janadhvani

Kannada Online News Paper

ವಿಶ್ವವಿದ್ಯಾಲಯದ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್’- ಶೇ.50 ಕ್ಕಿಂತ ಹೆಚ್ಚು ಅಂಕ ನೀಡಿದ ಶಿಕ್ಷಕರ ವಜಾ

ಪರಿಶೀಲನೆ ಬಳಿಕ ವಿದ್ಯಾರ್ಥಿಗಳಿಗೆ ಶೂನ್ಯ ಅಂಕಗಳನ್ನು ನೀಡಲಾಗಿದೆ.

ಲಖನೌ: ವಿಶ್ವವಿದ್ಯಾಲಯದಲ್ಲಿ ನಡೆದ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ‘ಜೈ ಶ್ರೀರಾಮ್’ ಎಂದು ಮತ್ತು ಕ್ರಿಕೆಟ್ ಆಟಗಾರರ ಹೆಸರುಗಳನ್ನು ಬರೆದಿರುವ ಹಲವಾರು ವಿದ್ಯಾರ್ಥಿಗಳಿಗೆ ಮೌಲ್ಯಮಾಪಕರು ಅಂಕಗಳನ್ನು ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಬರೆದ ಉತ್ತರದ ಗುಣಮಟ್ಟದ ಆಧಾರದ ಮೇಲೆ ಅವರಿಗೆ ಅಂಕಗಳನ್ನು ನೀಡಲಾಗುತ್ತದೆ. ಆದರೆ ಉತ್ತರ ಪ್ರದೇಶದ ಚೌನ್‌ಪುರದಲ್ಲಿರುವ ವೀ‌ರ್ ಬಹದ್ದೂ‌ರ್ ಸಿಂಗ್‌ ಪೂರ್ವಾಂಚಲ ವಿಶ್ವವಿದ್ಯಾಲಯದಲ್ಲಿ ಉತ್ತರ ಪತ್ರಿಕೆಗಳಲ್ಲಿ ‘ಜೈ ಶ್ರೀರಾಮ್’ ಮತ್ತು ಕ್ರಿಕೆಟಿಗರ ಹೆಸರುಗಳನ್ನು ಬರೆದ ವಿದ್ಯಾರ್ಥಿಗಳಿಗೆ ಅಂಕಗಳನ್ನು ನೀಡಿರುವ ಇಬ್ಬರು ಶಿಕ್ಷಕರನ್ನು ವಜಾಗೊಳಿಸಲು ವಿಶ್ವವಿದ್ಯಾಲಯ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿ ದಿವ್ಯಾಂಶು ಸಿಂಗ್ ಅವರು ಸಲ್ಲಿಸಿದ ಆರ್‌ಟಿಐ ಅರ್ಜಿ ಆಧಾರದ ಮೇರೆಗೆ ಫಾರ್ಮಸಿ ಕೋರ್ಸ್‌ನ ನಾಲ್ವರು ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮರುಪರಿಶೀಲಿಸಿದಾಗ ಈ ವಿಷಯ ಬೆಳಕಿಗೆ ಬಂದಿದೆ.

ವಿದ್ಯಾರ್ಥಿಗಳು ಉತ್ತರ ಪತ್ರಿಕೆಯಲ್ಲಿ ಅಲ್ಲಲ್ಲಿ ‘ಜೈ ಶ್ರೀರಾಮ್’ ಘೋಷಣೆ ಮತ್ತು ಭಾರತೀಯ ಹಾಗೂ ಅಂತರರಾಷ್ಟ್ರೀಯ ಕ್ರಿಕೆಟಿಗರ ಹೆಸರನ್ನು ಬರೆದಿದ್ದು, ಇವರಿಗೆ ಮೌಲ್ಯಮಾಪಕರು ಶೇ 50ಕ್ಕಿಂತ ಹೆಚ್ಚು ಅಂಕಗಳನ್ನು ನೀಡಿದ್ದಾರೆ. ಪರಿಶೀಲನೆ ಬಳಿಕ ವಿದ್ಯಾರ್ಥಿಗಳಿಗೆ ಶೂನ್ಯ ಅಂಕಗಳನ್ನು ನೀಡಲಾಗಿದೆ. ಪ್ರಕರಣದ ಕುರಿತು ರಾಜಭವನ ತನಿಖೆಗೆ ಆದೇಶಿಸಿದೆ.

error: Content is protected !! Not allowed copy content from janadhvani.com