janadhvani

Kannada Online News Paper

…✒ಸ್ನೇಹಜೀವಿ ಅಡ್ಕ

ಜಗತ್ತು ಆಧುನಿಕತೆಯತ್ತ ಆಕರ್ಷಣೆಗೊಳ್ಳುತ್ತಿರುವ ಪ್ರಚಲಿತವಾದ ಸಂದರ್ಭದಲ್ಲಿ ನವತಲೆಮಾರುಗಳು ಪಾಶ್ಚಾತ್ಯ ಸಂಸ್ಕೃತಿಗಳನ್ನು ಅನುಸರಿಸುತ್ತಾ ಅನೈತಿಕತೆಯ ದಾರಿಯನ್ನು ಕಂಡುಕೊಳ್ಳುತ್ತಿದ್ದಾರೆ.
ಅಶ್ಲೀಲತೆ, ಅನೈತಿಕತೆ ತಾಂಡವಾಡುತ್ತಿರುವ ಸಮಾಜದಲ್ಲಿ ಮನುಷ್ಯನು ಸುಜ್ಞಾನದಿಂದ ಬಾಳಲು ಪರಿಶ್ರಮಪಡುವುದರ ಬದಲು ಅಜ್ಞಾನದ ಕುರುಡು ಪ್ರದರ್ಶನದಿಂದ ಮೆರೆದಾಡುವಂತಹ ಸನ್ನಿವೇಶಗಳು ಸಮಾಜದ ಮುಂದೆ ಹೆಮ್ಮರವಾಗಿ ಬೆಳೆಯುತ್ತಿದೆ. ಸೃಷ್ಟಿಕರ್ತನಿಗೆ ವಿಧೇಯರಾಗಿ ಬಾಳಲು ಮರೆತವರಂತೆ ಜೀವಿಸುವಾಗ ಬದುಕು ಅನ್ನುವುದು ಯಥೇಚ್ಛವಾಗಿ, ನಮಗಿಷ್ಟಬಂದಂತೆ ಜೀವಿಸಲಿರುವಂತದ್ದು ಅನ್ನುವ ತಪ್ಪು ಕಲ್ಪನೆಯಲ್ಲಿ ನಾವು ಬಹುತೇಕರು ಬಂಧಿಯಾಗಿಬಿಟ್ಟಿದ್ದೇವೆ.

ಫೆಬ್ರವರಿ 14 ರ ದಿನವನ್ನು ಯುವ ಸಮೂಹವು “ಪ್ರೇಮಿಗಳ ದಿನ” ಅನ್ನುವ ಹೆಸರಿನಲ್ಲಿ ಸಂಭ್ರಮಿಸುವಾಗ ಲಜ್ಜೆಯನ್ನು ನಾಮಾವಶೇಷ ಮಾಡಿ ಸುಖಾಡಂಭರದ ಜೀವನವನ್ನು ಬಯಸಿ, ಅನೈತಿಕತೆ, ಅಶ್ಲೀಲತೆಯಿಂದ ವರ್ತಿಸುವಂತಹ ಘಟನೆಗಳು ನಡೆಯುತ್ತದೆ. ಕ್ಷಣಿಕವಾದ ಆಕರ್ಷಣೆಯ ಮೂಲಕ ಹುಟ್ಟಿಕೊಳ್ಳುವ ಕುರುಡು ಪ್ರೀತಿಯು ಗಂಡು, ಹೆಣ್ಣು ಎಂಬ ಬೇಧ, ಭಾವವನ್ನು ಮರೆತು ಜೀವಿಸಲು ಪ್ರೇರೇಪಿಸಿ, ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಣೆ ಮಾಡುವಂತೆ ಪ್ರೇರೇಪಿಸುತ್ತದೆ.

ಯಾರನ್ನು ಅತಿಯಾಗಿ ಪ್ರೀತಿಸಬೇಕೋ ಅವರ ನೈಜತೆಯ ಪ್ರೀತಿಯನ್ನು ಅರ್ಥೈಸಲು ವಿಫಲರಾಗುತ್ತಿರುವ ಆಧುನಿಕತೆಯ ಪರಾಕಾಷ್ಠೆಯಿಂದ ಮೆರದಾಡುವವರು ಕಪಟ ಪ್ರೀತಿಯ ಹಿಂದೆ ಬಿದ್ದು ಜೀವನವನ್ನು ಕತ್ತಲೆಯತ್ತ ದೂಡುತ್ತಿರುವುದು ದುರಂತ!. ಜಗತ್ತಿನಲ್ಲಿ ಅತೀ ದೊಡ್ಡ ಪ್ರೀತಿ ಸಾಮ್ರಾಜ್ಯವನ್ನು ಸ್ಥಾಪಿಸಿದವರು ವಿಶ್ವ ಪ್ರವಾದಿ ಸ.ಅ ರವರಾಗಿದ್ದರು.”ಹಬೀಬ್ ” ಅಂದರೆ “ಅತ್ಯಂತ ಪ್ರೀತಿಯ ಗೆಳೆಯ “ಎಂಬ ಹೆಸರಿನಿಂದಾಗಿತ್ತು ಅವರು ಗುರುತಿಸುತ್ತಾ ಇದ್ದದ್ದು!.
ಪ್ರೀತಿ, ಪ್ರೇಮದ ಹೆಸರಲ್ಲಿ ಗಂಡು, ಹೆಣ್ಣು ಎಂಬ ವ್ಯತ್ಯಾಸವಿಲ್ಲದೆ ಲಜ್ಜೆರಹಿತವಾಗಿ ವಿಹರಿಸುವಾಗ ಆ ಕ್ಷಣಿಕದಲ್ಲಿ ತೋರಿದ ಪ್ರೀತಿಗೋಸ್ಕರನೋ, ತಾನು ಪ್ರೀತಿಸುತ್ತಿರುವ ಪ್ರಿಯತಮ/ಪ್ರಿಯಕರನಿಗೋಸ್ಕರನೋ ಜೀವ ಕೊಡಲೂ ತಯಾರಿರುವಂತಹ ಯುವ ಸಮುದಾಯವು ತನ್ನನ್ನು ಅತಿಯಾಗಿ ಮುದ್ದಿಸಿ, ಲಾಲಿಸಿ, ಪೋಷಿಸಿದಂತಹ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಅತೀ ದುಃಖಕರವಾದ ಸನ್ನಿವೇಶಗಳೂ ಈ ಸಮಾಜದಲ್ಲಿ ನಡೆಯುತ್ತಿದೆ!.

