janadhvani

Kannada Online News Paper

ಗಡಿ ರಸ್ತೆಗಳನ್ನು ಮುಚ್ಚಿದ ಕಾಸರಗೋಡು ಜಿಲ್ಲಾಡಳಿತ- ಗಡಿ ನಿವಾಸಿಗಳಿಗೆ ಮತ್ತೆ ಸಮಸ್ಯೆ

ಕಾಸರಗೋಡು:ಈ ಹಿಂದೆ ಕರ್ನಾಟಕ ಸರಕಾರ ಬಂದ್ ಮಾಡಿದ್ದ ಗಡಿ ರಸ್ತೆಗಳನ್ನು, ದಕ್ಷಿಣ ಕನ್ನಡದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹಾಗೂ ಮರಣವು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಕಾಸರಗೋಡು ಜಿಲ್ಲಾಡಳಿತ ಮಣ್ಣು ಹಾಕಿ ಮುಚ್ಚಿದೆ. ಕಾಸರಗೋಡಿನಿಂದ ಇದೀಗ ತಲಪಾಡಿ ಮೂಲಕ ಮಾತ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕರ್ನಾಟಕಕ್ಕೆ ತೆರಳಲು ಅನುಮತಿ ನೀಡಲಾಗಿದೆ, ಅದಕ್ಕೆ ಜಿಲ್ಲಾಡಳಿತದ ಪಾಸ್‌ ಪಡೆಯಬೇಕಿದೆ.

ಕರ್ನಾಟಕ ಗಡಿ ಹೊಂದಿರುವ ಮಂಜೇಶ್ವರ ತಾಲೂಕಿನ ವಿವಿಧ ಒಳ ರಸ್ತೆಗಳನ್ನು ಸಹ ಮುಚ್ಚಲಾಗಿದೆ. ದಕ್ಷಿಣ ಕನ್ನಡ ವ್ಯಾಪ್ತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಮತ್ತು ಸಾಮಾಜಿಕ ಸಂಪರ್ಕದ ಮೂಲಕ ರೋಗ ಹರಡುವ ಸಾಧ್ಯತೆಯಿರುವುದರಿಂದ ಕಾಸರಗೋಡು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಗ್ರಾಮೀಣ ಪ್ರದೇಶದವರು ತೆರಳುತ್ತಿದ್ದ ಮಂಜೇಶ್ವರ ತಾಲೂಕಿನ ಬೆರಿಪದವು, ಮುಗುಳಿ, ಪದ್ಯಾಣ ಸಹಿತ ಎಲ್ಲರಸ್ತೆಗಳ ಸಹಿತ 17 ಗಡಿ ರಸ್ತೆಗಳನ್ನು ಮುಚ್ಚಲಾಗಿದೆ.

ಕಾಸರಗೋಡು ಜಿಲ್ಲಾಧಿಕಾರಿ ಡಾ. ಡಿ.ಸಜಿತ್‌ ಬಾಬು ಹಾಗೂ ಜಿಲ್ಲಾ ಪೊಲೀಸರು ಮಂಗಳವಾರ ನೇರವಾಗಿ ಗಡಿ ಭಾಗಕ್ಕೆ ತೆರಳಿ ಮಣ್ಣು ಹಾಕಿಸಿ ರಸ್ತೆ ಮುಚ್ಚಿದ್ದಾರೆ. ಈ ಮೊದಲೇ ಗಾಳಿಮುಖ, ಈಶ್ವರ ಮಂಗಲ, ದೇಲಂಪಾಡಿ, ಸುಳ್ಯಪದವು, ಸಾರಡ್ಕ ಮತ್ತಿತರ ಗಡಿಗಳನ್ನು ಮುಚ್ಚಲಾಗಿತ್ತು.

ಜಿಲ್ಲಾಡಳಿತದ ಈ ಕ್ರಮದ ವಿರುದ್ಧ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ಇನ್ನಷ್ಟು ಸಮಸ್ಯೆಗೆ ಒಳಗಾಗಿದ್ದಾರೆ. ಕರ್ನಾಟಕ ಸಂಪರ್ಕ ಗಡಿ ತೆರೆದು ನೀಡುವಂತೆ ಆನೇಕ ಬಾರಿ ಕರ್ನಾಟಕ ಸರಕಾರದ ಮುಂದೆ ಬೇಡಿಕೆಯನ್ನಿರಿಸಲಾಗಿತ್ತು, ಇದೀಗ ಕಾಸರಗೋಡು ಜಿಲ್ಲಾಡಳಿತ ಗಡಿ ರಸ್ತೆಗಳನ್ನು ಮುಚ್ಚಿರುವುದು ಗ್ರಾಮೀಣ ಜನರ ಆಕ್ರೋಶಕ್ಕೆ ಕಾರಣವಾಗಿದೆ.

error: Content is protected !! Not allowed copy content from janadhvani.com