ಮುಂಬೈ: ಮುಂಬೈನ ಒಂದೇ ಕುಟುಂಬದ ನಾಲ್ವರು ಕಲ್ಲಂಗಡಿ ಹಣ್ಣು ತಿಂದ ಬಳಿಕ ಮೃತಪಟ್ಟ ಘಟನೆಯ ರಹಸ್ಯ ಈಗ ಬಯಲಾಗಿದೆ. ದಂಪತಿ ಮತ್ತು ಅವರ ಇಬ್ಬರು ಮಕ್ಕಳು ಮೃತಪಟ್ಟಿದ್ದು ಕೇವಲ ಆಹಾರ ವಿಷಾಹಾರವಾದ್ದರಿಂದ (Food Poisoning) ಅಲ್ಲ ಎಂದು ಇತ್ತೀಚಿನ ಫೋರೆನ್ಸಿಕ್ ವರದಿ ತಿಳಿಸಿದೆ.
ನಾಲ್ವರೂ ವಿಷಪ್ರಾಶನದಿಂದ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದ್ದು, ಮೃತರ ದೇಹದಲ್ಲಿ ಮತ್ತು ಅವರು ತಿಂದ ಹಣ್ಣಿನ ಮಾದರಿಗಳಲ್ಲಿ ಇಲಿಗಳನ್ನು ಕೊಲ್ಲಲು ಬಳಸುವ ವಿಷಕಾರಿ ಅಂಶ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಮೃತ ನಾಲ್ವರ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿತ್ತು. ಇದು ಈ ಪ್ರಕರಣದಲ್ಲಿ ದೊಡ್ಡ ತಿರುವು ನೀಡಿತು. ವಿಷಪ್ರಾಶನದಿಂದಾಗಿ ದೇಹದ ಒಳಗಿನ ಅಂಗಗಳು ಈ ಬಣ್ಣಕ್ಕೆ ತಿರುಗಿದೆ ಎಂದು ಹಲವು ದಿನಗಳ ನಂತರ ಬಂದ ವರದಿಯು ಖಚಿತಪಡಿಸಿವೆ.
ಘಟನೆಯ ಹಿನ್ನೆಲೆ:
ಏಪ್ರಿಲ್ 27 ರಂದು ದಕ್ಷಿಣ ಮುಂಬೈನ ಪೈಧುನಿಯಲ್ಲಿ ಮೊಬೈಲ್ ಅಂಗಡಿ ಮಾಲೀಕ ಅಬ್ದುಲ್ಲಾ ದೊಕಾಡಿಯಾ (45), ಪತ್ನಿ ನಸ್ರೀನ್ (35), ಮಕ್ಕಳಾದ ಝೈನಬ್ (13) ಮತ್ತು ಆಯೇಷಾ (16) ಮೃತಪಟ್ಟಿದ್ದರು. ಅಂದು ರಾತ್ರಿ ಮನೆಗೆ ಬಂದಿದ್ದ ಅತಿಥಿಗಳೊಂದಿಗೆ ಇವರು ಊಟ ಮಾಡಿದ್ದರು. ಅತಿಥಿಗಳು ಹೋದ ನಂತರ ಬೆಳಗಿನ ಜಾವ ಸುಮಾರು 1 ಗಂಟೆಗೆ ಇವರು ಕಲ್ಲಂಗಡಿ ಹಣ್ಣು ಸೇವಿಸಿದ್ದರು. ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ನಾಲ್ವರಿಗೂ ವಾಂತಿ ಮತ್ತು ಭೇದಿ ಕಾಣಿಸಿಕೊಂಡು ಕೆಲವೇ ಗಂಟೆಗಳಲ್ಲಿ ಮರಣ ಸಂಭವಿಸಿತ್ತು.
ಮೃತ ಅಬ್ದುಲ್ಲಾ ದೊಕಾಡಿಯಾ ಅವರ ದೇಹದಲ್ಲಿ ಮಾರ್ಫಿನ್ ಅಂಶ ಪತ್ತೆಯಾಗಿದ್ದು ಪ್ರಕರಣದಲ್ಲಿ ಗೊಂದಲ ಮೂಡಿಸಿತ್ತು.
