janadhvani

Kannada Online News Paper

ಸಲಪಿ ಸಿದ್ಧಾಂತದ ಮುಖವಾಡ ಕಳಚಿದ ಕರಾವಳಿ: ಸೈದ್ಧಾಂತಿಕ ಸೋಲನ್ನು ಮುಚ್ಚಿಡಲು ದೈಹಿಕ ಹಲ್ಲೆಗೆ ಮುಂದಾದರೇ ಸಲಪಿಗಳು?

"ದರ್ಗಾಗಳು ಶಿರ್ಕ್ (ದೈವನಿಂದನೆ) ಕೇಂದ್ರಗಳು" ಎಂಬ ಸಲಫಿಗಳ ಹೇಳಿಕೆಯನ್ನು ಪ್ರಶ್ನಿಸಲು ಹೋದ ಸುನ್ನಿ ಪಂಗಡದ ಯುವಕರ ಮೇಲೆ ಹಲ್ಲೆ ನಡೆದಿದೆ. ಗಾಯಗೊಂಡ ಯುವಕರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕವಾಗಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಮಂಗಳೂರು: ಕಳೆದ ಕೆಲವು ವರ್ಷಗಳಿಂದ ಶಾಂತವಾಗಿದ್ದ ಕರಾವಳಿ ಭಾಗದ ಮುಸ್ಲಿಂ ಪಂಗಡಗಳ ನಡುವಿನ ಆಂತರಿಕ ಭಿನ್ನಾಭಿಪ್ರಾಯಗಳು ಈಗ ಮತ್ತೆ ಸ್ಫೋಟಗೊಂಡಿವೆ. ಸುನ್ನಿ ಮತ್ತು ಸಲಪಿ (ಮುಜಾಹಿದ್) ಪಂಗಡಗಳ ನಡುವಿನ ಸೈದ್ಧಾಂತಿಕ ಹಗ್ಗಜಗ್ಗಾಟವು ಕೇವಲ ಚರ್ಚೆಗಳಿಗೆ ಸೀಮಿತವಾಗದೆ, ಈಗ ಬೀದಿ ಕಾಳಗ ಮತ್ತು ಭೌತಿಕ ಹಲ್ಲೆಯ ಹಂತಕ್ಕೆ ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಆದರೆ ಈ ಬಾರಿಯ ಹೋರಾಟ ಕೇವಲ ಸುನ್ನಿ ಮತ್ತು ಸಲಫಿಗಳ ನಡುವಿನದ್ದಕ್ಕಿಂತ ಮಿಗಿಲಾಗಿ, ಸಲಫಿ ಸಿದ್ಧಾಂತದ ಒಳಗಿರುವ ವಿರೋಧಾಭಾಸಗಳು ಮತ್ತು ಅವರ ಇತ್ತೀಚಿನ ನಡೆಯ ವಿರುದ್ಧ ಸುನ್ನಿ ಸಮುದಾಯವು ತಾರ್ಕಿಕವಾಗಿ ಪ್ರಶ್ನಿಸುತ್ತಿರುವುದು ಈ ವಿವಾದದ ಕೇಂದ್ರಬಿಂದುವಾಗಿದೆ.

ಹೊರಗಿನವರ ಹಸ್ತಕ್ಷೇಪಕ್ಕೆ ಕರಾವಳಿಯ ಪ್ರತಿರೋಧ
ಕರಾವಳಿಯ ಸ್ಥಳೀಯರ ಪ್ರಕಾರ, ಈ ಭಿನ್ನಾಭಿಪ್ರಾಯಕ್ಕೆ ಕೇರಳದಿಂದ ಬರುವ ಸಲಪಿ ಪ್ರಬೋಧಕರೇ ಮುಖ್ಯ ಕಾರಣ.ಕೇರಳದಲ್ಲಿ ತಮ್ಮ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಸಲಫಿ ಗುಂಪುಗಳು, ಅಲ್ಲಿನ ಒಳಜಗಳವನ್ನು ಮರೆಮಾಚಲು ಮಂಗಳೂರು ಮತ್ತು ಕರಾವಳಿ ಭಾಗದಲ್ಲಿ ಸೌಹಾರ್ದತೆ ಕೆಡಿಸುವ ಪ್ರಯತ್ನ ನಡೆಸುತ್ತಿವೆ.

