಾ ಪ್ರಕಟಣೆ ನೀಡಲಾಗುವುದು’ ಎಂದು ಅವರು ತಿಳಿಸಿದ್ದಾರೆ. ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆಯ ಆಯೋಗದ ಉಪಾಧ್ಯಕ್ಷರು ಈ ಬಗ್ಗೆ ವಿವರಣೆ ನೀಡಿ, ಯುಎಇ ವೀಸಾದ ಆನ್‌ಲೈನ್ ವ್ಯವಸ್ಥೆಗಳು ಮತ್ತು ಸೌದಿ ನಿಯಮಗಳನ್ನು ಸರಿಹೊಂದಿಸುವ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಹೇಳಿದರು.

ಯುಎಇ ಮತ್ತು ಸೌದಿ ಅರೇಬಿಯಾ ಜಂಟಿ ವೀಸಾಗಳು 2020 ರಲ್ಲಿ ಜಾರಿಗೆ ಬರುವ ನಿರೀಕ್ಷೆಯಿದೆ. ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಯುಎಇಗೆ ಭೇಟಿ ನೀಡಿದಾಗ ಈ ವಿಷಯದ ಬಗ್ಗೆ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದವು. ಇದು ದೇಶೀಯ ಪ್ರವಾಸೋದ್ಯಮ ಕ್ಷೇತ್ರದ ಪ್ರಗತಿಯನ್ನು ಇನ್ನಷ್ಟು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜಂಟಿ ವೀಸಾ ಸೌದಿ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆ ಆಯೋಗ ಮತ್ತು ಯುಎಇಯ ಹಣಕಾಸು ಸಚಿವಾಲಯದ ಜಂಟಿ ಉದ್ಯಮದ ಭಾಗವಾಗಿದೆ.

ಈ ಮೂಲಕ ಉಭಯ ದೇಶಗಳ ಗಡಿ ಮತ್ತು ವಿಮಾನ ನಿಲ್ದಾಣಗಳ ಪ್ರಕ್ರಿಯೆಗೆ ಅನುಕೂಲವಾಗಲಿದ್ದು, ವೀಸಾ ಮತ್ತು ವಲಸೆ ಕಾರ್ಯವಿಧಾನಗಳ ತೊಡಕುಗಳನ್ನು ತಪ್ಪಿಸಬಹುದಾಗಿದೆ. ಏಕ ವೀಸಾ ವ್ಯವಸ್ಥೆಯ ಮೂಲಕ ಎರಡೂ ದೇಶಗಳ ನಿವಾಸಿಗಳು ಸುಲಭವಾಗಿ ಪ್ರವೇಶಿಸಬಹುದು.

error: Content is protected !! Not allowed copy content from janadhvani.com