ಫೋರೆನ್ಸಿಕ್ ತಪಾಸಣೆಯಲ್ಲಿ ನಾಲ್ವರ ಮರಣವು ಮಾರಕವಾದ ಇಲಿ ವಿಷದಿಂದ ಸಂಭವಿಸಿದೆ ಎಂದು ತಿಳಿದುಬಂದಿದೆ. ಇಲಿ ವಿಷದಲ್ಲಿ ಬಳಸುವ ‘ಜಿಂಕ್ ಫಾಸ್ಫೈಡ್’ (Zinc Phosphide) ಎಂಬ ವಿಷಕಾರಿ ರಾಸಾಯನಿಕದ ಅಂಶ ಅವರ ದೇಹದಲ್ಲಿ ಪತ್ತೆಯಾಗಿದೆ. ಕುಟುಂಬದವರು ಸೇವಿಸಿದ ಕಲ್ಲಂಗಡಿ ಹಣ್ಣಿನ ಮಾದರಿಗಳಲ್ಲೂ ಇದೇ ಜಿಂಕ್ ಫಾಸ್ಫೈಡ್ ಪತ್ತೆಯಾಗಿದೆ.
ಕಲ್ಲಂಗಡಿ ಹಣ್ಣಿನಲ್ಲಿ ಈ ರಾಸಾಯನಿಕಗಳು ಆಕಸ್ಮಿಕವಾಗಿ ಸೇರಿದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಸೇರಿಸಿದ್ದಾರೆಯೇ ಎಂಬ ಬಗ್ಗೆ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಇದು ಸಾಮೂಹಿಕ ಆತ್ಮಹತ್ಯೆ ಎಂದು ಹೇಳಲು ಸದ್ಯಕ್ಕೆ ಯಾವುದೇ ಬಲವಾದ ಪುರಾವೆಗಳು ಪೊಲೀಸರಿಗೆ ಸಿಕ್ಕಿಲ್ಲ. ಪೊಲೀಸರು ಮೃತರ ಸಂಬಂಧಿಕರು, ನೆರೆಹೊರೆಯವರು ಮತ್ತು ಕುಟುಂಬದ ಪರಿಚಯಸ್ಥರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ತನಿಖೆಯ ಹೊಸ ಆಯಾಮ:
ಈ ಪ್ರಕರಣದ ತನಿಖೆಯನ್ನು ಈಗ ಕೃಷಿ ಪದ್ಧತಿಗಳಿಗೂ ವಿಸ್ತರಿಸಲಾಗಿದೆ. ಕಲ್ಲಂಗಡಿ ಬೆಳೆಯುವ ಸ್ಥಳಗಳಲ್ಲಿ ಇಲಿಗಳ ಕಾಟವನ್ನು ತಡೆಯಲು ರೈತರು ಅಥವಾ ವ್ಯಾಪಾರಿಗಳು ಈ ರೀತಿಯ ರಾಸಾಯನಿಕಗಳನ್ನು ಬಳಸುತ್ತಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ತೀವ್ರ ತನಿಖೆ ಕೈಗೊಂಡಿದ್ದಾರೆ.
ಹಣ್ಣು ಸೇವಿಸುವ ಮುನ್ನ ಎಚ್ಚರ:
ಒಂದು ವೇಳೆ ಕೃಷಿ ಭೂಮಿಯಲ್ಲಿ ಅಥವಾ ದಾಸ್ತಾನು ಮಳಿಗೆಗಳಲ್ಲಿ ಇಲಿಗಳನ್ನು ಕೊಲ್ಲಲು ‘ಜಿಂಕ್ ಫಾಸ್ಫೈಡ್’ನಂತಹ ರಾಸಾಯನಿಕಗಳನ್ನು ಬಳಸಲಾಗುತ್ತಿದ್ದರೆ, ಅಂತಹ ಹಣ್ಣುಗಳನ್ನು ತೊಳೆಯದೇ ನೇರವಾಗಿ ಕತ್ತರಿಸುವುದರಿಂದ ಹಣ್ಣಿನ ಒಳಗೆ ರಾಸಾಯನಿಕಗಳು ಸೇರುವ ಸಾಧ್ಯತೆ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ಹಣ್ಣಿನ ಸಿಪ್ಪೆಯ ಮೇಲಿದ್ದ ವಿಷದ ಅಂಶವು ಕತ್ತರಿಸುವ ಸಮಯದಲ್ಲಿ ಒಳಗಿನ ಕೆಂಪು ಭಾಗಕ್ಕೆ ಹರಡಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿಲ್ಲ.















ಇನ್ನಷ್ಟು ಸುದ್ದಿಗಳು
ಕೇರಳ ವಿಧಾನಸಭಾ ಚುನಾವಣೆ: 102 ಸ್ಥಾನಗಳಲ್ಲಿ UDF ಗೆ ಭರ್ಜರಿ ಜಯ- LDF ಗೆ ಹೀನಾಯ ಸೋಲು
ಹಜ್ ಯಾತ್ರಿಕರಿಗೆ ಡಿಜಿಟಲ್ ದಾಖಲೆಗಳ ಸೌಲಭ್ಯ- ಪಾಸ್ಪೋರ್ಟ್ಗಳ ಅಗತ್ಯವಿಲ್ಲ
ವೈದ್ಯಕೀಯ-ಇಂಜಿನಿಯರಿಂಗ್ ಕನಸುಗಳಾಚೆಗೆ ನಾಗರಿಕ ಸೇವೆಗಳತ್ತ ಯುವಶಕ್ತಿ ಮುಖ ಮಾಡಲಿ: ಇಕ್ಬಾಲ್ ಬಾಳಿಲ ಕರೆ
ಇಸ್ಲಾಂ ಧರ್ಮ ಮುಸ್ಲಿಮೇತರರ ವಿರೋಧಿಯಲ್ಲ; ಸಹಬಾಳ್ವೆಯೇ ಅದರ ಮೂಲ ಮಂತ್ರ- ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಕರ್ನಾಟಕ ಜಮ್ಇಯ್ಯತುಲ್ ಉಲಮಾ ಮುಶಾವರಕ್ಕೆ ಶಾಫಿ ಸಅದಿ ನೇಮಕ- ಸುಲ್ತಾನುಲ್ ಉಲಮಾ ಘೋಷಣೆ
ಉಳ್ಳಾಲ ದರ್ಗಾ ಆಡಳಿತ ಮಂಡಳಿ ಚುನಾವಣೆ: ಅಧಿಕಾರಿಗಳ ನೇಮಕ ಮಾಡಿದ ವಕ್ಫ್ ಮಂಡಳಿ
ನಾಳೆ (ಮೇ 2): ಪುತ್ತೂರಿನಲ್ಲಿ ‘ಮಾದರಿ ಮದುವೆ ಅಭಿಯಾನ’ ಸಮಾರೋಪ- ಕರ್ನಾಟಕ ಮುಸ್ಲಿಂ ಜಮಾಅತ್ ಯಶಸ್ವಿಗೆ ಕರೆ
ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರ ಆತ್ಮಕಥೆ ‘ಪ್ರೀತಿಯಿಂದ’ ಇಂದು ಬಿಡುಗಡೆ
ನಾಳೆ ‘ಮಾದರಿ ಮದುವೆ ಅಭಿಯಾನ’ ಸಮಾರೋಪ : ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ಯಶಸ್ವಿಗೆ ಕರೆ
ಎಸ್ವೈಎಸ್ ಮಾದರಿ ಮದುವೆ ಅಭಿಯಾನ: ನಾಳೆ ಪುತ್ತೂರಿನಲ್ಲಿ ಸಮಾರೋಪ ಸಮ್ಮೇಳನ