ಕೇರಳದ ‘ವಿಸ್ಡಂ’ (Wisdom) ಎಂಬ ಸಲಪಿ ವಿಭಾಗವು ಕರಾವಳಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ಇಲ್ಲಿನ ಬಹುಸಂಖ್ಯಾತ ಸುನ್ನಿ ಸಮುದಾಯದ ನಂಬಿಕೆಗಳನ್ನು “ಅನ್ಯಮತೀಯರ ಆರಾಧನೆ” ಎಂದು ಹೀಯಾಳಿಸುತ್ತಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. “ಕೇರಳದಿಂದ ವಿಷಬೀಜ ಬಿತ್ತಲು ಬರುವವರಿಂದ ಇಲ್ಲಿನ ಸೌಹಾರ್ದತೆ ಕೆಡುತ್ತಿದೆ” ಎಂಬ ಆರೋಪ ವ್ಯಾಪಕವಾಗಿ ಕೇಳಿಬರುತ್ತಿದೆ. ಹೊರಗಿನಿಂದ ಬಂದು ಇಲ್ಲಿನ ಆಚಾರ-ವಿಚಾರಗಳನ್ನು ಟೀಕಿಸುವ ಪುರೋಹಿತರ ವಿರುದ್ಧ ಸಮುದಾಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸಲಫಿಗಳ ಸೈದ್ಧಾಂತಿಕ ದಾರಿದ್ರ್ಯ: ಅಂದು ಹರಾಮ್, ಇಂದು ಹಲಾಲ್?
ಒಂದು ಕಾಲದಲ್ಲಿ ಯಾವ ಆಚರಣೆಗಳನ್ನು “ಶಿರ್ಕ್” (ದೈವನಿಂದನೆ) ಎಂದು ಕಟುವಾಗಿ ಟೀಕಿಸುತ್ತಿದ್ದರೋ, ಇಂದು ಅದೇ ಸಲಪಿಗಳು ಅನಿವಾರ್ಯವಾಗಿ ಸುನ್ನಿ ಆದರ್ಶಗಳನ್ನು ಒಪ್ಪಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಕೇರಳದಲ್ಲಿ ಹತ್ತಾರು ಪಂಗಡಗಳಾಗಿ ಸೀಳಾಗಿರುವ ಸಲಫಿಗಳು, ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
“ಈ ಹಿಂದೆ ತಾವೇ ವಾದಿಸುತ್ತಿದ್ದ ಹಲವಾರು ವಿಚಾರಗಳನ್ನು ಈಗ ತಿದ್ದುಪಡಿ ಮಾಡಿಕೊಂಡು ಸುನ್ನಿ ಹಾದಿಗೆ ಬರುತ್ತಿರುವ ಸಲಪಿಗಳು, ತಮ್ಮ ಈ ಸೈದ್ಧಾಂತಿಕ ಪಲ್ಲಟವನ್ನು ಮುಚ್ಚಿಡಲು ಕರ್ನಾಟಕದ ಮಣ್ಣನ್ನು ಬಳಸಿಕೊಳ್ಳುತ್ತಿದ್ದಾರೆ,” ಎಂದು ಸ್ಥಳೀಯ ಸುನ್ನಿ ಮುಖಂಡರು ಆರೋಪಿಸಿದ್ದಾರೆ.

