ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಮಂಗಳವಾರ (ಫೆ.4) ವಿಧಾನಸಭೆಯಲ್ಲಿ ಮಂಡಿಸಿದ ಸಾಮಾಜಿಕ-ಆರ್ಥಿಕ, ರಾಜಕೀಯ, ಜಾತಿ, ಶಿಕ್ಷಣ ಮತ್ತು ಉದ್ಯೋಗ ಸಮೀಕ್ಷೆ (ಜಾತಿ ಸಮೀಕ್ಷೆ) ವರದಿಯನ್ನು ತಮ್ಮದೇ ಪಕ್ಷದ ವಿಧಾನಪರಿಷತ್‌ನ ಸದಸ್ಯ ಚಿಂತಪಾಂಡು ನವೀನ್ ಅಲಿಯಾಸ್ ತೀನ್ಮಾರ್ ಮಲ್ಲಣ್ಣ ಸುಟ್ಟು ಹಾಕಿದ್ದಾರೆ.
ನಾನು ಈ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಇದು ಹಿಂದುಳಿದ ಜಾತಿಗಳ ಭವಿಷ್ಯವನ್ನು ನಾಶ ಮಾಡುವ ಪಿತೂರಿ ಎಂದು ಮಲ್ಲಣ್ಣ ಹೇಳಿದ್ದಾರೆ. ವರದಿಯಲ್ಲಿರುವ ಅಂಕಿ ಅಂಶಗಳು ನಕಲಿ. ಹಿಂದುಳಿದ ಜಾತಿಗಳು ಇದನ್ನು ಒಪ್ಪುವುದಿಲ್ಲ. ಸಮೀಕ್ಷೆ ವೇಳೆ 40 ಲಕ್ಷ ಹಿಂದುಳಿದ ಜಾತಿಗಳ ಜನರನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಮಲ್ಲಣ್ಣ ಆರೋಪಿಸಿದ್ದಾರೆ.
ಸರ್ಕಾರ ನಕಲಿ ಅಂಕಿ ಅಂಶಗಳೊಂದಿಗೆ ಹಿಂದುಳಿದ ಜಾತಿಗಳನ್ನು ದಾರಿ ತಪ್ಪಿಸಿದೆ ಮತ್ತು ವಂಚಿಸಿದೆ. ರಾಜ್ಯದ ಜನ ಸಂಖ್ಯೆಯಲ್ಲಿ ಹಿಂದುಳಿದ ಹಿಂದೂಗಳ ಸಂಖ್ಯೆ ಶೇಖಡ 60ರಷ್ಟಿದೆ. ಆದರೆ, ಸಮೀಕ್ಷೆ ಕೇವಲ 46 ಶೇಖಡ ಎಂದು ತೋರಿಸಿದೆ. ಇತರ ಜಾತಿಗಳ ಜನ ಸಂಖ್ಯೆ ಶೇಖಡ 15 ಎಂದಿದೆ. ವಾಸ್ತವದಲ್ಲಿ ಅವರು ಕೇವಲ 8 ಶೇಖಡ ಮಾತ್ರ ಇದ್ದಾರೆ ಎಂದು ಮಲ್ಲಣ್ಣ ಹೇಳಿದ್ದಾರೆ. ಈ ಸಮೀಕ್ಷೆಯ ಹಿಂದೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಕೆ. ಜನಾ ರೆಡ್ಡಿ ಅವರ ಕೈವಾಡವಿದೆ ಎಂದು ಮಲ್ಲಣ್ಣ ಆರೋಪಿಸಿದ್ದಾರೆ.
ಮಲ್ಲಣ್ಣ ಅವರ ನಡೆಗೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಜಾತಿ ಸಮೀಕ್ಷೆ ವರದಿಗೆ ಬೆಂಕಿ ಹಚ್ಚಿದ್ದಕ್ಕಾಗಿ ಮತ್ತು ರೆಡ್ಡಿ ಸಮುದಾಯದ ವಿರುದ್ಧ ಮಲ್ಲಣ್ಣ ನೀಡಿರುವ ಹೇಳಿಕೆಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ (ಟಿಪಿಸಿಸಿ) ಶಿಸ್ತು ಸಮಿತಿ ಮಲ್ಲಣ್ಣ ಅವರಿಗೆ ಶೋಕಾಸ್ (ಕಾರಣ ಕೇಳಿ) ನೋಟಿಸ್ ನೀಡಿದೆ. ನಿಮ್ಮ ವಿರುದ್ದ ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು? ಎಂದು ಪ್ರತಿಕ್ರಿಯೆ ಕೇಳಿದೆ.
ಮಲ್ಲಣ್ಣ ವಿರುದ್ಧ ಕ್ರಮ ಕೈಗೊಳ್ಳುವಂತೆ ಟಿಪಿಸಿಸಿ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರಿಗೆ ಹಲವಾರು ನಾಯಕರು ಮತ್ತು ಕಾರ್ಯಕರ್ತರು ಮನವಿ ಮಾಡಿದ್ದಾರೆ. ಮಲ್ಲಣ್ಣ ತಮ್ಮ ಮಿತಿಯನ್ನು ಮೀರುತ್ತಿದ್ದಾರೆ ಎಂದು ಯಾದಾದ್ರಿ ಭೋಂಗಿರ್‌ನ ಕಾಂಗ್ರೆಸ್ ಶಾಸಕ ಕುಂಭಮ್ ಅನಿಲ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಪಕ್ಷದ ನಾಯಕತ್ವ ಶೀಘ್ರದಲ್ಲೇ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.
ಈ ನಡುವೆ ರೆಡ್ಡಿ ಸಮುದಾಯದ ಮುಖಂಡರು ಮಲ್ಲಣ್ಣ ವಿರುದ್ಧ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ದೂರು ನೀಡಿದ್ದಾರೆ. ಎರಡು ದಿನಗಳ ಹಿಂದೆ ವಾರಂಗಲ್‌ನಲ್ಲಿ ಹಿಂದುಳಿದ ಜಾತಿಗಳ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಮಲ್ಲಣ್ಣ, ರೆಡ್ಡಿಗಳ ವಿರುದ್ಧ ಅಸಭ್ಯ ಭಾಷೆ ಬಳಸಿದ್ದಾರೆ ಎಂದು ಆರೋಪಿಸಿದ್ದಾರೆ.
ತೀನ್ಮಾರ್ ಮಲ್ಲಣ್ಣ ಎಂದೇ ಪ್ರಸಿದ್ಧರಾಗಿರುವ ಚಿಂತಪಾಂಡು ನವೀನ್ ಅವರು ಸಾಮಾಜಿಕ ಮಾಧ್ಯಮ (ಯೂಟ್ಯೂಬ್) ಚಾನೆಲ್ ನಡೆಸುತ್ತಿದ್ದಾರೆ. ಹಿಂದಿನ ಬಿಆರ್‌ಎಸ್ ಸರ್ಕಾರದ ಕಟು ಟೀಕಾಕಾರರಾಗಿದ್ದ ಇವರು, ನಂತರ ಬಿಜೆಪಿ ಸೇರಿದ್ದರು. ನವೆಂಬರ್ 2023ರಲ್ಲಿ ಕೇಸರಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದರು. ಜೂನ್ 2024ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ವಾರಂಗಲ್-ನಲ್ಗೊಂಡ-ಖಮ್ಮಾಮ್ ಪದವೀಧರ ಎಂಎಲ್‌ಸಿ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು.