janadhvani

Kannada Online News Paper

ನಾಯಕತ್ವ ಸ್ಥಾನದಲ್ಲಿರುವವರು ಪ್ರಬುದ್ಧತೆಯ ಮಾತುಗಳನ್ನಾಡಬೇಕು- ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಪ್ರಧಾನಿಯಂತಹ ವ್ಯಕ್ತಿಗಳು ಕೋಮು ದ್ವೇಷ ಹರಡುವ ಹೇಳಿಕೆ ನೀಡಬಾರದಿತ್ತು. ಮುಸಲ್ಮಾನರ ಮನದಲ್ಲಿ ನೋವನ್ನುಂಟು ಮಾಡಿದ ಹೇಳಿಕೆಯನ್ನು ಸರಿಪಡಿಸಲು ಅವರು ಸಿದ್ಧರಾಗಿರಬೇಕು.

ಕೋಝಿಕ್ಕೋಡ್ | ಚುನಾವಣೆಯ ನಂತರವೂ ದೇಶ ಅವಿಭಜಿತವಾಗಿ ಉಳಿಯಬೇಕು ಆದ್ದರಿಂದ ಆಡಳಿತ ಮತ್ತು ರಾಜಕೀಯ ನಾಯಕತ್ವದಲ್ಲಿ ಇರುವವರು ಪ್ರಬುದ್ಧತೆಯಿಂದ ಕೂಡಿದ ಮಾತುಗಳನ್ನು ಬಳಸಬೇಕು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಕೋಮು ವಿಭಜಕ ಹೇಳಿಕೆಗಳು ಅಂತಿಮವಾಗಿ ಇಡೀ ದೇಶವನ್ನೇ ಹಾನಿಮಾಡಲಿದೆ. ಸಾಂವಿಧಾನಿಕ ಸ್ಥಾನಗಳಲ್ಲಿ ಕುಳಿತುಕೊಳ್ಳುವವರು ಕಾರ್ಯಗಳು ಮತ್ತು ಹೇಳಿಕೆಗಳಲ್ಲಿ ತಮ್ಮ ಸ್ಥಾನದ ಘನತೆಯನ್ನು ಎತ್ತಿಹಿಡಿಯಬೇಕು.

ಚುನಾವಣೆಯಲ್ಲಿ ಗೆಲ್ಲಲು ಕೋಮುವಾದವನ್ನೇ ಅಸ್ತ್ರವನ್ನಾಗಿಸುವವರು ನಮ್ಮ ದೇಶದ ಮೇಲೆ ತೀವ್ರ ಗಾಯವನ್ನುಂಟು ಮಾಡುತ್ತಿದ್ದಾರೆ. ಅದು ಚಿಕಿತ್ಸೆಯಿಂದ ವಾಸಿಯಾಗದ ಗಾಯವಾಗಿ ನಮ್ಮ ದೇಶವನ್ನು ರೋಗಗ್ರಸ್ತ ದೇಶವನ್ನಾಗಿ ಮಾಡಲಿದೆ.

ಪ್ರಧಾನಿಯಂತಹ ವ್ಯಕ್ತಿಗಳು ಕೋಮು ದ್ವೇಷ ಹರಡುವ ಹೇಳಿಕೆ ನೀಡಬಾರದಿತ್ತು. ಮುಸಲ್ಮಾನರ ಮನದಲ್ಲಿ ನೋವನ್ನುಂಟು ಮಾಡಿದ ಹೇಳಿಕೆಯನ್ನು ಸರಿಪಡಿಸಲು ಅವರು ಸಿದ್ಧರಾಗಿರಬೇಕು. ಭಾರತದ ಮುಸ್ಲಿಂ ಅಲ್ಪಸಂಖ್ಯಾತರನ್ನು ದ್ವೇಷದ ರಾಜಕಾರಣಕ್ಕೆ ಎಳೆದುತರುವುದು ಅತ್ಯಂತ ಹೀನ ಕೃತ್ಯವಾಗಿದೆ ಎಂದು ಕಾಂತಪುರಂ ಅವರು ಹೇಳಿಕೆಯಲ್ಲಿ ಗಮನ ಸೆಳೆದರು.

ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜನರು ಕಷ್ಟಪಟ್ಟು ಸಂಪಾದಿಸಿದ ಹಣ ಮತ್ತು ಬೆಲೆಬಾಳುವ ವಸ್ತುಗಳನ್ನು “ಒಳನುಸುಳುಕೋರರು” ಮತ್ತು “ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ” ನೀಡಲು ಕಾಂಗ್ರೆಸ್ ಯೋಜಿಸಿದೆ ಎಂದು ಆರೋಪಿಸಿದ್ದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ದೇಶದ ಸಂಪತ್ತನ್ನು ಮರುಹಂಚಿಕೆ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ದರು.

error: Content is protected !! Not allowed copy content from janadhvani.com