ಕೆ.ಸಿ. ನಗರದ ‘ಲಕ್ಷಾಂತರ ರೂಪಾಯಿ’ ಪ್ರಹಸನ
ಇತ್ತೀಚೆಗೆ ಕೆ.ಸಿ. ನಗರದಲ್ಲಿ ನಡೆದ ಕಾರ್ಯಕ್ರಮವೊಂದು ಕರಾವಳಿಯ ಜನರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಶಾರ್ಜಾದಲ್ಲಿ ನೆಲೆಸಿರುವ ಕೇರಳ ಮೂಲದ ಸಲಪಿ ಪುರೋಹಿತನೊಬ್ಬನನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕರೆತಂದಿದ್ದ ಸಲಪಿಗಳು, ಕರಾವಳಿಯ ಮುಗ್ಧ ಮುಸ್ಲಿಮರನ್ನು ‘ಬಹು ದೈವಾರಾಧಕರು’ ಎಂದು ಬಣ್ಣಿಸಿರುವುದು ವಿವಾದಕ್ಕೆ ನಾಂದಿ ಹಾಡಿದೆ.
ವಿಶೇಷವೆಂದರೆ, ಇದೇ ಪುರೋಹಿತ ಹಿಂದೆ ಯಾವುದನ್ನು ನಿಷೇಧಿತ (ಶಿರ್ಕ್) ಎಂದು ಬೊಬ್ಬಿಡುತ್ತಿದ್ದನೋ, ಈಗ ಅಂತಹದ್ದೇ ಹಲವು ಕಾರ್ಯಗಳನ್ನು ಸ್ವತಃ ಅಂಗೀಕರಿಸಲು ಆರಂಭಿಸಿರುವುದು ಇವರ ಇಬ್ಬಂದಿ ನೀತಿಯನ್ನು ಎತ್ತಿ ತೋರಿಸುತ್ತದೆ.
ಪ್ರಶ್ನಿಸಿದರೆ ಹಲ್ಲೆ: ಇಂಗು ತಿಂದ ಮಂಗನಂತಾದ ನಾಯಕರು
ವರದಿಯ ಪ್ರಕಾರ, ಉಳ್ಳಾಲದಲ್ಲಿ ನಿನ್ನೆ ನಡೆದ ಸಲಪಿಗಳ ಮುಖಾಮುಖಿ ಕಾರ್ಯಕ್ರಮವೊಂದರ ಕೊನೆಯಲ್ಲಿ ಸಂಘರ್ಷ ತಾರಕಕ್ಕೇರಿದೆ.
“ದರ್ಗಾಗಳು ಶಿರ್ಕ್ (ದೈವನಿಂದನೆ) ಕೇಂದ್ರಗಳು” ಎಂಬ ಸಲಫಿಗಳ ಹೇಳಿಕೆಯನ್ನು ಪ್ರಶ್ನಿಸಲು ಹೋದ ಸುನ್ನಿ ಪಂಗಡದ ಯುವಕರ ಮೇಲೆ ಹಲ್ಲೆ ನಡೆದಿದೆ. ಗಾಯಗೊಂಡ ಯುವಕರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕವಾಗಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಬುದ್ಧಿವಂತ ಕರಾವಳಿಯ ಸುನ್ನಿ ಯುವಕರು ಸಲಪಿ ಪಾಳಯದಲ್ಲಿರುವ ಭಿನ್ನಾಭಿಪ್ರಾಯ ಮತ್ತು ಸೈದ್ಧಾಂತಿಕ ಗೊಂದಲಗಳ ಬಗ್ಗೆ ನೇರ ಪ್ರಶ್ನೆಗಳನ್ನು ಎತ್ತಿದಾಗ, ಉತ್ತರಿಸಲಾಗದ ಸಲಫಿ ಮುಖಂಡರು ಅಸಹಾಯಕತೆಯಿಂದ ದೈಹಿಕ ಹಲ್ಲೆಗೆ ಇಳಿದಿದ್ದಾರೆ.
“ತಾರ್ಕಿಕವಾಗಿ ವಾದಿಸಲು ಸಾಧ್ಯವಾಗದಿದ್ದಾಗ ಆಯುಧ ಅಥವಾ ಕೈ ಮಾಡುವುದು ಸೋಲಿನ ಲಕ್ಷಣ. ಸುನ್ನಿಗಳ ಪ್ರಶ್ನೆಗೆ ಉತ್ತರ ನೀಡಲಾಗದೆ ಸಲಫಿಗಳು ಇಂಗು ತಿಂದ ಮಂಗನಂತಾಗಿದ್ದಾರೆ,” ಎಂಬ ಮಾತುಗಳು ಈಗ ಕರಾವಳಿಯ ಗಲ್ಲಿಗಳಲ್ಲಿ ಕೇಳಿಬರುತ್ತಿವೆ.

ಈ ಬೆಳವಣಿಗೆಯು ಕರಾವಳಿಯ ಮುಸ್ಲಿಂ ಸಮಾಜದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಸುನ್ನಿ ಸಮುದಾಯವು ತಮ್ಮ ಆದರ್ಶಗಳ ರಕ್ಷಣೆಗಾಗಿ ಸಜ್ಜಾಗುತ್ತಿದೆ. ಸುನ್ನಿ ಸಮುದಾಯವು “ಸಲಪಿಗಳು ಇಸ್ಲಾಮಿನ ಹಾದಿ ತಪ್ಪಿದವರು” ಎಂದು ತಿರುಗೇಟು ನೀಡಿದ್ದು, ತಮ್ಮ ನಾಯಕರ ವಿರುದ್ಧದ ಅವಮಾನವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಈಗ ಸುನ್ನಿ ಪಂಗಡದವರು ಬೃಹತ್ ಸಮಾವೇಶಗಳನ್ನು ಸಂಘಟಿಸುತ್ತಿದ್ದಾರೆ.

ಇದನ್ನೂ ಓದಿರಿ...