janadhvani

Kannada Online News Paper

ಮಕ್ಕಾ-ಮದೀನಾ ನಗರವನ್ನು ಬಂಧಿಸುವ ಹರಮೈನ್ ರೈಲು ಸೆ.24 ರಂದು ಉದ್ಘಾಟನೆ

ರಿಯಾದ್: ಮಕ್ಕಾ ಮತ್ತು ಮದೀನಾ ನಗರಗಳನ್ನು ಬಂಧಿಸುವ ಹರಮೈನ್ ರೈಲು ಗಾಡಿಯ ಓಡಾಟವು ಸೆಪ್ಟಂಬರ್ 24 ರಂದು ಉದ್ಘಾಟನೆಗೊಳ್ಳಲಿದೆ.

ಗಂಟೆಗೆ 300 ಕಿ.ಮೀ ವೇಗದಲ್ಲಿ ಚಲಿಸಲಿರುವ ರೈಲು ಓಡಾಟ ಪ್ರಾರಂಭಿಸುವುದರೊಂದಿಗೆ, ಯಾತ್ರಿಗಳ ಕಷ್ಟಕರ ಪ್ರಯಾಣ ಗಣನೀಯವಾಗಿ ಸುಧಾರಿಸಲಿದೆ.

ಒಂದು ತಿಂಗಳಿಂದ ಮುಂದುವರಿಯುತ್ತಿರುವ ಪರೀಕ್ಷಣಾ ಓಟವು ಸಂಪೂರ್ಣ ವಿಜಯ ಕಂಡ ಹಿನ್ನಲೆಯಲ್ಲಿ ಕಂಪನಿಯು ವಾಣಿಜ್ಯವಾಗಿ ಓಡಾಟ ಪ್ರಾರಂಭಿಸಲು ಮುಂದಾಗಿದೆ.

ಪ್ರಾಯೋಗಿಕ ಓಟದ ಭಾಗವಾಗಿ ಸಾರ್ವಜನಿಕರಿಗೆ ಒಂದು ತಿಂಗಳ ಸೌಜನ್ಯ ಯಾತ್ರೆಯನ್ನು  ಮುಕ್ತಾಯಗೊಳಿಸಲಾಗಿದೆ. 450 ಕಿಮೀ ಉದ್ದದ, ಮಕ್ಕಾ, ಜಿದ್ದಾ, ರಾಬಿಗ್ ಮತ್ತು ಮದೀನಾ ಮುಂತಾದ ನಿಲ್ದಾಣಗಳನ್ನು ಹರಮೈನ್ ರೈಲ್ವೆ ಹೊಂದಿದೆ. ನಿಲ್ದಾಣಗಳಲ್ಲಿನ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದೆ.

ಜಿದ್ದಾ ನಿಲ್ದಾಣದ ಪೂರಕ ಕೆಲಸವು ಅಂತಿಮ ಹಂತದಲ್ಲಿದೆ. ರೈಲು ಸೇವೆ ಪ್ರಾರಂಭಗೊಂಡರೆ ಮಕ್ಕಾದಿಂದ ಸುಮಾರು ಒಂದುವರೆ ಗಂಟೆಯಲ್ಲಿ ಮದೀನಾ ತಲುಪಲಿದೆ.

ಪ್ರಾರಂಭದಲ್ಲಿ ದಿನಕ್ಕೆ ಎಂಟು ಯಾನಗಳನ್ನು ಹೊಂದಿರುತ್ತದೆ. ಸೇವೆಯನ್ನು ನಂತರ 12 ಕ್ಕೆ ಏರಿಸಲಾಗುತ್ತದೆ. ಟಿಕೆಟ್ ದರವನ್ನು ಘೋಷಿಸಲಾಗಿಲ್ಲ. ಟಿಕೆಟ್ ಗಳನ್ನು ಆನ್ ಲೈನ್ ನಲ್ಲಿಯೂ ಲಭ್ಯಗೊಳಿಸಲಾಗುವುದು.ಮಕ್ಕಾದ ಹರಂ ಮಸೀದಿಯಿಂದ 4 ಕಿ.ಮೀ ದೂರದಲ್ಲಿ ಸುಮಾರು 5 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ರೈಲ್ವೇ ನಿಲ್ದಾಣವಿದೆ.

ಹರಮೈನ್ ಯೋಜನೆಗೆ 5,500 ಜನರ ಮಾಲೀಕತ್ವದ ಭೂಮಿ ಮತ್ತು ಕಟ್ಟಡಗಳನ್ನು ವಹಿಸಿಕೊಳ್ಳಲಾಗಿದೆ. ಈ ಪೈಕಿ 1600 ಕಟ್ಟಡಗಳಲ್ಲಿ ವಸತಿ ಕೇಂದ್ರಗಳಿದ್ದವು. ಈ ಯೋಜನೆಯು 6,700 ಕೋಟಿ ರಿಯಾಲ್ ಗಳ ಒಟ್ಟು ವೆಚ್ಚದೊಂದಿಗೆ ಜಾರಿಯಾಗುತ್ತಿದೆ.

error: Content is protected !! Not allowed copy content from janadhvani.com