ಜಗತ್ತಿನಲ್ಲಿ ವಿಶ್ವ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರವರಂತೆ ಜನರನ್ನು ಪ್ರೀತಿಸಿದವರು, ಜನರಿಂದ ಪ್ರೀತಿಸಲ್ಪಟ್ಟವರು ಇನ್ಯಾರಿದ್ದಾರೆ?. ಆ ಅನುಪಮ ಪ್ರೀತಿ ಎಂದಿಗೂ ಅಮರ.
ಒಂದು ಸಂದರ್ಭದಲ್ಲಿ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಬಳಿ ಸ್ವಹಾಬಿಯೋರ್ವರು ಅಂತ್ಯದಿನ ಯಾವಾಗ ಎಂದು ಕೇಳಿದಾಗ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರು ಆ ಸ್ವಹಾಬಿಯವರಲ್ಲಿ “ಆ ದಿನಗಳಿಗಾಗಿ ತಾವೇನು ಸಿದ್ಧಮಾಡಿದ್ದೀರಿ..?ಎಂದು ಪ್ರಶ್ನಿಸಿದರು. ಅಲ್ಲಾಹು ಹಾಗೂ ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮ ರವರ ಮೇಲಿನ ಪ್ರೇಮವಲ್ಲದೆ ಬೇರೇನೂ ನನ್ನಲ್ಲಿಲ್ಲ ಎಂದು ಆ ಸ್ವಹಾಬಿ ಹೇಳಿದಾಗ “ನೀವು ಯಾರನ್ನು ಅತಿಯಾಗಿ ಪ್ರೀತಿಸುತ್ತೀರೋ, ನಾಳೆ ಅವರೊಂದಿಗಿರುವಿರಿ” ಎಂಬುದಾಗಿತ್ತು ಪ್ರವಾದಿ ಸ.ಅ ರವರ ಪ್ರತಿಕ್ರಿಯೆ.
ನಾವು ಇಂದು ಯಾರನ್ನು ಪ್ರೀತಿಸುತ್ತೇವೆಯೋ ಅವರು ನಮ್ಮ ಪರಲೋಕದ ಸಂಗಾತಿಗಳಾಗಿರುವರು ಅನ್ನುವ ಪ್ರವಾದಿ ವಚನವನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ.
ಯಾವುದೋ ಸಿನಿಮಾ ತಾರೆಯರನ್ನು ಅನುಸರಿಸಿ ಪ್ರೀತಿ, ಪ್ರೇಮದ ಹಿಂದೆ ಜೋತು ಬೀಳುವವರಿಗೊಂದು ಮುನ್ನಚ್ಚರಿಕೆಯೂ ಆಗಿದೆ. ಸಜ್ಜನರ ಸಂಗ ಹೆಜ್ಜೇನು ಸವಿದಂತೆ, ದುರ್ಜನರ ಸಂಗ ಒಡನಾಟ ಬಚ್ಚಲಿನ ರೊಚ್ಚಿಹಂತಿಹುದು ಅನ್ನುವ ಸರ್ವಜ್ಞರ ವಚನವು ಚಿಂತನಾರ್ಹವಾಗಿದೆ.

ಪ್ರೇಮಿಗಳ ದಿನಾಚರಣೆಯ ದಿನ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಹಿಡಿದು ಕಾಲೇಜ್ ವಿದ್ಯಾರ್ಥಿಗಳವರೆಗೆ ಯುವ ಸಮುದಾಯವು ಗಂಡು, ಹೆಣ್ಣು ಅನ್ನುವ ಪರಿಜ್ಞಾನವಿಲ್ಲದೆ ಲಜ್ಜೆಯಿಲ್ಲದವರಂತೆ ವರ್ತಿಸಿ, ಸ್ವೇಚ್ಛಾಚಾರ ದ ಬದುಕನ್ನು ಆಸ್ವದಿಸುವ ಆತುರದಲ್ಲಿದ್ದಾರೆ.
ಅತಿಯಾದರೆ ಅಮೃತವೂ ವಿಷವೆಂಬುದು ನಮ್ಮ ಜೀವನಕ್ಕೂ ಅನ್ವಯವಾಗುವಂತದ್ದು. ಕ್ಷಣಿಕ ಸುಖದ ಹಿಂದಿನ ಸವಾರಿಯು ಮುಂದೊಂದು ದಿನ ನಮ್ಮ ಪಾಲಿಗೆ ಮಾರಕವಾಗಿ ಪರಿಣಮಿಸಲೂಬಹುದು. ಪ್ರೇಮಿಗಳ ದಿನಾಚರಣೆಯ ಹೆಸರಲ್ಲಿ ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗಿ ಅಧಾರ್ಮಿಕತೆಯಿಂದ ಮೆರೆದಾಡುವರು ನಾವುಗಳಾಗದಿರೋಣ.

#ಸ್ನೇಹಜೀವಿ ಅಡ್ಕ

error: Content is protected !! Not allowed copy content from janadhvani.com