ವಿಪ್ ಜಾರಿ:ನಾಳೆಯಿಂದ ಅಧಿವೇಶನದಲ್ಲಿ ಶಾಸಕರು ಹಾಜರಿರಬೇಕು -ಅತೃಪ್ತರಿಗೆ ಅನರ್ಹತೆ ಭೀತಿ

ಬೆಂಗಳೂರು: ಶುಕ್ರವಾರದಿಂದ ವಿಧಾನಸಭೆ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳ ಶಾಸಕರಿಗೆ ವಿಪ್‌ ಜಾರಿ ಮಾಡಲಾಗಿದೆ.
ವಿಧಾನಸಭೆಯ ಮುಖ್ಯ ಸಚೇತಕ ಗಣೇಶ್‌ ಹುಕ್ಕೇರಿ ವಿಪ್‌ ಜಾರಿ ಮಾಡಿದ್ದಾರೆ.

ಜೆಡಿಎಸ್‌ ಶಾಸಕರಿಗೂ ವಿಪ್‌ ಜಾರಿ ಮಾಡಲಾಗಿದೆ. ಶುಕ್ರವಾರದಿಂದ ವಿಧಾನಸಭಾ ಅಧಿವೇಶನ ಆರಂಭವಾಗಲಿದೆ. ಸದನದಲ್ಲಿ ಹಾಜರಿರಬೇಕು ಮತ್ತು ಸರಕಾರದ ಪರವಾಗಿ ಮತ ಚಲಾಯಿಸಬೇಕು. ಒಂದು ವೇಳೆ ಸದನಕ್ಕೆ ಗೈರು ಹಾಜರಾದರೆ ಹಾಗೂ ಹಾಜರಿದ್ದು ಸರಕಾರದ ವಿರುದ್ಧ ಮತ ಚಲಾಯಿಸಿದರೆ ಅನರ್ಹಗೊಳಿಸಲಾಗುವುದು ಎಂದು ವಿಪ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.

ಸುಪ್ರೀಂ ಕೋರ್ಟ್‌ ತೀರ್ಪು ಹಿನ್ನೆಲೆಯಲ್ಲಿ ಶಾಸಕರು ಖುದ್ದಾಗಿ ಹಾಜರಾಗಿ ಸ್ಪೀಕರ್‌ಗೆ ರಾಜೀನಾಮೆ ಸಲ್ಲಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಶಾಸಕರು ವಿಧಾನಸೌಧಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿ ಮತ್ತೆ ಮುಂಬಯಿಗೆ ಪ್ರಯಾಣ ಬೆಳೆಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಅತೃಪ್ತ ಶಾಸಕರಿಗೆ ವಿಪ್‌ ಹೇಗೆ ನೀಡಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ರಾಜೀನಾಮೆ ಅಂಗೀಕಾರವಾಗದ ಕಾರಣ ಸದಸ್ಯತ್ವ ರದ್ದಾಗದು. ಆದ್ದರಿಂದ ಇವರಿಗೂ ವಿಪ್‌ ಅನ್ವಯವಾಗುತ್ತದೆ. ಹೀಗಾಗಿ ಅತೃಪ್ತ ಶಾಸಕರಿಗೆ ಅನರ್ಹತೆ ಭೀತಿ ಎದುರಾಗಿದೆ.

ಈ ನಡುವೆ ಶಾಸಕರ ಕೊಠಡಿಗೆ ವಿಪ್‌ ಅಂಟಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *

error: Content is protected !!